ನಾಂದೇಡ್: ಕಾಂಗ್ರೆಸ್‌ನ ‘ಭಾರತ್ ಜೋಡೋ ಯಾತ್ರೆ’ ಮಹಾರಾಷ್ಟ್ರಕ್ಕೆ ಬಂದ ನಂತರ, ರಾಜಕೀಯ ಮುಖಂಡರು, ಕಲಾವಿದರು ಮತ್ತು ಲೇಖಕರು ಕೂಡ ರಾಹುಲ್ ಗಾಂಧಿಯನ್ನು ಭೇಟಿ ಮಾಡುತ್ತಿದ್ದಾರೆ. ನಟಿ ಪೂಜಾ ಭಟ್ ಅವರನ್ನು ಭೇಟಿ ಮಾಡಿದ ನಂತರ ಬಾಲಿವುಡ್ ನಟ ಸುಶಾಂತ್ ಸಿಂಗ್ ಕೂಡ ‘ಭಾರತ್ ಜೋಡೋ ಯಾತ್ರೆ’ಯಲ್ಲಿ ಭಾಗವಹಿಸಿದ್ದರು.
‘ಭಾರತ್ ಜೋಡೋ ಯಾತ್ರೆ’ ವೇದಿಕೆಯಲ್ಲಿಂದು ಮಾತನಾಡಿದ ಅವರು, ಬಿಜೆಪಿಯ ಹೆಸರು ಹೇಳದೆಯೇ ವಾಗ್ದಾಳಿ ನಡೆಸಿದರು. ದೇಶದಲ್ಲಿ ಕೆಲವರು ದ್ವೇಷ ಹರಡುತ್ತಿದ್ದಾರೆ ಎಂದು ಬಿಜೆಪಿಯನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ಆದರೆ ಈ ಎಲ್ಲ ದ್ವೇಷದ ರಾಜಕಾರಣದಲ್ಲಿ ಪ್ರೀತಿಯ ಹಾದಿ ಹಿಡಿಯುವುದು ಕಷ್ಟವಾದದ್ದು, ರಾಹುಲ್ ಗಾಂಧಿ ಪ್ರೀತಿಯ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ರಾಹುಲ್ ಗಾಂಧಿ ಅವರೊಂದಿಗೆ ಸಂವಾದ ನಡೆಸಿದ ಸುಶಾಂತ್, “ಗೆಲುವಿನ ಅವಶ್ಯಕತೆಯಿದೆ, ನಂಬಿಕೆ ಕಳೆದುಕೊಳ್ಳದೆ ಕೊನೆಯವರೆಗೂ ಹೋರಾಡುವುದು ಅಗತ್ಯವಾಗಿದೆ. ಏಕೆಂದರೆ ಅದರ ನಂತರ ನಾವು ಖಂಡಿತವಾಗಿಯೂ ಗೆಲುವು ಸಾಧಿಸುತ್ತೇವೆ” ಎಂದು ಹೇಳಿದರು.
Related Articles
ಈ ದೇಶವನ್ನು ಸಾಂವಿಧಾನಿಕವಾಗಿ ನಡೆಸಲು ಪ್ರಯತ್ನಿಸುತ್ತಿರುವವರು ಗೆಲ್ಲುತ್ತಾರೆ ಎಂದು ನಂಬಿಕೆ ವ್ಯಕ್ತಪಡಿಸಿದರು. ಇವತ್ತಲ್ಲದಿದ್ದರೂ ನಾಳೆ ನಮ್ಮದೇ ಗೆಲುವು ಎಂದು ಅವರು ಅಭಿಪ್ರಾಯಪಟ್ಟರು.
ನಟ ಸುಶಾಂತ್ ಸಿಂಗ್ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸುವ ಮುನ್ನ ನಟಿ ಪೂಜಾ ಭಟ್ ಕೂಡ ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ ನಂತರ ಸುಶಾಂತ್ ಸಿಂಗ್ ಟ್ವೀಟ್ ಮಾಡಿ, ನೀವು ಕೇವಲ ಮಾತನಾಡುತ್ತಿಲ್ಲ, ನಿಮ್ಮ ವಿಚಾರದಲ್ಲಿ ನೀವು ದೃಢವಾಗಿ ನಿಲ್ಲುತ್ತೀರಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದೀರಿ ಎಂದು ಬರೆದುಕೊಂಡಿದ್ದಾರೆ.