ಶ್ರೀನಗರ: ಸೆಪ್ವಂಬರ್ 28ರಂದು ಭಾರತ ಪಾಕಿಸ್ಥಾನ ಗಡಿನಿಯಂತ್ರಣ ರೇಖೆ ಪ್ರದೇಶದಿಂದ ನಾಪತ್ತೆಯಾಗಿದ್ದ ಭಾರತೀಯ ಗಡಿ ಭದ್ರತಾ ಪಡೆಯ ಯೋಧರೊಬ್ಬರ ಮೃತದೇಹ ಇಂದು ಪಾಕಿಸ್ಥಾನದ ಭೂಪ್ರದೇಶದಲ್ಲಿ ಪತ್ತೆಯಾಗಿದೆ.
ಬಿ.ಎಸ್.ಎಫ್. ಸಬ್ ಇನ್ ಸ್ಪೆಕ್ಟರ್ ಪಾರಿತೋಷ್ ಮೊಂಡಲ್ ಅವರು ಜಮ್ಮು ಜಿಲ್ಲೆಯ ರಣಬೀರ್ ಸಿಂಗ್ ಪೂರ ಪ್ರದೇಶದ ವ್ಯಾಪ್ತಿಯಲ್ಲಿ ಗಸ್ತು ಕರ್ತವ್ಯದಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಅಯ್ಕ್ ನಲ್ಲಾ ನದಿ ಪ್ರದೇಶದಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು.
ಬಳಿಕ ಇಂದು ಅವರ ಮೃತದೇಹ ಪಾಕಿಸ್ಥಾನ ಕಡೆಯಲ್ಲಿ ನದಿಯಿಂದ ಮೇಲೆತ್ತಲಾಗಿದೆ ಎಂದು ತಿಳಿದುಬಂದಿದೆ. ಗಸ್ತು ಕರ್ತವ್ಯ ಸಂದರ್ಭದಲ್ಲಿ ಪಾರಿತೋಷ್ ಅವರು ನದಿ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿರಬೇಕೆಂದು ಇದೀಗ ಶಂಕಿಸಲಾಗುತ್ತಿದೆ.
ಸಬ್ ಇನ್ ಸ್ಪೆಕ್ಟರ್ ಪಾರಿತೋಷ್ ಮೊಂಡಲ್ ಅವರು ಪಶ್ಚಿಮ ಬಂಗಾಲದ ನಾಡಿಯ ಜಿಲ್ಲೆಗೆ ಸೇರಿದವರಾಗಿದ್ದಾರೆ. ಪಾರಿತೋಷ್ ಅವರ ಪತ್ತೆಗೆ ಬಿ.ಎಸ್.ಎಫ್. ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಗಳು ಜಂಟಿ ಕಾರ್ಯಾಚರಣೆಯನ್ನು ನಡೆಸಿದ್ದವು ಹಾಗೂ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಈ ಕಾರ್ಯಾಚರಣೆಗೆ ಪಾಕಿಸ್ಥಾನಿ ರೇಂಜರ್ ಗಳು ಹಾಗೂ ಸ್ಥಳೀಯರೂ ಸಹ ಕೈಜೊಡಿಸಿದ್ದರು.
ಅಯ್ಕ್ ನಲ್ಲಾ ನದಿಯು ಭಾರತದಿಂದ ಪಾಕಿಸ್ಥಾನದತ್ತ ಹರಿಯುತ್ತದೆ ಮತ್ತು ಮಳೆಗಾಲದ ಸಂದರ್ಭದಲ್ಲಿ ಈ ನದಿಯು ಕೆಲವೊಮ್ಮೆ ಭೋರ್ಗರೆದು ಹರಿಯುತ್ತಿರುತ್ತದೆ.