ಹರಿಯಾಣ: ಮದುವೆ ಕಾರ್ಯಕ್ರಮಕ್ಕೆ ತೆರಳಿ ಬಳಿಕ ನಾಪತ್ತೆಯಾಗಿದ್ದ ದೆಹಲಿಯ ಉನ್ನತ ಪೊಲೀಸ್ ಅಧಿಕಾರಿಯ ಮಗನ ಶವ ಹರಿಯಾಣದ ಕಾಲುವೆಯಲ್ಲಿ ಪತ್ತೆಯಾಗಿದ್ದು ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.
ದೆಹಲಿಯ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಯಶಪಾಲ್ ಸಿಂಗ್ ಅವರ ಪುತ್ರ ಲಕ್ಷ್ಯ ಚೌಹಾಣ್ ಕಳೆದ ಜನವರಿ 22 ರಿಂದ ನಾಪತ್ತೆಯಾಗಿದ್ದರು. ಈ ಕುರಿತು ಯಶಪಾಲ್ ಸಿಂಗ್ ಮಗ ನಾಪತ್ತೆಯಾಗಿರುವ ಕುರಿತು ದೂರು ನೀಡಿದ್ದರು.
ಜನವರಿ 28ರಂದು ಪ್ರಕರಣದ ಪ್ರಮುಖ ಆರೋಪಿ ವಿಕಾಸ್ ಭಾರದ್ವಾಜ್ ನನ್ನು ಪೊಲೀಸರು ಬಂಧಿಸಿದ್ದರು.
ಏನಿದು ಪ್ರಕರಣ: ವೃತ್ತಿಯಲ್ಲಿ ವಕೀಲರಾಗಿದ್ದ ಲಕ್ಷ್ಯ ಅವರು ಜನವರಿ 22 ರಂದು ಹರಿಯಾಣದ ಭಿವಾನಿಯಲ್ಲಿ ನಡೆದ ಮದುವೆಯಲ್ಲಿ ಭಾಗವಹಿಸಲು ಕಾರಿನಲ್ಲಿ ತನ್ನ ಇತರ ಗೆಳೆಯರಾದ ತೀಸ್ ಹಜಾರಿ ನ್ಯಾಯಾಲಯದಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ವಿಕಾಸ್ ಭಾರದ್ವಾಜ್ ಮತ್ತು ಅಭಿಷೇಕ್ ಅವರೊಂದಿಗೆ ಹೋಗಿದ್ದರು. ಆದರೆ ಮದುವೆ ಮುಗಿಸಿ ಮಗ ಮನೆಗೆ ಬಾರದೆ ಇರುವುದನ್ನು ಕಂಡ ಲಕ್ಷ್ಯ ಅವರ ತಂದೆ ಜನವರಿ 23 ರಂದು ಮಗ ಕಾಣೆಯಾದ ಬಗ್ಗೆ ದೂರು ದಾಖಲಿಸಿದರು. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಅದರಂತೆ ಮದುವೆ ಸಮಾರಂಭಕ್ಕೆ ಲಕ್ಷ್ಯ ಯಾರ ಜೊತೆ ತೆರಳಿದ್ದ ಅವರನ್ನು ಪೊಲೀಸರು ಮೊದಲು ವಿಚಾರಣೆ ನಡೆಸಿದ್ದಾರೆ. ಈ ವೇಳೆ ತೀಸ್ ಹಜಾರಿ ಕೋರ್ಟ್‌ನಲ್ಲಿ ಅಭ್ಯಾಸ ನಡೆಸುತ್ತಿರುವ ಲಕ್ಷಯ್ ತನ್ನಿಂದ ಸಾಲ ಪಡೆದಿದ್ದಾನೆ ಮತ್ತು ಹಣ ಕೇಳಿದಾಗ ಅವನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ವಿಕಾಸ್ ತಿಳಿಸಿದ್ದಾನೆ. ನಂತರ ಅವರು ಲಕ್ಷಯ್‌ನನ್ನು ಕೊಲೆ ಮಾಡಲು ಯೋಜಿಸಿದ್ದರು ಹಾಗಾಗಿ ಮದುವೆ ಕಾರ್ಯಕ್ರಮಕ್ಕೆ ತೆರಳಿ ವಾಪಸು ಬರುವ ವೇಳೆ ದಾರಿ ಮಧ್ಯೆ ಕಾರು ನಿಲ್ಲಿಸಿ ಹಣಕಾಸಿನ ವಿಚಾರ ತೆಗೆದಿದ್ದಾರೆ ಈ ವೇಳೆ ವಿಕಾಸ್ ಹಾಗು ಅಭಿಷೇಕ್ ಸೇರಿಕೊಂಡು ಲಕ್ಷ್ಯ ನನ್ನ ಹತ್ಯೆಗೈದು ಅಲ್ಲೇ ಇದ್ದ ಕಾಲುವೆಗೆ ಎಸೆದು ಯಾರಿಗೂ ಗೊತ್ತಾಗದ ರೀತಿಯಲ್ಲಿ ವರ್ತಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಪ್ರಮುಖ ಆರೋಪಿಯಾದ ವಿಕಾಸ್ ನನ್ನ ಪೊಲೀಸರು ಬಂಧಿಸಿದ್ದು ಅಭಿಷೇಕ್ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಅಭಿಷೇಕ್ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: Road Mishap: ಶಾಲಾ ಬಸ್ – ಟ್ರಾಕ್ಟರ್ ನಡುವೆ ಭೀಕರ ಅಪಘಾತ… ನಾಲ್ವರು ಮಕ್ಕಳು ದುರ್ಮರಣ