Advertisement

ಬೋಟ್ ದುರಂತ: 14 ಶವ ಸಂಬಂಧಿಕರಿಗೆ ಹಸ್ತಾಂತರ

12:52 AM Jan 24, 2019 | Team Udayavani |

ಕಾರವಾರ: ಕೂರ್ಮಗಡ ಬೋಟ್ ದುರಂತದಲ್ಲಿ ಮೃತಪಟ್ಟ 14 ಜನರ ಶವಗಳನ್ನು ಅವರವರ ಸಂಬಂಧಿಕರಿಗೆ ಮಂಗಳವಾರ ರಾತ್ರಿಯೇ ಹಸ್ತಾಂತರಿಸಲಾಯಿತು. ಶವಗಳನ್ನು ಅವರ ಗ್ರಾಮಕ್ಕೆ ತಲುಪಿಸಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿತ್ತು. ಬೋಟ್ ದುರಂತದಲ್ಲಿ ಕಾಣೆಯಾಗಿರುವ ಕೀರ್ತಿ ಸೋಮಪ್ಪ ಬಾಳಲಕೊಪ್ಪ (7) ಬುಧವಾರ ಸಂಜೆ ಸಿಕ್ಕಿದ್ದು, ಸಂದೀಪ ಪರುಶುರಾಮ (10)ಗಾಗಿ ಕರಾವಳಿ ಕಾವಲು ಪಡೆ, ನೇವಿ ಹೆಲಿಕಾಪ್ಟರ್‌ ಚೇತಕ್‌, ನೇವಿ, ಕೋಸ್ಟ್‌ಗಾರ್ಡ್‌ನ ಅತ್ಯಾಧುನಿಕ ಬೋಟ್‌ಗಳು ಅರಬ್ಬಿ ಸಮುದ್ರದ ವ್ಯಾಪ್ತಿಯಲ್ಲಿ ಹುಟುಕಾಟ ಮುಂದುವರೆಸಿವೆ.

Advertisement

ಪರುಶುರಾಮ ಬಾಳಲಕೊಪ್ಪ, ಅವರ ಪತ್ನಿ ಭಾರತಿ ಹಾಗೂ ಮಕ್ಕಳಾದ ಸಂಜೀವಿನಿ, ಸೌಜನ್ಯ ಅವರ ಶವಗಳನ್ನು ಅವರ ಕುಟುಂಬದವರಿಗೆ ಮಂಗಳವಾರ ರಾತ್ರಿ ಹಸ್ತಾಂತರಿಸಲಾಯಿತು. ಇದೇ ದುರಂತದಲ್ಲಿ ಸಾವನ್ನಪ್ಪಿದ ಮಂಜವ್ವ ಹಾಗೂ ಮಕ್ಕಳಾದ ಕಿರಣ್‌, ಅರುಣ್‌ ಅವರ ಶವಗಳನ್ನು ಮರಣೋತ್ತರ ಪರೀಕ್ಷೆ ನಂತರ ಮಂಜವ್ವ ಅವರ ಪತಿ ಸೋಮಪ್ಪ ಬಾಳಲಕೊಪ್ಪ ಅವರಿಗೆ ಹಸ್ತಾಂತರಿಸಲಾಯಿತು. ಜಿಲ್ಲಾಡಳಿತ ಹಾವೇರಿಯ ಹೊಸೂರಿಗೆ ಶವ ಸಾಗಿಸಲು ವ್ಯವಸ್ಥೆ ಮಾಡಿತ್ತು. ಕಾರವಾರ ಸಮೀಪದ ಕಡವಾಡದ ಗಣಪತಿ ಕೋಠಾರಕರ್‌, ಮೀನಾಕ್ಷಿ ಗಣಪತಿ ಕೋಠಾರಕರ್‌, ರಾಮನಗುಳಿಯ ನಿಲೇಶ್‌ ರೋಹಿದಾಸ ಪೆಡ್ನೇಕರ್‌, ಕೊಪ್ಪಳದ ಅನ್ನಕ್ಕ ಇಂಗಳದಾಳ, ಪೊಂಡಾದ ಗೀತಾ ಜೆ.ತಳೇಕರ, ಶ್ರೇಯಸ್‌ ಪಾವುಸ್ಕರ್‌ ಅವರ ಶವಗಳನ್ನು ಸಹ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.

ಗ್ರಾಮಸ್ಥರಿಗೆ ಶಾಸಕಿ ನೆರವು: ಹೊಸೂರು ಗ್ರಾಮದಿಂದ ಬಂದಿದ್ದ 80 ಜನರಿಗೆ ಶಾಸಕಿ ರೂಪಾಲಿ ನಾಯ್ಕ ವಾಹನ ವ್ಯವಸ್ಥೆ ಮಾಡಿ, ಧೈರ್ಯ ತುಂಬಿ ಹೊಸೂರಿಗೆ ಕಳುಹಿಸಿದರು. ಸರ್ಕಾರದಿಂದ ಸಿಗುವ ಎಲ್ಲಾ ರೀತಿಯ ನೆರವನ್ನು ಮಾಡಿಸುವುದಾಗಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ದುರಂತದಲ್ಲಿ ಬದುಕುಳಿದ ಪರುಶುರಾಂ ಬಾಳಲಕೊಪ್ಪ ಅವರ ಏಕೈಕ ಪುತ್ರ ಗಣೇಶ್‌ ಪರುಶುರಾಮ ಅಜ್ಜಿಯ ಮಡಿಲು ಸೇರಿ ಸ್ವಂತ ಊರಿಗೆ ಪಯಣ ಬೆಳಸಿದ.

Advertisement

Udayavani is now on Telegram. Click here to join our channel and stay updated with the latest news.

Next