Advertisement

ರೆಸಾರ್ಟ್‌ನಲ್ಲಿ ದೇಹದಂಡನೆ: ಭೂರಿ ಭೋಜನ

11:36 PM Jul 13, 2019 | Lakshmi GovindaRaj |

ದೇವನಹಳ್ಳಿ: ಪ್ರಸ್ಟೀಜ್‌ ಗಾಲ್ಫ್ಶೈರ್‌ ರೆಸಾರ್ಟ್‌ನಲ್ಲಿ ತಂಗಿರುವ ಜೆಡಿಎಸ್‌ ಶಾಸಕರು ಶನಿವಾರ ಬೆಳಗ್ಗೆ ದೋಸೆ, ಇಡ್ಲಿ, ವಡೆ, ರೈಸ್‌ಬಾತ್‌ ಸವಿದರು. ಮಧ್ಯಾಹ್ನ ಮುದ್ದೆ, ನುಗ್ಗೆಕಾಯಿ ಸಾಂಬಾರಿನ ಊಟ ಸೇವಿಸಿದರು. ರೆಸಾರ್ಟ್‌ನ ಹೊರಭಾಗದಲ್ಲಿ ಬಿಗಿ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದ್ದು, ಹೊರಗಿನವರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.

Advertisement

ಶಾಸಕರ ದೇಹ ದಂಡನೆ: ಈ ಮಧ್ಯೆ, ರೆಸಾರ್ಟ್‌ನಲ್ಲಿ ತಂಗಿರುವ ಸಚಿವರು, ಶಾಸಕರು ಶನಿವಾರ ಬೆಳಗ್ಗೆ ವಾಯುವಿಹಾರ ಮಾಡಿದರು. ಕೆಲವರು ಯೋಗಾಸನ ಮಾಡಿದರೆ, ಇನ್ನೂ ಕೆಲವರು ಜಿಮ್‌ನಲ್ಲಿ ವ್ಯಾಯಾಮ ಮಾಡಿದರು.

ರಾಜಕೀಯ ಕುರಿತೇ ಚರ್ಚೆ: ಒಂದು ವಾರದಿಂದ ರೆಸಾರ್ಟ್‌ನಲ್ಲೇ ತಂಗಿರುವ ಶಾಸಕರು, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆಯಲ್ಲಿ ತೊಡಗಿದ್ದರು. ಅಲ್ಲದೇ ತಮ್ಮ ಆಪ್ತರು, ಸ್ನೇಹಿತರಿಂದಲೂ ಮಾಹಿತಿ ಪಡೆದುಕೊಳ್ಳುತ್ತಿದ್ದರು.

ಸಾಂತ್ವನ ಹೇಳಿದ ಶಾಸಕ: ಸ್ಥಳೀಯ ಶಾಸಕ ಎಲ್‌.ಎನ್‌.ನಾರಾಯಣ ಸ್ವಾಮಿ ಅವರು ತಾಲೂಕಿನ ಈಹೊಸೂರು ಗ್ರಾಮದಲ್ಲಿ ಮೃತರೊಬ್ಬರ ಕುಟುಂಬದವರನ್ನು ಭೇಟಿಯಾಗಿ, ಸಾಂತ್ವನ ಹೇಳಿದರು. ಬಳಿಕ ರೆಸಾರ್ಟ್‌ಗೆ ಹಿಂದಿರುಗಿದರು.

ಸಿಎಂ ಹೊಗಳಿದ ಜೆಡಿಎಸ್‌ ರಾಜ್ಯಾಧ್ಯಕ್ಷ: ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸುವುದಾಗಿ ಮುಖ್ಯಮಂತ್ರಿಗಳು ಹೇಳಿರುವುದು ಅವರ ಧೈರ್ಯ ಹಾಗೂ ನಾಯಕತ್ವ ಗುಣವನ್ನು ತೋರಿಸುತ್ತದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಹೇಳಿದರು.

Advertisement

ರೆಸಾರ್ಟ್‌ ಬಳಿ ಶನಿವಾರ ಪ್ರತಿಕ್ರಿಯಿಸಿದ ಅವರು, ಅಸಮಾಧಾನದಿಂದ ರಾಜೀನಾಮೆ ನೀಡಿ ಮುಂಬೈ ಸೇರಿರುವ ಶಾಸಕರು ವಾಪಸ್ಸಾಗಲಿದ್ದಾರೆ ಎಂಬ ವಿಶ್ವಾಸವಿದೆ. ಸಚಿವ ಡಿ.ಕೆ.ಶಿವಕುಮಾರ್‌ ಅವರು ರಾಜೀನಾಮೆ ನೀಡಿದ್ದ ಎಂ.ಟಿ.ಬಿ.ನಾಗರಾಜ್‌ ಅವರನ್ನು ಭೇಟಿಯಾಗಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಜೆಡಿಎಸ್‌ ಶಾಸಕರೆಲ್ಲಾ ರೆಸಾರ್ಟ್‌ನಲ್ಲಿ ಒಗ್ಗಟ್ಟಾಗಿ ಇದ್ದೇವೆ ಎಂದು ತಿಳಿಸಿದರು.

ಸ್ಥಳೀಯ ಜೆಡಿಎಸ್‌ ಶಾಸಕ ಎಲ್‌.ಎನ್‌.ನಾರಾಯಣ ಸ್ವಾಮಿ ಮಾತನಾಡಿ, ಜೆಡಿಎಸ್‌ನ ಎಲ್ಲಾ ಶಾಸಕರು ಒಗ್ಗಟ್ಟಿನಿಂದ ಇದ್ದೇವೆ. ಮುಖ್ಯಮಂತ್ರಿಗಳ ಕೈ ಬಲಪಡಿಸುವುದೇ ನಮ್ಮೆಲ್ಲರ ಗುರಿ. ಯಾರೊಬ್ಬರೂ ಯಾವುದೇ ಆಮಿಷಕ್ಕೆ ಒಳಗಾಗುವ ಪ್ರಶ್ನೆಯೇ ಇಲ್ಲ. ಪಕ್ಷದ ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿದ್ದೇವೆ. ಶಾಸಕರೆಲ್ಲಾ ಸೋಮವಾರ ಒಟ್ಟಿಗೆ ಅಧಿವೇಶನಕ್ಕೆ ತೆರಳಲಿದ್ದೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next