Advertisement

ಸಾವಿತ್ರಿ-ಶ್ರೀನಿವಾಸ ರಾವ್‌ ದಂಪತಿಗೆ ಬೋಳಂತಕೋಡಿ ಕನ್ನಡ ಪ್ರಶಸ್ತಿ

12:15 PM Dec 12, 2018 | |

ನಗರ: ಕನ್ನಡ ಸಾಹಿತ್ಯ ಪರಿಚಾರಕರು ಮತ್ತು ಮಕ್ಕಳಲ್ಲಿ ಅಕ್ಷರ ಪ್ರೀತಿ ಮೂಡಿಸುವ ಮಂಗಳೂರಿನ ಬಿ. ಶ್ರೀನಿವಾಸ ರಾವ್‌ ಮತ್ತು ಸಾವಿತ್ರಿ ಎಸ್‌. ರಾವ್‌ ದಂಪತಿ ಈ ಸಾಲಿನ ಬೋಳಂತಕೋಡಿ ಕನ್ನಡ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Advertisement

ಡಿ. 15ರಂದು ಸಂಜೆ ನಗರದ ಟೌನ್‌ ಬ್ಯಾಂಕ್‌ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪುತ್ತೂರಿನ ಬೋಳಂತಕೋಡಿ ಅಭಿಮಾನಿ ಬಳಗವು ಆಯೋಜಿಸುವ ಸಮಾರಂಭದಲ್ಲಿ ಪುತ್ತೂರು ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಬೋಳಂತಕೋಡಿ ಈಶ್ವರ ಭಟ್ಟರ ಸಂಸ್ಮರಣೆ ನಡೆಯಲಿದೆ.

ಸಮಾರಂಭದ ಅಧ್ಯಕ್ಷತೆಯನ್ನು ಉದ್ಯಮಿ ಎಂ.ಎಸ್‌. ರಘುನಾಥ್‌ ರಾವ್‌ ವಹಿಸಲಿದ್ದಾರೆ. ನ್ಯಾಯವಾದಿ ಕೆ.ಆರ್‌. ಆಚಾರ್ಯರು ಬೋಳಂತಕೋಡಿ ಅವರ ಸ್ಮತಿ ನಮನ ಮಾಡಲಿದ್ದಾರೆ. ಪ್ರಶಸ್ತಿ ಪುರಸ್ಕೃತರ ಕುರಿತು ಸುಮಂಗಲಾ ರತ್ನಾಕರ್‌ ಅಭಿನಂದನ ನುಡಿಗಳನ್ನಾಡಲಿದ್ದಾರೆ. ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ| ಪೀಟರ್‌ ವಿಲ್ಸನ್‌ ಪ್ರಭಾಕರ್‌ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ಘಟಕದ ಅಧ್ಯಕ್ಷ ಬಿ. ಐತ್ತಪ್ಪ ನಾಯ್ಕ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಮಾರಂಭದ ಬಳಿಕ ಧೀಃಶಕ್ತಿ ಮಹಿಳಾ ಯಕ್ಷಬಳಗ ಪುತ್ತೂರು ಇವರಿಂದ ತಾಳಮದ್ದಳೆ ನಡೆಯಲಿದೆ.

ಪ್ರಶಸ್ತಿ ಪುರಸ್ಕೃತರ ಪರಿಚಯ
ಮಂಗಳೂರಿನ ಬಿ. ಶ್ರೀನಿವಾಸ ರಾವ್‌ ಮತ್ತು ಸಾವಿತ್ರಿ ಎಸ್‌. ರಾವ್‌ ದಂಪತಿಗೆ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿಯನ್ನು ಮೂಡಿಸುವ ಕನ್ನಡ ಕಾಯಕ. ಬದಲಾದ ಕಾಲಘಟ್ಟದಲ್ಲಿ ಮಕ್ಕಳಲ್ಲಿ ಅಕ್ಷರ ಪ್ರೀತಿ ಮರೀಚಿಕೆಯಾಗಿದ್ದು, ಶಿಕ್ಷಣದ ಅಡಿಗಟ್ಟು ಪ್ರಾಥಮಿಕ -ಪ್ರೌಢ ಶಿಕ್ಷಣದಲ್ಲಿರುವುದನ್ನು ಮನಗಂಡ ಇವರು ವಿದ್ಯಾರ್ಥಿಗಳಿಗಾಗಿ ಕಥೆ, ಕವನಗಳ ಸಂಕಲನ, ಸಾಹಿತ್ಯಾಭಿರುಚಿ ಮತ್ತು ಓದುವ ಹವ್ಯಾಸವನ್ನು ರೂಢಿಸುವ ಸಾಹಿತ್ಯ ಶಿಬಿರಗಳು, ಮಕ್ಕಳ ಪ್ರತಿಭೆಗಳ ಮುಖವಾಗಿರುವ ಶಾಲಾ ಸಂಚಿಕೆಗಳ ಸ್ಪರ್ಧೆ, ಮಕ್ಕಳ ಸಾಹಿತಿಗಳಿಗೆ ಪ್ರೋತ್ಸಾಹ, ಕವಿ ಕಾವ್ಯ ಗಾಯನ, ಮಕ್ಕಳ ನಾಟಕೋತ್ಸವ, ಮಕ್ಕಳ ಮೇಳ, ಮಕ್ಕಳ ಸಾಹಿತ್ಯ ವಿಚಾರಗೋಷ್ಠಿ, ಪುಸ್ತಕ ಪ್ರದರ್ಶನ ಹೀಗೆ ವಿವಿಧ ಕಲಾಪಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಪುಸ್ತಕ ಹಬ್ಬ 
ಟೌನ್‌ ಬ್ಯಾಂಕ್‌ ಸಭಾಂಗಣದಲ್ಲಿ ಡಿ. 14ರಿಂದ 16ರ ತನಕ ದಿನಪೂರ್ತಿ ಪುಸ್ತಕ ಹಬ್ಬ ಜರಗಲಿದ್ದು ಪುಸ್ತಕ ಪ್ರದರ್ಶನ -ಮಾರಾಟ ವ್ಯವಸ್ಥೆಯಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next