Advertisement
ಗುರುವಾರವಷ್ಟೇ ನಡೆದ ರಕ್ಷಣಾ ವಿಚಾರಗಳನ್ನು ಪರಿಶೀಲಿಸುವ ಸಂಸ ದೀಯ ಸಮತಿ ಸಭೆಯಲ್ಲಿ ಬಿಜೆಪಿ ನಾಯಕ ನಿಶಿಕಾಂತ್ ದುಬೆ, ಬಿಜೆಡಿ ನಾಯಕ ಭಾತೃìಹರಿ ಮಹ್ತಾಬ್ ಸಹಿತ ಹಲವು ಸಂಸದರು ಈ ಬಗ್ಗೆ ಪ್ರಸ್ತಾವಿಸಿದ್ದಾರೆ. ಬೊಫೋರ್ಸ್ ಹಗರಣದ ವಿಚಾರಣೆ ರದ್ದುಗೊಳಿಸಿ 2005 ರಲ್ಲಿ ದಿಲ್ಲಿ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕಾಗಿ ಕೇಂದ್ರಕ್ಕೆ ಮನವಿ ಮಾಡುವಂತೆಯೂ ಸಿಬಿಐಗೆ ಸಲಹೆ ನೀಡಿದ್ದಾರೆ. ಬಳಿಕ, ಈ ಕುರಿತು ಏನು ಕ್ರಮ ಕೈಗೊಳ್ಳಲಾಯಿತು ಎಂದು ವಿವರಿಸಿ 2 ವಾರಗಳೊಳಗೆ ಸಂಸದೀಯ ಸಮಿತಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸಿಬಿಐಗೆ ಸೂಚಿಸಿದ್ದಾರೆ. ಬಿಜೆಪಿ ನಾಯಕರ ವಿರುದ್ಧ ಇರುವ ಅಯೋಧ್ಯೆ ವಿವಾದಿತ ಕಟ್ಟಡ ಧ್ವಂಸ ಪ್ರಕರಣಕ್ಕೆ ಮರುಜೀವ ಕೊಡಬಹುದು ಎಂದಾದರೆ, ಬೊಫೋರ್ಸ್ ಹಗರಣದ ವಿಚಾರಣೆಯನ್ನು ಏಕೆ ಮುಂದುವರಿಸಬಾರದು ಎಂದು ಇದೇ ವೇಳೆ ದುಬೆ ಪ್ರಶ್ನಿಸಿದ್ದಾರೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
Related Articles
1987ರಲ್ಲಿ ಭಾರತ ಮತ್ತು ಸ್ವೀಡನ್ 1.4 ಶತಕೋಟಿ ಡಾಲರ್ ಮೊತ್ತದ ಶಸ್ತ್ರಾಸ್ತ್ರ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ್ದವು. ಅದರಂತೆ, ಸ್ವೀಡನ್‌ನ ಶಸ್ತ್ರಾಸ್ತ್ರ ಉತ್ಪಾದಕ ಕಂಪೆನಿಯಾದ ‘ಎ ಬಿ ಬೊಫೋರ್ಸ್’ ಭಾರತಕ್ಕೆ 400 ಹೊವಿಟ್ಜರ್ ಗನ್‌ಗಳನ್ನು ಪೂರೈಕೆ ಮಾಡಿತ್ತು. ಕಂಪೆನಿಯು ಈ ಮೊತ್ತದ ಎರಡು ಪಟ್ಟುಗಳಷ್ಟು ಪೂರೈಕೆಯ ಗುತ್ತಿಗೆ ಪಡೆಯಿತು. ಇದು ಸ್ವೀಡನ್ ಹಿಂದೆಂದೂ ನೋಡಿರದಷ್ಟು ದೊಡ್ಡ ಮೊತ್ತದ ಒಪ್ಪಂದವಾಗಿತ್ತು. ಆದರೆ 1987ರಲ್ಲಿ ಸ್ವೀಡನ್‌ನ ರೇಡಿಯೋವೊಂದು ಆಘಾತಕಾರಿ ಮಾಹಿತಿಯೊಂದನ್ನು ಬಿತ್ತರಿಸಿತು. ‘ಡೀಲ್ ಅನ್ನು ತನ್ನದಾಗಿಸಿಕೊಳ್ಳಲು ಬೊಫೋರ್ಸ್ ಕಂಪೆನಿಯು ಭಾರತದ ರಾಜಕಾರಣಿಗಳು ಹಾಗೂ ಪ್ರಮುಖ ರಕ್ಷಣಾ ಅಧಿಕಾರಿಗಳಿಗೆ ಬರೋಬ್ಬರಿ 640 ದಶಲಕ್ಷ ರೂ.ಗಳನ್ನು ಕಿಕ್‌ಬ್ಯಾಕ್ ರೀತಿ ನೀಡಿದೆ’ ಎಂಬ ಸುದ್ದಿ ಇದಾಗಿತ್ತು.
Advertisement
ಅಧಿಕಾರ ಕಳೆದುಕೊಂಡ ರಾಜೀವ್ರೇಡಿಯೋದಲ್ಲಿ ಬಂದ ವರದಿಯಂತೆ, ಕಿಕ್‌ಬ್ಯಾಕ್ ಪ್ರಕರಣದಲ್ಲಿ ಇಟಲಿಯ ಉದ್ಯಮಿ ಒಟ್ಟಾವಿಯೋ ಕ್ವಟ್ರೋಚಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ಎಂದು ಆರೋಪಿಸಲಾಗಿತ್ತು. ಕ್ವಟ್ರೋಚಿಯು ಆಗಿನ ಪ್ರಧಾನಿ ರಾಜೀವ್ ಗಾಂಧಿ ಕುಟುಂಬದ ಆಪ್ತನಾಗಿದ್ದ. ಇದು ಪ್ರಕರಣಕ್ಕೆ ಮಹತ್ವದ ತಿರುವು ನೀಡಿತು. ಆದರೆ, ಇದನ್ನು ಅಲ್ಲಗಳೆದಿದ್ದ ರಾಜೀವ್ ಅವರು, ಯಾವ ಮಧ್ಯವರ್ತಿಯೂ ಭಾಗಿಯಾಗಿರಲಿಲ್ಲ, ಕಿಕ್‌ಬ್ಯಾಕ್ ಅನ್ನೂ ಪಡೆದಿಲ್ಲ ಎಂದು ಲೋಕಸಭೆಯಲ್ಲಿ ಹೇಳಿದ್ದರು. ಆದರೆ, ಈ ಹಗರಣಕ್ಕಾಗಿ ಕಾಂಗ್ರೆಸ್ ಬಹುದೊಡ್ಡ ಬೆಲೆ ತೆರಬೇಕಾಯಿತು. 1989ರ ಲೋಕಸಭೆ ಚುನಾವಣೆಯಲ್ಲಿ ರಾಜೀವ್ ಅಧಿಕಾರ ಕಳೆದುಕೊಳ್ಳಬೇಕಾಯಿತು.