Advertisement

ಬೋಳ ಪಾಲಿಂಗೇರಿ ವೆಂಟೆಡ್‌ ಡ್ಯಾಂ ಕಾಮಗಾರಿ ಶುರು

01:00 AM Mar 21, 2019 | Harsha Rao |

ಬೆಳ್ಮಣ್‌: ಬೋಳ ಹಾಗೂ ಕಡಂದಲೆ ವ್ಯಾಪ್ತಿಯ ಸುಮಾರು ಸಾವಿರ ಎಕರೆ ಕೃಷಿ ಭೂಮಿಗೆ ಆಧಾರವಾಗಬಲ್ಲ 2.75 ಕೋಟಿ ರೂ. ಅಂದಾಜು ವೆಚ್ಚದ ಬೋಳ ಪಾಲಿಂಗೇರಿ ಶಾಂಭವಿ ನದಿ ವೆಂಟೆಡ್‌ ಡ್ಯಾಂನ ಕಾಮಗಾರಿ ಆರಂಭವಾಗಿದ್ದು ಮಳೆಗಾಲದ ಮೊದಲು ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

Advertisement

ಸೇತುವೆ ಸಹಿತ ಅಣೆಕಟ್ಟು
ಸಣ್ಣ ನೀರಾವಿ ಇಲಾಖೆಯ ಅನುದಾನದಿಂದ ನಡೆಯುವ ಈ ಅಣೆಕಟ್ಟುವಿನ ಜತೆ ಸೇತುವೆಯನ್ನೂ ನಿರ್ಮಿಸಲಾಗುತ್ತಿದೆ. ಈ ವರೆಗೆ ಬೋಳದ ಅಂಡಮಾನ್‌ ಎಂದು ಕರೆಯಲ್ಪಡುತ್ತಿದ್ದ ಅಂಬರಾಡಿಗೆ ಈ ಹಿಂದೆ ಬೋಳದಿಂದ ಸುಮಾರು 5-6 ಕಿ.ಮೀ ದೂರವಿತ್ತು. ಮುಂದಿನ ದಿನಗಳಲ್ಲಿ ಅಣೆಕಟ್ಟು ನಿರ್ಮಾಣದಿಂದ ಅಂಬರಾಡಿ-ಬಾನಂಗಡಿ ರಸ್ತೆಮೂಲಕ ಕೇವಲ 500 ಮೀ. ನಷ್ಟು ಕ್ರಮಿಸಿ ಅಂಬರಾಡಿ ತಲುಪಬಹುದಾಗಿದೆ. ಬೋಳ ಮುಗುಳಿ ಬ್ರಹ್ಮಲಿಂಗೇಶ್ವರ ದೇಗುಲಕ್ಕೂ ಇದು ಹತ್ತಿರದ ಮಾರ್ಗವಾಗಲಿದೆ.

ಕಡಂದಲೆ-ಬೋಳ ಇನ್ನು ಸದಾ ಹಸಿರು
ಶಾಂಭವಿ ನದಿಯ ಈ ಅಣೆಕಟ್ಟು ಈ ಮಳೆಗಾಲದ ಮೊದಲು ಪೂರ್ತಿಗೊಂಡು ಮುಂದಿನ ಬೇಸಗೆಯಲ್ಲಿ ನೀರು ಸಂಗ್ರಹಿಸಿ ಕಡಂದಲೆ ಹಾಗೂ ಬೋಳದ ಸಾವಿರಾರು ಎಕರೆ ಕೃಷಿ ಭೂಮಿಗೆ ಆಧಾರವಾಗಬಲ್ಲದು. ಈ ಮೂಲಕ ಈ ಭಾಗದ ಕೃಷಿ ಭೂಮಿ ಸದಾ ಹಸಿರಾಗುವುದರಲ್ಲಿ ಸಂಶಯವಿಲ್ಲ. ಈ ಭಾಗದ ಬಾವಿಗಳಲ್ಲಿಯೂ ನೀರಿನ ಒರತೆ ಹೆಚ್ಚಾಗಲಿದ್ದು ಕುಡಿಯುವ ನೀರಿನ ಸಮಸ್ಯೆಯೂ ದೂರವಾಗಲಿದೆ.

ನಿರ್ವಹಣೆಯೂ ಸರಳ
ಈ ಕಾಮಗಾರಿಯನ್ನು ಕುಂದಾಪುರ ಮೂಲದ ಜಿ.ಗೋಕುಲ ಹೆಗ್ಡೆಯವರು ವಹಿಸಿಕೊಂಡಿದ್ದು ಅಣೆಕಟ್ಟುವಿಗೆ ಕಬ್ಬಿಣದ ಹಲಗೆಗಳನ್ನು ಅಳವಡಿಸ ಲಾಗುವುದಲ್ಲದೆ ನಿರ್ವಹಣೆಯೂ ಸರಳವಾಗಿರುತ್ತದೆ ಎಂದಿದ್ದಾರೆ. ಮಳೆಗಾಲದ ಮೊದಲು ಕಾಮಗಾರಿ ಮುಗಿಯುವ ಸಾಧ್ಯತೆ ಇದ್ದು ಬಂಡೆಯ ಮೇಲೆಯೇ ಅಣೆಕಟ್ಟು ನಿರ್ಮಿಸಬೇಕಾಗಿರುವುದರಿಂದ ಕಾಮಗಾರಿ ತುಸು ನಿಧಾನಗೊಳ್ಳುವ ಸಾಧ್ಯತೆ ಇದೆ ಎಂದು  ಕಾಮಗಾರಿಯ ಮೇಲ್ವಿಚಾರಕ ಗುರುರಾಜ್‌ ತಿಳಿಸಿದ್ದಾರೆ. ಕಾಮಗಾರಿ ಮುಗಿದ ಕೂಡಲೇ ನೀರು ನಿಲ್ಲಿಸಿ ಸಣ್ಣ ನೀರಾವರಿ ಇಲಾಖೆಗೆ ಹಸ್ತಾಂತರಿಸಿದ ಬಳಿಕ ಉದ್ಘಾಟನೆ ನಡೆಯಲಿದೆ. ಈ ಮೂಲಕ ಬೋಳ ಗ್ರಾಮದ ನೀರಿನ ಬವಣೆಯನ್ನು ನಿವಾರಿಸಲಿದೆ.

ಕೃಷಿಭೂಮಿಗೆ ನೀರು
ಬೋಳ ಪಾಲಿಂಗೇರಿಯ 2.25 ಕೋಟಿ ರೂ. ವೆಚ್ಚದ ಅಣೆಕಟ್ಟು ಗ್ರಾಮದ ಕೃಷಿಭೂಮಿಗೆ ನೀರುಣಿಸಲಿದೆ. ಪಂಚಾಯತ್‌ ವ್ಯಾಪ್ತಿಯಲ್ಲಿ ಸಂಕಮಾರು ವಾರ್ಡ್‌ ಹೊರತು ಪಡಿಸಿ ಎಲ್ಲೂ ನೀರಿನ ಸಮಸ್ಯೆ ಇಲ್ಲ. ಈ ವಾರ್ಡ್‌ಗೆ ಶಾಂಭವೀ ನದಿಯಲ್ಲಿ ಬಾವಿ ತೋಡಿ ನೀರು ಪೂರೈಸುವ ಬಗ್ಗೆ ಯೋಜನೆ ಇದೆ. 
-ಬೋಳ ಸತೀಶ್‌ ಪೂಜಾರಿ,  ಬೋಳ ಗ್ರಾ.ಪಂ. ಅಧ್ಯಕ್ಷ

Advertisement

–  ಶರತ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next