Advertisement

Boat Tragedy: ಶಿರೂರಿನಲ್ಲಿ ಮೀನುಗಾರಿಕಾ ದೋಣಿ ದುರಂತ… ಇಬ್ಬರು ಮೀನುಗಾರರು ಮೃತ್ಯು

12:14 AM Dec 19, 2023 | Team Udayavani |

ಬೈಂದೂರು: ಮೀನುಗಾರಿಕೆ ಮುಗಿಸಿ ವಾಪಸಾಗುತ್ತಿದ್ದ ದೋಣಿ ಮಗುಚಿ ಇಬ್ಬರು ಮೀನುಗಾರರು ಮೃತಪಟ್ಟ ಘಟನೆ ಸೋಮವಾರ ನಸುಕಿನಲ್ಲಿ ಶಿರೂರು ಕಳುವಿತ್ಲುವಿನಲ್ಲಿ ಸಂಭವಿಸಿದೆ.

Advertisement

ಶಿರೂರು ಹಡವಿನಕೋಣೆಯ ಅಬ್ದುಲ್‌ ಸತ್ತರ್‌ (45) ಮತ್ತು ಭಟ್ಕಳ ಕುದ್ವಾಯಿ ರೋಡ್‌ನ‌ ಮಿಸ್ಬಾ ಯೂಸುಫ್‌ (48) ಮೃತಪಟ್ಟವರು. ಮತ್ತೋರ್ವ ಮೀನುಗಾರ ಹಡವಿನ ಕೋಣೆಯ ಬುಡ್ಡು ಮುಖ್ತಾರ್‌ ಅವರನ್ನು ಇನ್ನೊಂದು ದೋಣಿಯಲ್ಲಿದ್ದ ಮಾಮ್ಸು ಯಾಕೂಬ್‌ ರಕ್ಷಣೆ ಮಾಡಿದ್ದಾರೆ.

ನುಮೈರಾ ಅಂಜುಮ್‌ ಹೆಸರಿನ ದೋಣಿಯಲ್ಲಿ ಮೂವರು ರವಿವಾರ ರಾತ್ರಿ ಶಿರೂರು ಕಳುಹಿತ್ಲುನಿಂದ ಮೀನುಗಾರಿಕೆಗೆ ತೆರಳಿದ್ದರು. ಕೆಲಸ ಮುಗಿಸಿ ಮರಳುತ್ತಿದ್ದಾಗ ಸೋಮವಾರ ನಸುಕಿನಲ್ಲಿ ಶಿರೂರು ಕಳುಹಿತ್ಲು ಅಳಿವೆ ಸಮೀಪ ದೋಣಿ ಮಗುಚಿ ಬಿದ್ದ ಕಾರಣ ಇಬ್ಬರು ಸಮುದ್ರಪಾಲಾದರು.

ಮೀನುಗಾರಿಕೆ ಬದುಕಿಗೆ ಆಧಾರ
ಅಬ್ದುಲ್‌ ಸತ್ತರ್‌ ಕಡುಬಡತನದ ಕುಟುಂಬದವರಾಗಿದ್ದು ಚಿಕ್ಕ ವಯಸ್ಸಿನಿಂದ ಮೀನು ಗಾರಿಕೆಯನ್ನು ಅವಲಂಬಿಸಿದ್ದರು. ಬಳಿಕ ಸ್ವ ಸಹಾಯ ಸಂಘ ದಲ್ಲಿ ಸಾಲ ಮಾಡಿ ದೋಣಿ ವ್ಯವಹಾರ ಆರಂಭಿಸಿದ್ದರು. ಒಟ್ಟು ಮೂವರು ಸಹೋದರರಿದ್ದು ಹೆತ್ತವರಿಬ್ಬರೂ ಇವರ ಎಳೆಯ ವಯಸ್ಸಿನಲ್ಲಿಯೇ ಮೃತಪಟ್ಟಿದ್ದರು. ಓರ್ವ ಸಹೋದರನೂ ಕೆಲವು ವರ್ಷ ಗಳ ಹಿಂದೆ ಮೃತಪಟ್ಟಿದ್ದರು. ಪತ್ನಿ ಗ್ರಾ.ಪಂ. ಸದಸ್ಯೆಯಾಗಿದ್ದಾರೆ. ಸತ್ತರ್‌ಗೆ ಈಜು ಬರುತ್ತಿದ್ದರು ಸಹ ಸಹೋದ್ಯೋಗಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿರುವಾಗ ಮುಳುಗಿ ಮೃತಪಟ್ಟರು ಎನ್ನಲಾಗಿದೆ.

ಪ್ರಾಣ ಉಳಿಸಿದ ಟಾರ್ಚ್‌ಲೈಟ್‌
ರವಿವಾರ ರಾತ್ರಿ 10 ಗಂಟೆ ಸುಮಾರಿಗೆ ಕಡಲಿನಲ್ಲಿ ಬಲವಾದ ಗಾಳಿ ಬೀಸಲಾರಂಭಿಸಿದ್ದು, ನುಮೈರಾ ಅಂಜುಮ್‌ ದೋಣಿಯು ತೀರದತ್ತ ಮರಳಲು ಯತ್ನಿಸಿತು. ರಾತ್ರಿ 1 ಗಂಟೆಯ ಸುಮಾರಿಗೆ ಅಳಿವೆ ಭಾಗಕ್ಕೆ ತಲುಪುತ್ತಿದ್ದಂತೆ ಗಾಳಿಯ ರಭಸಕ್ಕೆ ದೋಣಿ ಅಡಿಮೇಲಾಯಿತು. ಬಲೆ ತುಂಬಿದ ದೋಣಿ, ಎಂಜಿನ್‌ ಸಮುದ್ರಪಾಲಾಗಿದ್ದು ಈವರೆಗೆ ಪತ್ತೆಯಾಗಿಲ್ಲ. ಇಬ್ಬರು ಮುಳುಗಿದ ಬಳಿಕ ದೋಣಿಯಲ್ಲಿರುವ ಇನ್ನೋರ್ವ ಈಜುತ್ತ ಜೀವ ಉಳಿಸಿಕೊಳ್ಳಲು ಯತ್ನಿಸಿದರು. ತನ್ನಲ್ಲಿದ್ದ ಟಾರ್ಚ್‌ ಲೈಟನ್ನು ಬೆಳಗುತ್ತ ಇತರ ದೋಣಿಯವರ ಗಮನಸೆಳೆಯುವಲ್ಲಿ ಸಫ‌ಲರಾದರು. ಇನ್ನೊಂದು ದೋಣಿಯವರು ಧಾವಿಸಿ ಬಂದು ಅವರ ಪ್ರಾಣ ಉಳಿಸಿದರು.

Advertisement

ಆಗಾಗ ಅವಘಡ
ಶಿರೂರು ಅಳಿವೆ ಭಾಗದಲ್ಲಿ ಹೂಳು ತೆಗೆಯುವುದು ಇತ್ಯಾದಿ ನಿರ್ವ ಹಣೆಯ ಲೋಪ ದಿಂದಾಗಿ ನಿರಂತರ ಅವಘಡ ಸಂಭವಿಸುತ್ತಿರುತ್ತದೆ. ಕೆಲವು ತಿಂಗಳ ಹಿಂದೆ ಇಬ್ಬರು ಮೀನುಗಾರರು ಸಮುದ್ರ ಪಾಲಾಗಿದ್ದರು. ಈ ವರ್ಷ ಬೈಂದೂರು ಭಾಗದಲ್ಲಿ ಅತ್ಯಧಿಕ ಮೀನುಗಾರಿಕೆ ದುರಂತಗಳು ಸಂಭವಿಸಿವೆ. ಕೆಲವು ದಿನಗಳ ಹಿಂದೆ ಕೈರಂಪಣಿ ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಿದ್ದ ನಾಲ್ವರಲ್ಲಿ ಇಬ್ಬರು ಸಮುದ್ರ ಪಾಲಾಗಿದ್ದರು. ಕಳೆದ ವರ್ಷ ಪ್ರಕೃತಿವಿಕೋಪದಲ್ಲಿ 10ಕ್ಕೂ ಅಧಿಕ ದೋಣಿಗಳು ಹಾನಿಗೀಡಾಗಿದ್ದವು. ಇಲ್ಲಿನ ಅಳಿವೆ ಸಮಸ್ಯೆ ಕುರಿತು ಉದಯವಾಣಿ ಹಲವು ಬಾರಿ ಬೆಳಕು ಚೆಲ್ಲಿದೆ. ಅತ್ಯಂತ ಹಳೆಯದೆನಿಸಿರುವ ಅಳ್ವೆಗದ್ದೆ ಬಂದರಿನ ದುರಸ್ತಿಗೂ ಕುರಿತು ಸರಕಾರ ಗಮನಹರಿಸಬೇಕು ಎಂದು ಮೀನುಗಾರರು ಅಗ್ರಹಿಸುತ್ತಿದ್ದಾರೆ.

ಸಚಿವರ ಸಂತಾಪ
ಇಬ್ಬರು ಮೀನುಗಾರರು ಮೃತಪಟ್ಟರುವ ಕುರಿತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹಾಗೂ ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಸಂತಾಪ ಸೂಚಿಸಿದ್ದಾರೆ. ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದು ಶೀಘ್ರ ಮೀನುಗಾರರ ಮನೆಗೆ ಭೇಟಿ ನೀಡುವ ಜತೆಗೆ ಸರಕಾರದಿಂದ ದೊರೆಯುವ ಪರಿಹಾರ ಒದಗಿಸಿಕೊಡುವುದಾಗಿ ತಿಳಿಸಿದ್ದಾರೆ. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಸಂತಾಪ ಸೂಚಿಸಿದ್ದಾರೆ.

ಗಂಗೊಳ್ಳಿ ಕರಾವಳಿ ಕಾವಲು ಪಡೆಯ ಇನ್‌ಸ್ಪೆಕ್ಟರ್‌ ನಂಜಪ್ಪ ಎನ್‌., ಶಿರೂರು ಗ್ರಾಮ ಲೆಕ್ಕಾಧಿಕಾರಿ ವಿಜಯ ಕುಮಾರ್‌, ಕರಾವಳಿ ಕಾವಲು ಪಡೆಯ ಸಿಬಂದಿ ಹಾಗೂ ಆರಕ್ಷಕ ಸಿಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next