ಭಟ್ಕಳ: ಭಟ್ಕಳದ ಮಾವಿನಕುರ್ವೆ ಬಂದರಿನಲ್ಲಿ ಹೂಳು ತುಂಬಿದ ಪರಿಣಾಮವಾಗಿ ಲಂಗರು ಹಾಕಿದ್ದ ನಾಲ್ಕು ಬೋಟುಗಳು ಮಗುಚಿ ಪರಸ್ಪರ ಢಿಕ್ಕಿಯಾದ ಪರಿಣಾಮ ಅಪಾರ ಹಾನಿ ಸಂಭವಿಸಿದೆ.
ಹಾನಿಗೊಳಗಾದ ಬೋಟುಗಳನ್ನು ದುರ್ಗಾಂಬಿಕಾ ದೇವಿ, ಶ್ರೀ ನಿತ್ಯಾನಂತ, ಜೈನ ಜಟಕಾ ಮತ್ತು ಗಗನ ಎಂದು ಗುರುತಿಸಲಾಗಿದ್ದು ಸದ್ರಿ ಬೋಟುಗಳನ್ನು ಮಾವಿನಕುರ್ವೆ ಬಂದರಿನಲ್ಲಿ ಲಂಗರು ಹಾಕಿಟ್ಟ ಸಂದರ್ಭದಲ್ಲಿ ಇಳಿತ ಉಂಟಾಗಿ ನೀರಿನ ಕೊರತೆಯಿಂದಾಗಿ ಒಂದಕ್ಕೊಂದು ಢಿಕ್ಕಿಯಾಗಿ ಮಗುಚಿಕೊಂಡಿವೆ ಎನ್ನಲಾಗಿದೆ.
ಬಂದರಲ್ಲಿ ಹೂಳು ತುಂಬಿದ್ದರಿಂದ ಸರ್ವ ಋತು ಬಂದರಾಗಿದ್ದ ಮಾವಿನಕುರ್ವೆ ಬಂದರು ಈಗ ಬೋಟುಗಳಿಗೆ ಸುರಕ್ಷತೆಯ ತಾಣವಲ್ಲ ಎನ್ನುವಂತಾಗಿದೆ. ಈ ಹಿಂದೆ ಕೂಡಾ ಹೂಳು ತುಂಬಿದ್ದರಿಂದ ಅನೇಕ ಬೋಟುಗಳಿಗೆ ಹಾನಿಯಾಗಿದ್ದನ್ನು ಸ್ಮರಿಸಬಹುದು.
ಹೂಳಿನಿಂದಾಗಿ ಮಗುಚಿ ಹಾನಿಯಾಗಿದ್ದ ಬೋಟುಗಳನ್ನು ಸ್ಥಳೀಯ ಮೀನುಗಾರರು, ಮುಳುಗು ತಜ್ಞರು ಸರಿಪಡಿಸಿ ನೀರು ತುಂಬಿದ ನಂತರದಲ್ಲಿ ಮತ್ತೆ ಲಂಗರು ಹಾಕಿಟ್ಟರೂ ಸಹ ಮುಳುಗುವ ಸಮಯದಲ್ಲಿ ಆದ ಹಾನಿಯೇ ಲಕ್ಷಾಂತರ ರೂಪಾಯಿ ಎಂದು ಅಂದಾಜಿಸಲಾಗಿದೆ.
Related Articles
ಇನ್ನೇನು ಕೆಲವು ಕೆಲವೇ ದಿನಗಳಲ್ಲಿ ಬೋಟುಗಳನ್ನು ಮೇಲಕ್ಕೆತ್ತಬೇಕಾಗಿದ್ದು ಮೀನುಗಾರಿಕೆಯೇ ಬಂದ್ ಆಗಲಿದೆ. ಆದರೆ ಇವರ ಪಾಲಿಗೆ ಕೊನೆ ಕ್ಷಣದಲ್ಲಿ ಮೀನುಗಾರಿಕಗೆ ಹೋಗಲಾದೇ ತುಂಬಲಾರದ ನಷ್ಟವುಂಟಾಗಿದೆ. ಅತ್ತ ರಿಪೇರಿಗೂ ಕೂಡಾ ಲಕ್ಷಾಂತರ ರೂಪಾಯಿ ಖರ್ಚಾಗಲಿದ್ದು ಎರಡೂ ಕಡೆಯಿಂದ ಇವರು ನಷ್ಟ ಅನುಭವಿಸುಂತಾಗಿದೆ.