ಲಕ್ನೋ: ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಹದಿಹರೆಯದ ಯುವತಿಯ ಶವ ಉತ್ತರಪ್ರದೇಶದ ಗೋಂಡಾದಲ್ಲಿನ ಅಸಾರಾಂ ಬಾಪು ಆಶ್ರಮದ ಒಳಗೆ ನಿಲ್ಲಿಸಲಾಗಿರುವ ಕಾರಿನೊಳಗೆ ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮಂಗಳೂರು : ಬೈಕ್ ಢಿಕ್ಕಿ ಹೊಡೆದ ಬಳಿಕ ಹೊತ್ತಿ ಉರಿದ ಬಸ್ ; ಇಬ್ಬರು ಸವಾರರು ಗಂಭೀರ
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಆಶ್ರಮದ ಸುತ್ತ ಗುಂಪುಗೂಡಿ ಆಕ್ರೋಶ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ನಾಲ್ಕು ದಿನಗಳ ಹಿಂದೆ ಮನೆಯಿಂದ ಹೊರ ಹೋಗಿದ್ದ ಯುವತಿ ನಾಪತ್ತೆಯಾಗಿದ್ದಳು. ಇದೀಗ ಯುವತಿಯ ಶವ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಆಶ್ರಮದೊಳಗಿರುವ ಕಾರಿನಲ್ಲಿ ಪತ್ತೆಯಾಗಿದೆ.
ಆಶ್ರಮದ ಕೆಲಸಗಾರರು ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿ, ಕಾರಿನ ಡೋರ್ ಅನ್ನು ತೆಗೆದಾಗ ಶವ ಪತ್ತೆಯಾಗಿತ್ತು. ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು ಎಂದು ವರದಿ ತಿಳಿಸಿದೆ.
ಘಟನೆ ಬಳಿಕ ಪೊಲೀಸರು ಕಾರು ಸೇರಿದಂತೆ ಇಡೀ ಆಶ್ರಮವನ್ನು ಸೀಲ್ ಮಾಡಿ ತನಿಖೆ ಪ್ರಾರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಯುವತಿಯನ್ನು ಕೊಂದು ನಂತರ ಶವವನ್ನು ಅಡಗಿಸಿಡಲು ಕಾರಿನೊಳಗೆ ಇಟ್ಟಿರುವುದಾಗಿ ತಿಳಿದು ಬಂದಿದೆ.
ರೇಪ್ ಪ್ರಕರಣದಲ್ಲಿ ಜೈಲುಶಿಕ್ಷೆ ಅನುಭವಿಸುತ್ತಿರುವ ಬಾಪು!
80 ವರ್ಷದ ಅಸಾರಾಂ ಬಾಪು ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಜೋಧ್ ಪುರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವುದಾಗಿ ವರದಿ ತಿಳಿಸಿದೆ.