Advertisement

ಮೀನಿಲ್ಲದೆ ದಡದಲ್ಲೇ ಲಂಗರು ಹಾಕಿವೆ ಬೋಟುಗಳು

12:04 AM Jan 10, 2020 | Sriram |

ಇನ್ನೂ ಬಂಗುಡೆ ಸಿಕ್ಕಿಯೇ ಇಲ್ಲ ; ಮೀನುಗಾರಿಕೆಗೆ ತೆರಳಿದರೆ ಲಾಭಕ್ಕಿಂತ ನಷ್ಟವೇ ಹೆಚ್ಚು..! ಕೆಲಸವಿಲ್ಲದೆ ಕಾರ್ಮಿಕರು ಊರಿಗೆ

Advertisement

ಗಂಗೊಳ್ಳಿ: ಪ್ರತಿಕೂಲ ಹವಾಮಾನ, ಮತ್ಸ್ಯ ಕ್ಷಾಮ, ಲೈಟ್‌ ಫಿಶಿಂಗ್‌ ನಿಷೇಧ ಮತ್ತಿತರ ಕಾರಣಗಳಿಂದ ಮೀನುಗಾರರು ಸಂಕಷ್ಟದಲ್ಲಿದೆ. ಈಗ ಮೀನುಗಾರಿಕೆಗೆ ತೆರಳಿದರೂ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವ ಕಾರಣಕ್ಕೆ ಗಂಗೊಳ್ಳಿ, ಮಲ್ಪೆ, ಮರವಂತೆ, ಕೊಡೇರಿ, ಶಿರೂರು ಅಳ್ವಿಗದ್ದೆ, ಸಹಿತ ಹೆಚ್ಚಿನ ಎಲ್ಲ ಬಂದರುಗಳಲ್ಲಿ ಬೋಟುಗಳು ಮೀನುಗಾರಿಕೆಗೆತೆರಳದೇ ದಡದಲ್ಲೇ ಲಂಗರು ಹಾಕಿವೆ.

ಮತ್ಸ್ಯ ಕ್ಷಾಮಕ್ಕೆ ಮೀನು ಗಾರರೆಲ್ಲ ತತ್ತರಿಸಿ ಹೋಗಿದ್ದಾರೆ. ನಾಡದೋಣಿ ಗಳು, ಪರ್ಸಿನ್‌, ಬುಲ್‌ ಟ್ರಾಲ್‌ ಹೀಗೆ ಎಲ್ಲ ಬೋಟು, ದೋಣಿ ಗಳ ಮೀನುಗಾರರಿಗೂ ಮೀನುಗಾರಿಕೆಗೆ ತೆರಳಿದರೆ ಕನಿಷ್ಠ ಖರ್ಚು ಆಗುವಷ್ಟು ಕೂಡ ಮೀನುಗಳು ಸಿಗದ ಕಾರಣ ಇಡೀ ಮೀನುಗಾರಿಕಾ ವಲಯಕ್ಕೆ ಗ್ರಹಣ ಬಡಿದಂತಿದೆ.

ದಡದಲ್ಲೇ ಲಂಗರು
ಗಂಗೊಳ್ಳಿ ಮೀನು ಗಾರಿಕಾ ಬಂದರಿನಲ್ಲಿ ಈಗ ಮೀನುಗಾರಿಕೆಗೆ ಹೋಗುವಬೋಟು, ದೋಣಿಗಳಿಗಿಂತ, ದಡದಲ್ಲೇ ಲಂಗರು ಹಾಕಿರುವ ಬೋಟುಗಳ ಸಂಖ್ಯೆಯೇ ಹೆಚ್ಚಿದೆ. ಇಲ್ಲಿ ಮ್ಯಾಂಗನೀಸ್‌ ವಾರ್ಫ್‌, ಕಿರು ಬಂದರು, ಲೈಟ್‌ಹೌಸ್‌ ಬಳಿಯಿರುವ ನಾಡ ದೋಣಿಗಳ ತಾತ್ಕಲಿಕ ಬಂದರುಗಳಲ್ಲಿ ನೂರಾರು ಬೋಟ್‌, ದೋಣಿಗಳು ನಿಂತಿವೆ.

ಗಂಗೊಳ್ಳಿ ಬಂದರಿನಲ್ಲಿ 40 ಪರ್ಸಿನ್‌ ಬೋಟುಗಳಿವೆ. 60 ಸಣ್ಣ ಟ್ರಾಲ್‌ ಬೋಟುಗಳು, 30 ರಿಂದ 40 ತ್ರಿಸೆವೆಂಟಿ, ನೂರಾರು ಗಿಲ್‌ನೆಟ್‌, ಮಾಟುಬಲೆ, ಬೀಡುಬಲೆ, ಪಾತಿ ದೋಣಿ, 200 ಕ್ಕೂ ಮಿಕ್ಕಿ ನಾಡದೋಣಿಗಳಿವೆ.

Advertisement

ದರವೂ ದುಬಾರಿ
ಮೀನು ಸಿಗುವ ಪ್ರಮಾಣ ಕಡಿಮೆಯಾದ ಕಾರಣ ದರವೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. 120-150 ರೂ. ಇದ್ದ 1 ಕೆ.ಜಿ. ಬಂಗುಡೆಗೆ ಈಗ 225 ರೂ. ನಿಂದ 235 ರೂ. ಇದೆ. ಅಂಜಲ್‌ ಕೆ.ಜಿ.ಗೆ 600 ರೂ., ಬೂತಾಯಿ 125 ರೂ., ಬಿಳಿ ಮೀನು 1 ಕೆ.ಜಿ.ಗೆ 180 ರೂ.ವರೆಗೆ ಮಾರಾಟವಾಗುತ್ತಿದೆ. ಸಮುದ್ರದ ಸಿಗಡಿ ಸಿಗುತ್ತಲೇ ಇಲ್ಲ.

ಅಂಕಿ – ಅಂಶ
ಪರ್ಸಿನ್‌ ಬೋಟು ಒಂದು ಮೀನುಗಾರಿಕೆಗೆ ತೆರಳಿದರೆ ಕನಿಷ್ಠ 3 ದಿನ ಸಮುದ್ರದಲ್ಲೇ ಕಳೆಯಬೇಕಾಗುತ್ತದೆ. ಇದಕ್ಕಾಗಿ ಕನಿಷ್ಠ 1 ಸಾವಿರ ಲೀಟರ್‌ ಡೀಸೆಲ್‌ ಅಗತ್ಯವಿದ್ದು, ಈಗಿನ ದರದ ಪ್ರಕಾರ 70 ಸಾವಿರ ರೂ. ಬೇಕಾಗುತ್ತದೆ. 25 ರಿಂದ 30 ಮೀನುಗಾರರು ಬೋಟ್‌ನಲ್ಲಿರುತ್ತಾರೆ. ಆಹಾರ, ಕಾರ್ಮಿಕ ವೆಚ್ಚ ಎಲ್ಲ ಸೇರಿ ಏನಿಲ್ಲವೆಂದರೂ 1.25 ಲಕ್ಷ ರೂ. ಕನಿಷ್ಠ ಖರ್ಚಾಗುತ್ತದೆ. ಆದರೆ ಈಗ ಖರ್ಚಾದಷ್ಟು ಕೂಡ ಮೀನು ಸಿಗುತ್ತಿಲ್ಲ ಎನ್ನುವುದು ಮೀನುಗಾರರ ಅಳಲು.

ಸಿಗುತ್ತಿಲ್ಲ ಬಂಗುಡೆ
ಕರಾವಳಿಯ ಮೀನುಗಾರರಿಗೆ ಬಂಗುಡೆ ಹಾಗೂ ಬೂತಾಯಿ (ಬೈಗೆ) ಎನ್ನುವುದು ಹೆಚ್ಚು ಆದಾಯ ತಂದು ಕೊಡುವ ಮೀನು. ಆದರೆ ಬೂತಾಯಿ ಸಿಗುವ ಪ್ರಮಾಣ ಕಡಿಮೆಯಾಗಿ ಮೂರು ವರ್ಷಗಳೇ ಕಳೆದಿವೆ. ಬೂತಾಯಿ ಸಿಗದ ನಷ್ಟವನ್ನು ಈವರೆಗೆ ಬಂಗುಡೆ ಮೀನು ಭರಿಸುತ್ತಿತ್ತು. ಆದರೆ ಈ ಬಾರಿ ಕಳೆದ ಆಗಸ್ಟ್‌ನಿಂದ ಇಲ್ಲಿಯವರೆಗೆ ಮೀನುಗಾರರಿಗೆ ಬಂಗುಡೆ ಮೀನು ಸಿಗುತ್ತಲೇ ಇಲ್ಲ. ಕೆಲವರಿಗೆ ಚಿಲ್ಲರೆ ಚಿಲ್ಲರೆ ಅಷ್ಟೇ ಸಿಗುತ್ತಿದೆ.

ಕಾರ್ಮಿಕರು ಊರಿಗೆ
ಗಂಗೊಳ್ಳಿಯಲ್ಲಿ ಒಡಿಶಾ ಮೂಲದ ಕಾರ್ಮಿಕರು ಹೆಚ್ಚಾಗಿ ಬೋಟ್‌ಗಳಲ್ಲಿ ಕೆಲಸಕ್ಕೆ ಬರುತ್ತಾರೆ. ಈ ಬಾರಿ ಹೆಚ್ಚಿನ ದಿನಗಳಲ್ಲಿ ಮೀನುಗಾರಿಕೆಯಿಲ್ಲದೆ ಇರುವ ಕಾರಣ, ಕೆಲಸವೇ ಇಲ್ಲದೆ ಕಾರ್ಮಿಕರೆಲ್ಲ ಈಗಾಗಲೇ ಊರಿಗೆ ತೆರಳಿದ್ದು, ಈಗ ಆಗೊಮ್ಮೆ, ಈಗೊಮ್ಮೆ ಮೀನುಗಾರಿಕೆಗೆ ತೆರಳುತ್ತಿದ್ದರೂ, ಕೆಲಸಕ್ಕೆ ಜನವಿಲ್ಲದ ಸ್ಥಿತಿ. ಇನ್ನೂ ಮೀನುಗಾರಿಕೆಗೆ ಹೋದರೂ, ಖರ್ಚಾಗುವಷ್ಟು ಕೂಡ ಮೀನು ಸಿಗುತ್ತಿಲ್ಲ. ಹಾಗಾಗಿ ಹೆಚ್ಚಿನವರು ಮೀನುಗಾರಿಕೆಗೆ ಹೋಗುತ್ತಿಲ್ಲ. ಇದರಿಂದ ಎಲ್ಲರಿಗೂ ಭಾರೀ ಕಷ್ಟವಾಗುತ್ತಿದೆ .
-ಶೇಖರ್‌, ಮೀನುಗಾರರು

ಶೇ. 5 ರಷ್ಟು ಮಾತ್ರ ಮೀನುಗಾರಿಕೆ
ಈ ಬಾರಿ ಬಂಗುಡೆ ಸಿಗ್ತಿಲ್ಲದಿರುವುದು ಮೀನುಗಾರರಿಗೆ ದೊಡ್ಡ ಹೊಡೆತ. ಈ ವರ್ಷವೇ ಹೀಗಾದರೆ ಮುಂದಿನ ವರ್ಷಗಳಲ್ಲಿ ಇನ್ನೂ ಹೇಗೆ ಎನ್ನುವುದೇ ನಮ್ಮ ಚಿಂತೆ. ಆಗಸ್ಟ್‌ನಿಂದ ಜನವರಿ ವರೆಗೆ ಬೋಟುಗಳಿಗೆ ಕನಿಷ್ಠವೆಂದರೂ 50 ರಿಂದ 60 ಲಕ್ಷ ರೂ. ಆದಾಯ ಬರುತ್ತಿತ್ತು. ಆದರೆ ಈ ಬಾರಿ 8-10 ಲಕ್ಷ ರೂ., 5-8 ಲಕ್ಷ ರೂ. ಅಷ್ಟೇ ಆಗಿದೆ. ಅಂದರೆ ಹಿಂದಿನ ವರ್ಷಗಳಲ್ಲಿ ಈವರೆಗೆ ಆಗುತ್ತಿದ್ದ ಮೀನುಗಾರಿಕೆ ಪೈಕಿ ಈ ಬಾರಿ ಕೇವಲ ಶೇ. 5 ರಷ್ಟು ಮಾತ್ರ ಆಗಿದೆ.
-ರಮೇಶ್‌ ಕುಂದರ್‌, ಅಧ್ಯಕ್ಷರು, ಪರ್ಸಿನ್‌ ಮೀನುಗಾರರ ಸಹಕಾರ ಸಂಘ

ಪ್ರತಿಕೂಲ ಹವಾಮಾನ
ಕುಂದಾಪುರದ ಗಂಗೊಳ್ಳಿ, ಮರವಂತೆ ಮಾತ್ರವಲ್ಲದೆ ಎಲ್ಲ ಕಡೆಗಳಲ್ಲಿ ಮೀನಿನ ಬರ ಎದುರಾಗಿದೆ. ಕೆಲವೊಮ್ಮೆ ಅವರು ಭರಿಸುವ ಡೀಸೆಲ್‌ ಖರ್ಚುನಷ್ಟು ಕೂಡ ಮೀನು ಸಿಗುತ್ತಿಲ್ಲ. ಮತ್ಸ್ಯ ಕ್ಷಾಮ, ಪ್ರತಿಕೂಲ ಹವಾಮಾನ ಇದಕ್ಕೆ ಪ್ರಮುಖ , ಕಾರಣವಾಗಿದೆ.
-ಚಂದ್ರಶೇಖರ್‌ ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ ಕುಂದಾಪುರ

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next