Advertisement

ಅಕ್ಷರ ದಾಸೋಹಕ್ಕೆ ಕುಚ್ಚಲಕ್ಕಿ ಕೊರತೆ: ದ.ಕ. 9, 10ನೇ ಮಕ್ಕಳಿಗೆ ಬೆಳ್ತಿಗೆ ಅನ್ನವೇ ಗತಿ

12:02 AM Feb 17, 2023 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅಕ್ಷರ ದಾಸೋಹದಡಿ ಪ್ರೌಢಶಾಲಾ ಮಕ್ಕಳಿಗೆ (9, 10ನೇ ತರಗತಿ) ಪೂರೈಕೆಯಾಗುತ್ತಿದ್ದ ಕುಚ್ಚಲಕ್ಕಿ ಕೊರತೆಯ ಹಿನ್ನೆಲೆಯಲ್ಲಿ ಒಂದು ತಿಂಗಳಿನಿಂದೀಚೆಗೆ ಬೆಳ್ತಿಗೆ ಊಟ ವಿತರಿಸಲಾಗುತ್ತಿದೆ.

Advertisement

ದ.ಕ.ದಲ್ಲಿ ಕುಚ್ಚಲಕ್ಕಿಯೇ ಹೆಚ್ಚಾಗಿ ಬಳಕೆಯಲ್ಲಿರುವ ಕಾರಣ ಬೇಡಿಕೆ ಮೇರೆಗೆ ಕಳೆದ ವರ್ಷದಿಂದ ಅಕ್ಷರ ದಾಸೋಹಕ್ಕೂ ಕುಚ್ಚಲಕ್ಕಿ ಪೂರೈಸಲಾಗುತ್ತಿತ್ತು. ನಿತ್ಯವೂ ಜಿಲ್ಲೆಯ 9, 10ನೇ ತರಗತಿಯ 33,652 ಮಕ್ಕಳು ಬಿಸಿಯೂಟ ಸೇವಿಸುತ್ತಿದ್ದಾರೆ.

ಆದರೆ ಭಾರತೀಯ ಆಹಾರ ನಿಗಮ (ಎಫ್‌ಐಸಿ)ದಿಂದ ಕುಚ್ಚಲಕ್ಕಿ ಪೂರೈಕೆಯಲ್ಲಿ ಕೊರತೆಯಾಗಿದೆ. ಜತೆಗೆ ಟೆಂಡರ್‌ ಮೂಲಕ ಖರೀದಿಗೆ ನಿಗದಿತ ಬಜೆಟ್‌ ಸರಿದೂಗದ ಕಾರಣ ರಾಜ್ಯ ಸರಕಾರವು ಬೆಳ್ತಿಗೆ ಅಕ್ಕಿಯನ್ನೇ ಪೂರೈಸಿದೆ.

ಎಫ್‌ಐಸಿಯಿಂದ 1ರಿಂದ 8ನೇ ತರಗತಿ ವರೆಗೆ ಉಚಿತವಾಗಿ ಹಾಗೂ ಹೈಸ್ಕೂಲ್‌ ಮಕ್ಕಳಿಗೆ ಕೆ.ಜಿಗೆ 26 ರೂ. ದರದಲ್ಲಿ ಕುಚ್ಚಲಕ್ಕಿ ಪೂರೈಸಲಾಗುತ್ತಿತ್ತು. ಈಗ ಕುಚ್ಚಲಕ್ಕಿ ಟೆಂಡರ್‌ ಮೂಲಕ 34 ರೂ. ಪಾವತಿಸಬೇಕಾಗಿದೆ. ಹಾಗಾಗಿ ಇಲಾಖೆ ಬೆಳ್ತಿಗೆಯನ್ನು ಕೆಜಿಗೆ 30 ರೂ. ದರದಲ್ಲಿ ಖರೀದಿಸಿ ಪೂರೈಸಲಾಗುತ್ತಿದೆ.

ಹಾಲಿನ ಪುಡಿಯೂ ಕೊರತೆ
ಈ ಮಧ್ಯೆ ಶಾಲಾ ಮಕ್ಕಳಿಗೆ ಕ್ಷೀರ ಭಾಗ್ಯಕ್ಕಾಗಿ ಕೆಎಂಎಫ್‌ನಿಂದ ಹಾಲಿನ ಪುಡಿ ಪೂರೈಕೆಯಲ್ಲೂ ಕೊರತೆ ಉಂಟಾಗಿದೆ. 10 ದಿನಗಳಿಂದ ಕ್ಷೀರ ಭಾಗ್ಯಕ್ಕೆ ಹಾಲಿನ ಪುಡಿ ಸಮಸ್ಯೆ ಎದುರಾಗಿದೆ. ಜಿಲ್ಲೆಯಲ್ಲಿ ನಿತ್ಯವೂ 1,52,246 ಶಾಲಾ ಮಕ್ಕಳು ಈ ಪ್ರಯೋಜನ ಪಡೆಯುತ್ತಿದ್ದರು.

Advertisement

ಉಡುಪಿ ಶಾಲೆಗಳಲ್ಲಿ ಕುಚ್ಚಲಕ್ಕಿಗೆ ಬೇಡಿಕೆ ಇಲ್ಲ
ದ.ಕ. ಜಿಲ್ಲೆಯಲ್ಲಿ ಮಾತ್ರ ಅಕ್ಷರ ದಾಸೋಹಕ್ಕೆ ಕುಚ್ಚಲಕ್ಕಿಗೆ ಬೇಡಿಕೆ ಇದೆ, ಉಡುಪಿಯಲ್ಲಿ ಬೇಡಿಕೆ ಇರದ ಕಾರಣ, ಹಿಂದಿನಿಂದಲೂ ಬೆಳ್ತಿಗೆ ಅಕ್ಕಿಯನ್ನೇ ಪೂರೈಸಲಾಗುತ್ತಿದೆ.

ಕರಾವಳಿಯ ಮಕ್ಕಳಿಗೆ ಕುಚ್ಚಲಕ್ಕಿ ನೀಡಬೇಕೆಂಬ ಪೋಷಕರ ಆಗ್ರಹದ ಮೇರೆಗೆ ಕುಚ್ಚಲಕ್ಕಿ ಅನ್ನ ನೀಡಲಾಗುತ್ತಿತ್ತು. ಈಗ ಕೊರತೆ ಹಾಗೂ ಬಜೆಟ್‌ ಹೊಂದಾಣಿಕೆಯ ಸಮಸ್ಯೆ ಕಾರಣಕ್ಕೆ ಬೆಳ್ತಿಗೆ ಅನ್ನ ನೀಡುವುದು ಸರಿಯಲ್ಲ. ಕುಚ್ಚಲಕ್ಕಿಹಾಗೂ ಹಾಲಿನ ಪುಡಿ ಕೊರತೆ ನೀಗಿಸಲು ಇಲಾಖೆ ತತ್‌ಕ್ಷಣ ಕ್ರಮ ಕೈಗೊಳ್ಳಬೇಕು.
– ಮೊದಿನ್‌ ಕುಟ್ಟಿ, ಅಧ್ಯಕ್ಷರು, ಕರ್ನಾಟಕ ರಾಜ್ಯ ಎಸ್‌ಡಿಎಂಸಿ ಸಮನ್ವಯ ವೇದಿಕೆ

ಕೊರತೆ ಹಿನ್ನೆಲೆಯಲ್ಲಿ ಎಫ್‌ಐಸಿ ಪೂರೈಸುತ್ತಿದ್ದ ಕುಚ್ಚಲಕ್ಕಿ ಡಿಸೆಂಬರ್‌ನಿಂದ ಸ್ಥಗಿತವಾಗಿದೆ. ಕುಚ್ಚಲಕ್ಕಿ ಕೆಜಿಗೆ 34 ರೂ.ಗೂ
ಹೆಚ್ಚು ದರವಿದ್ದು, ನಮ್ಮ 26 ರೂ. ಬಜೆಟ್‌ ಸಾಕಾಗದು. ಹಾಗಾಗಿ ಕೆಜಿಗೆ 30 ರೂ.ನಂತೆ ಬೆಳ್ತಿಗೆ ಖರೀದಿಸಲಾಗಿದೆ. ಕೆಎಂಎಫ್‌ನಿಂದ ಹಾಲಿನ ಪುಡಿ ಪೂರೈಕೆಯಲ್ಲೂ ವ್ಯತ್ಯಯವಾಗಿದ್ದರೂ ಹಲವು ತಾಲೂಕುಗಳಲ್ಲಿ ಪೂರೈಕೆ ಆರಂಭಗೊಂಡಿದೆ. ಕೆಲವೆಡೆ ಅಲ್ಪ ಸ್ವಲ್ಪ ದಾಸ್ತಾನು ಇರುವ ಶಾಲೆಗಳಿಂದ ತರಿಸಿಕೊಂಡು ಹಾಲು ವಿತರಿಸಲಾಗುತ್ತಿದೆ.
– ಡಾ| ಉಷಾ ಎನ್‌. ಶಿಕ್ಷಣಾಧಿಕಾರಿ, ಅಕ್ಷರದಾಸೋಹ, ದ.ಕ. ಜಿಲ್ಲೆ

–  ಸತ್ಯಾ ಕೆ.

Advertisement

Udayavani is now on Telegram. Click here to join our channel and stay updated with the latest news.

Next