Advertisement

ಪೊಲೀಸರ ಕೈಸೇರಿತು ಬಾಡಿ ಕ್ಯಾಮರಾ!

04:13 PM Oct 16, 2019 | Suhan S |

ಮಂಡ್ಯ: ಬಹು ನಿರೀಕ್ಷಿತ ಬಾಡಿ ಕ್ಯಾಮರಾ ಪೊಲೀಸ್‌ ಇಲಾಖೆ ಕೈ ಸೇರಿದ್ದು, ಇನ್ನು ಕೆಲವೇ ದಿನಗಳಲ್ಲಿ ಅದು ಪೊಲೀಸರ ಮೈಗೆ ತಗುಲಿ ಹಾಕಿಕೊಳ್ಳಲಿದೆ. ಕರ್ತವ್ಯದ ವೇಳೆ ಸಂಭವಿಸುವ ಘಟನಾವಳಿ ಸೆರೆಹಿಡಿಯಲು ಈ ಕ್ಯಾಮರಾಗಳು ಪೊಲೀಸರ ನೆರವಿಗೆ ಬರಲಿವೆ.

Advertisement

ಮೊದಲ ಹಂತದಲ್ಲಿ 40 ಬಾಡಿ ಕ್ಯಾಮರಾಗಳನ್ನು ಜಿಲ್ಲಾ ಪೊಲೀಸ್‌ ಇಲಾಖೆ ತರಿಸಿಕೊಂಡಿದೆ. ಸಂಚಾರಿ ಠಾಣೆ ಪಿಎಸ್‌ಐ, ಎಎಸ್‌ಐಗಳು ಹಾಗೂ ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್‌ಐಗಳು ಕ್ಯಾಮರಾ ಧರಿಸಿ ಕರ್ತವ್ಯಕ್ಕೆ ಇಳಿಯಲಿದ್ದಾರೆ. ಒಟ್ಟು 60 ಕ್ಯಾಮರಾಗಳ ಅಗತ್ಯವಿದ್ದು, ಅನುದಾನ ಆಧರಿಸಿ, ಉಳಿದ ಕ್ಯಾಮರಾಗಳನ್ನು ಖರೀದಿ ಮಾಡಲು ಇಲಾಖೆ ನಿರ್ಧರಿಸಿದೆ ಎಂದು ಎಸ್‌ಪಿ ಕೆ.ಪರಶುರಾಮ ತಿಳಿಸಿದರು.

ಬಾಡಿ ಕ್ಯಾಮರಾ ಬಳಕೆ ಹೇಗೆ? : ದೇಹದ ಎದೆಯ ಭಾಗದಲ್ಲಿ ಶರ್ಟ್‌ಗೆ ಅಳವಡಿಸಿದ ಈ ಕ್ಯಾಮರಾದಲ್ಲಿ ದೃಶ್ಯಗಳು ಸೆರೆಯಾಗಲಿವೆ. ಅಗತ್ಯ ಸಂದರ್ಭಗಳಲ್ಲಿ ಬಟನ್‌ ಒತ್ತಿ ಕ್ಯಾಮರಾ ಆನ್‌ ಮಾಡಿಕೊಳ್ಳಬಹುದು. ಪೊಲೀಸ್‌ ಅಧಿಕಾರಿ ಇತರೆ ಕೆಲಸ ಮಾಡುವ ಸ್ಥಳದಲ್ಲಿ ನಡೆಯುವ ದೃಶ್ಯಗಳೂ, ಇದರಲ್ಲಿ ಸೆರೆಯಾಗುತ್ತವೆ. ಪೊಲೀಸ್‌ ಅಧಿಕಾರಿ ಧ್ವನಿ ಹಾಗೂ ಇತರರ ಧ್ವನಿ, ದೃಶ್ಯವೂ ಇದರಲ್ಲಿ ದಾಖಲಾಗುವುದು. ಸಂಚಾರ ಉಲ್ಲಂಘನೆ ಮಾಡುವ ವಾಹನ ಸವಾರರಿಂದ ಸಾಕ್ಷಿ ಸಮೇತ ದಂಡ ವಸೂಲಿಗೂ ಅನುಕೂಲವಾಗಿದೆ ಎಂದು ಅವರು ಹೇಳಿದರು.

8 ಗಂಟೆ ದೃಶ್ಯ ಸೆರೆ: ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಈ ಕ್ಯಾಮರಾಗಳು 8 ಗಂಟೆ ದೃಶ್ಯಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿವೆ. ಉತ್ತಮ ಗುಣಮಟ್ಟದ ದೃಶ್ಯ ದಾಖಲಾಗುತ್ತದೆ. ಬೇಕಾದ ದಿಕ್ಕುಗಳಿಗೆ ಕ್ಯಾಮರಾ ತಿರುಗಿಸಿಕೊಳ್ಳಲು ಅವಕಾಶವಿದ್ದು, ಇದಕ್ಕೆ ಸಂಬಂಧಿಸಿದ ಸರ್ವರ್‌ ಜಿಲ್ಲಾ ಪೊಲೀಸ್‌ ಅಧೀಕ್ಷಕರ ಕಚೇರಿಯಲ್ಲಿದ್ದು, ವಾರಕ್ಕೊಮ್ಮೆ ಈ ದೃಶ್ಯಗಳನ್ನು ಕ್ಯಾಮರಾದಿಂದ ಸರ್ವರ್‌ಗೆ ವರ್ಗಾಯಿಸಬಹುದು. 90 ದಿನಗಳ ಕಾಲ ದೃಶ್ಯಗಳನ್ನು ಉಳಿಸಿಕೊಳ್ಳುವುದಕ್ಕೆ ಅವಕಾಶವಿದೆ.

ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯೊಂದಿಗೆ ಇದೂ ಸಹ ಪ್ರಮುಖ ಸಾಕ್ಷ್ಯ ಆಗಲಿದೆ. ಚುನಾವಣೆ ಕಾಲಕ್ಕೂ ಅನುಕೂಲ: ಚುನಾ ವಣೆ ಸಮಯದಲ್ಲಿ ನಾಯಕರ ಜಿದ್ದಾಜಿದ್ದಿ ಕಣಗಳಲ್ಲಿ ಕ್ಯಾಮೆರಾ ಕಣ್ಗಾವಲು ಇಡಲು ಅನುಕೂಲವಾಗುತ್ತದೆ. ಈಗ ಸಿಸಿಟಿವಿ ಕ್ಯಾಮೆರಾ, ವೆಬ್‌ ಕ್ಯಾಸ್ಟಿಂಗ್‌, ವಿಡಿಯೋ, ಫೋಟೋಗ್ರಫಿ ಹೀಗೆ ಒಂದಲ್ಲ ಒಂದು ರೀತಿ ಚುನಾವಣೆ ಚಟುವಟಿಕೆಗಳು ದಾಖಲಾಗುತ್ತಿವೆ. ಅದೇ ರೀತಿ ಪೊಲೀಸರ ಬಾಡಿ ವೋರ್‌ ಕ್ಯಾಮರಾವೂ ಮತ್ತೂಂದು ರೀತಿಯಲ್ಲಿ ನೆರವಿಗೆ ಬರುತ್ತದೆ.

Advertisement

ಕ್ಷೇತ್ರದಲ್ಲಿ ಮುಂದೆ ಎದುರಾಗಬಹುದಾದ ಯಾವುದೇ ಆರೋಪಗಳಿಗೆ ಸಾಕ್ಷಿ ಸಮೇತ ಉತ್ತರ ನೀಡಲು ಅನುಕೂಲವಾಗುವಂತೆ ಪೊಲೀಸರು ಮುಂಜಾಗ್ರತೆ ಕ್ರಮವಾಗಿ ಇದನ್ನು ಬಳಸಬಹುದು. ಸಾಧ್ಯವಾದಷ್ಟು

ಎಲ್ಲವನ್ನೂ ದೃಶ್ಯದಲ್ಲಿ ಸೆರೆ ಹಿಡಿಯುವ ಪ್ರಯತ್ನ ಪೊಲೀಸರದ್ದಾಗಿದೆ. ಯಾವುದಾದರೂ ಘಟನೆಗಳು ಸಂಭವಿಸಿದಾಗ ತಮ್ಮ ಸಿಬ್ಬಂದಿ ಹೇಗೆ ವರ್ತಿಸುತ್ತಿದ್ದಾರೆ ಎಂಬುದನ್ನು ಕಂಡುಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next