ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನೂತನವಾಗಿ ನಿರ್ಮಿಸಿದ್ದ ಬಾಯ್ಲರ್ ಸ್ಫೋಟಗೊಂಡು, ನಾಲ್ವರು ಕಾರ್ಮಿಕರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಕಾರ್ಖಾನೆ ಆವರಣದಲ್ಲಿ ಭಾರಿ ಪ್ರಮಾಣದ ಬೆಂಕಿ, ಹೊಗೆ ಆವರಿಸಿದೆ.
ಕೃಷ್ಣಾ ನಗರದಲ್ಲಿರುವ ನಂದಿ ಸಹಕಾರ ಕಾರ್ಖಾನೆಯಲ್ಲಿ ಪುಣೆ ಮೂಲದ ಎಸ್.ಎಸ್.ಎಂಜಿನಿಯರ್ಸ್ ಎಂಬ ಸಂಸ್ಥೆ ಬಾಯ್ಲರ್ ಅಳವಡಿಸುವ ಕೆಲಸ ಮಾಡಿತ್ತು. ಶನಿವಾರ ಪ್ರಾಯೋಗಿಕ ಪರೀಕ್ಷೆ ನಡೆಸುವ ವೇಳೆ ಬಾಯ್ಲರ್ ಸ್ಫೋಟಗೊಂಡಿದೆ. ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿ ನಂದಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.
220 ಟನ್ ಸಾಮರ್ಥ್ಯದ ಬಾಯ್ಲರ್ ನಿಮಾರ್ಣಕ್ಕೆ 51 ಕೋಟಿ ರೂ. ವೆಚ್ಚ ಮಾಡಲಾಗಿದೆ. ಪುಣೆ ಮೂಲದ ಸಂಸ್ಥೆಗೆ ಸದರಿ ಬಾಯ್ಲರ್ ನಿರ್ಮಾಣಕ್ಕೆ ಮುನ್ನ ದೆಹಲಿ ಮೂಲದ ಐಎಸ್‍ಜಿಸಿ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಆದರೆ ದೆಹಲಿ ಕಂಪನಿಗೆ ಗುತ್ತಿಗೆ ರದ್ದು ಮಾಡಿ, ಪುನೆ ಮೂಲದ ಸಂಸ್ಥೆಗೆ ಬಾಯ್ಲರ್ ನಿರ್ಮಾಣದ ಹೊಣೆ ನೀಡಲಾಗಿತ್ತು.
ಗುತ್ತಿಗೆ ರದ್ದು ಮಾಡಿದ್ದರಿಂದ ದೆಹಲಿ ಕಂಪನಿಗೆ ಸಕ್ಕರೆ ಕಾರ್ಖಾನೆಯಿಂದ 5 ಕೋಟಿ ರೂ. ದಂಡವನ್ನೂ ಪಾವತಿಸಿದೆ ಎಂದು ತಿಳಿದು ಬಂದಿದೆ. ಅಲ್ಲದೇ ಪುಣೆ ಮೂಲದ ಕಂಪನಿ ಕಳಪೆ ಕಾಮಗಾರಿ ಮಾಡಿರುವುದೇ ಈ ದುರಂತಕ್ಕೆ ಕಾರಣ ಎಂದು ರೈತರು ಆರೋಪಿಸುತ್ತಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿರುವ ಬಬಲೇಶ್ವರ ಠಾಣೆ ಪೊಲೀಸರು, ತನಿಖೆ ಆರಂಭಿಸಿದ್ದಾರೆ.