Advertisement

ಸ್ನೇಹಿತನಿಗಾಗಿ ಸಾಹಸ : 1400 ಕಿ.ಮೀ ಪ್ರಯಾಣಿಸಿ ಆಕ್ಸಿಜನ್ ತಂದ ಶಿಕ್ಷಕ

01:59 PM Apr 29, 2021 | Team Udayavani |

ಉತ್ತರ ಪ್ರದೇಶ : ಸ್ನೇಹಿತನ ಪ್ರಾಣ ಉಳಿಸಲು ವ್ಯಕ್ತಿಯೋರ್ವ 1400 ಕಿ.ಮೀ ಪ್ರಯಾಣಿಸಿ, ನಿಗದಿತ ಸಮಯದಲ್ಲಿ ಆಕ್ಸಿಜನ್ ಸಿಲೆಂಡರ್ ತಲುಪಿಸಿದ್ದಾನೆ. ಸ್ನೇಹಕ್ಕಾಗಿ ಈ ಸಾಹಸ ಮಾಡಿದವನ ಹೆಸರು ದೇವೇಂದ್ರ.

Advertisement

ಜಾರ್ಖಂಡ್‍ನ ಬೊಕಾರೊ ಪ್ರದೇಶದ ನಿವಾಯಿಸಿಯಾಗಿರುವ 38 ವರ್ಷದ ದೇವೇಂದ್ರ ವೃತ್ತಿಯಲ್ಲಿ ಶಿಕ್ಷಕ. ಉತ್ತರ ಪ್ರದೇಶದ ನೊಯ್ಡಾದಲ್ಲಿ ಈತನ ಸ್ನೇಹಿತ ಕೋವಿಡ್‍ ಸೋಂಕು ತಗುಲಿ ನರಳುತ್ತಿದ್ದ. ಈತನಿಗೆ ತುರ್ತಾಗಿ ಆಕ್ಸಿಜನ್ ಅವಶ್ಯಕತೆ ಎದುರಾಗಿತ್ತು. ನೊಯ್ಡಾದಲ್ಲಿ ಆಕ್ಸಿಜನ್ ಸಿಗದೆ ಇದ್ದಾಗ, ಆತನ ಪೋಷಕರು ದೇವೇಂದ್ರನಿಗೆ ವಿಷಯ ಮುಟ್ಟಿಸಿದ್ದಾರೆ.

ಸ್ನೇಹಿತ ಜೀವನ್ಮರಣ ಹೋರಾಟ ನಡೆಸುತ್ತಿರುವ ಸುದ್ದಿ ಕಿವಿಗೆ ಬೀಳುತ್ತಲೆ ಪಾದರಸದಂತಾದ ದೇವೇಂದ್ರ, ಜಾರ್ಖಂಡಿನಲ್ಲಿ ಆಕ್ಸಿಜನ್ ಸಿಲಿಂಡರಿಗಾಗಿ ತಡಕಾಡಿದ್ದಾನೆ. ಕೊನೆಗೆ 10,000 ಭದ್ರತಾ ಠೇವಣಿ ಪಾವತಿಸಿ ಆಮ್ಲಜನಕ ಸಿಲಿಂಡರ್ ಪಡೆದುಕೊಂಡಿದ್ದಾನೆ.

ಆಕ್ಸಿಜನ್ ಸಿಲಿಂಡರ್ ಸಮೇತ ತನ್ನ ಸ್ವಂತ ಕಾರಿನಲ್ಲಿ ಭಾನುವಾರ ಮಧ್ಯಾಹ್ನ 1.30 ಗಂಟೆಗೆ ಜಾರ್ಖಂಡಿನಿಂದ ಪ್ರಯಾಣ ಆರಂಭಿಸಿದ ಸಾಹಸಿ, 24 ಗಂಟೆಗಳಲ್ಲಿ ಉತ್ತರ ಪ್ರದೇಶದ ನೊಯ್ಡಾದಲ್ಲಿರುವ ಆಸ್ಪತ್ರೆಗೆ ಬಂದು ತಲುಪಿದ್ದಾನೆ.

ಪ್ರಯಾಣದ ನಡುವೆಯೇ ಐದತ್ತು ನಿಮಿಷ ವಿಶ್ರಾಂತಿ ಪಡೆದ ದೇವೇಂದ್ರ, ಸ್ನೇಹಿತನಾಗಿ ದೀರ್ಘ ಪ್ರಯಾಣ ಕೈಗೊಂಡಿದ್ದಾನೆ. ಮಾರ್ಗಮಧ್ಯ ಬಿಹಾರ್ ಹಾಗೂ ಉತ್ತರ ಪ್ರದೇಶದ ಪೊಲೀಸರು ತಪಾಸಣೆ ನಡೆಸಿದಾಗ, ಅವರಿಗೆ ನಿಜಾಂಶ ಮನವರಿಕೆ ಮಾಡಿ, ಮತ್ತೆ ಪ್ರಯಾಣ ಬೆಳೆಸಿದ್ದಾನೆ.

Advertisement

ಇನ್ನು ಈ ಬಗ್ಗೆ ಮಾತನಾಡಿರುವ ದೇವೇಂದ್ರ, ನನಗೆ ನನ್ನ ಸ್ನೇಹಿತನ ಪ್ರಾಣ ಮುಖ್ಯವಾಗಿತ್ತು. ಆತನಿಗಾಗಿ ಎಂತಹ ತ್ಯಾಗಕ್ಕೂ ಸಿದ್ಧನಾಗಿದ್ದೆ. ಇದೀಗ ಆತನ ಆರೋಗ್ಯದಲ್ಲಿ ಸ್ಥಿರತೆ ಇದೆ, ಶೀಘ್ರವೇ ಗುಣಮುಖರಾಗಲಿದ್ದಾನೆ ಎಂದು ವೈದ್ಯರು ಭರವಸೆ ನೀಡಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next