Advertisement

ಅವಧಿಗೂ ಮುನ್ನವೇ ಲಂಗಾರು ಹಾಕಿದ ದೋಣಿಗಳು!

10:10 PM May 19, 2019 | mahesh |

ಮಹಾನಗರ: ಮೀನಿನ ಕೊರತೆ ಹಿನ್ನೆಲೆಯ ಮಂಗಳೂರು ಬಂದರ್‌ನಲ್ಲಿ ಬಹುತೇಕ ದೋಣಿಗಳು ಅವಧಿಗೆ ಮುನ್ನವೇ ಲಂಗಾರು ಹಾಕಿವೆ. ಹವಾಮಾನ ವೈಪರೀತ್ಯ, ಪೋನಿ ಚಂಡಮಾರುತ, ಮೀನಿನ ಇಳುವರಿ ಕುಸಿತ ಮೊದಲಾದ ಕಾರಣಗಳಿಂದ ಬಹುತೇಕ ಯಾಂತ್ರೀಕೃತ ಬೋಟುಗಳು ಈಗಾಗಲೇ ದಡ ಸೇರಿವೆ. ಮೇ 31 ಈ ಬಾರಿ ಮೀನುಗಾರಿಕೆಗೆ ಕೊನೆಯ ದಿನ. ಜೂನ್‌ ಮತ್ತು ಜುಲೈ ತಿಂಗಳು ಮೀನುಗಾರಿಕೆಗೆ ರಜೆ. ಆದರೆ ದೋಣಿ ಮಾಲಕರು ಈಗಾಗಲೇ ಮೀನುಗಾರಿಕೆ ಸ್ಥಗಿತಗೊಳಿಸಿದ್ದು,
ರಜಾ ಅವಧಿ ಮುಗಿಸಿ ಆಗಸ್ಟ್‌ನಲ್ಲಿ ಮೀನುಗಾರಿಕೆಗೆ ಆಗಮಿಸಲು ಹೊರ ರಾಜ್ಯದ ಮೀನುಗಾರರಿಗೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೀನುಗಾರರು ನಷ್ಟ ಅನುಭವಿಸುವಂತಾಗಿದೆ.

Advertisement

ಲಾಭಕ್ಕಿಂತ ಖರ್ಚು ಹೆಚ್ಚು
ಯಾಂತ್ರೀಕೃ ಮೀನುಗಾರಿಕಾ ಬೋಟುಗಳು ಮೀನುಗಾರಿಕೆಗೆ ತೆರಳುವ ಸಂದರ್ಭ ಇಂಧನ, ಕೆಲಸ ಗಾರರ ವೆಚ್ಚ, ಬೋಟಿನ ತಪಾಸಣೆ ಸಹಿತ ಇನ್ನಿತರ ಖರ್ಚುಗಳು ಇರುತ್ತದೆ. ಪ್ರಸ್ತುತ ಮೀನುಗಾರಿಕೆಗೆ ತೆರಳಿದರೆ ಲಾಭಕ್ಕಿಂತ ಖರ್ಚು ಹೆಚ್ಚಾಗುತ್ತದೆ. ಹಾಗಾಗಿ ಮೀನುಗಾರಿಕೆ ಮಾಡುವುದನ್ನೇ ಸ್ಥಗಿತಗೊಳಿಸಿದ್ದೇವೆ ಎಂದು ಬೋಟು ಮಾಲಕರು ತಿಳಿಸಿದ್ದಾರೆ.

ಮೀನು ಇಳುವರಿ ಕಡಿಮೆ
ಜಿಲ್ಲೆಯಲ್ಲಿ 1,134 ಪಸೀನ್‌ ಮತ್ತು ಟ್ರಾಲ್‌ ಬೋಟ್‌, 1,396 ಗಿಲ್‌ನೆಟ್‌ ಬೋಟ್‌, 531 ಸಾಂಪ್ರ ದಾಯಿಕ ಬೋಟ್‌ಗಳಿವೆ. ಈ ಬಾರಿಯ ಮೀನುಗಾರಿಕಾ ಋತು ಮೀನುಗಾರರ ಪಾಲಿಗೆ ವರವಾಗಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದಾಗ ಈ ವರ್ಷ ಮೀನು ಇಳುವರಿ ಕಡಿಮೆ. ಫಿಶ್‌ ಮಿಲ್‌ಗ‌ಳಿಗೆ ಹೋಗುವ ಕ್ಲಾತಿ ಮೀನು ಬಿಟ್ಟರೆ ಉಳಿದಂತೆ ಬೇರೆ ಮೀನುಗಳು ನಿರೀಕ್ಷಿತ ಮಟ್ಟದಲ್ಲಿ ಲಭಿಸಿಲ್ಲ. ಇದರಿಂದ ಮೀನು ಉದ್ಯಮ ಕುಸಿತ ಕಂಡಿದೆ.

ಮೀನು ದರ ಏರಿಕೆ
ಈ ವರ್ಷಾರಂಭದಿಂದಲೇ ಹಲವು ಸಮಸ್ಯೆಗಳು ಎದುರಾಗಿರುವುದರಿಂದ ಮೀನುಗಾರರಿಗೆ ನಿರೀಕ್ಷಿತ ಲಾಭ ದೊರೆತ್ತಿಲ್ಲ.ಈ ಹಿನ್ನಲೆಯಲ್ಲಿ ಸ್ಥಳೀಯ ಮಾರುಕಟ್ಟೆಯಲ್ಲಿ ಮೀನು ದರದಲ್ಲಿ ಏರಿಕೆಯಾಗಿದೆ. ಹೊಟೇಲ್‌ಗ‌ಳಲ್ಲೂ ಮೀನು ಖಾದ್ಯ ದುಬಾರಿಯಾಗಿದೆ.

ಮೀನುಗಾರರಿಗೆ ಸಂಕಷ್ಟ
ಮೀನುಗಾರಿಕಾ ಋತು ಆರಂಭವಾಗಿದ್ದಗಿನಿಂದಲೂ ಮೀನುಗಾರರಿಗೆ ನಿರೀಕ್ಷಿತ ಲಾಭ ಸಿಕ್ಕಿಲ್ಲ. ಹವಾಮಾನ ವೈಪರಿತ್ಯ, ಮೀನಿನ ಇಳುವರಿ ಕುಸಿತದಿಂದಾಗಿ ಅವಧಿಗೂ ಮುನ್ನವೇ ಹಲವಾರು ಬೋಟುಗಳು ಲಂಗಾರು ಹಾಕಿವೆ. ಈಗ ಮೀನುಗಾರಿಕೆಗೆ ತೆರಳಿದರೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಹಾಗಾಗಿ ಮೀನುಗಾರಿಕೆ ಸ್ಥಗಿತಗೊಂಡಿದೆ.
– ನಿತಿನ್‌ ಕುಮಾರ್‌, ಅಧ್ಯಕ್ಷ, ಮಂಗಳೂರು ಟ್ರಾಲ್‌ಬೋಟ್‌ ಮೀನುಗಾರರ ಸಂಘ

Advertisement
Advertisement

Udayavani is now on Telegram. Click here to join our channel and stay updated with the latest news.

Next