ಗಂಗೊಳ್ಳಿ: ಇಲ್ಲಿನ ಬಂದರಿನಿಂದ ಹೊರಟ ಶ್ರೀಗುರು ಸನ್ನಿಧಿ ಎಂಬ ಬೋಟ್ ಮಾ.11ರ ರಾತ್ರಿ ಗಂಗೊಳ್ಳಿ ಅಳಿವೆ ದಾಟಿ 1 ನಾಟಿಕಲ್ ಮೈಲು ತಲುಪಿದಾಗ ತಾಂತ್ರಿಕ ದೋಷ ಉಂಟಾಗಿ ಕಲ್ಲಿಗೆ ಢಿಕ್ಕಿಯಾಗಿದೆ. ಬೋಟಿನಲ್ಲಿದ್ದ ತಾಂಡೇಲ ದಯಾನಂದ ಅಂಬಿಗ ಅವರು ಮಾಲಕ ಕೋಟೇಶ್ವರದ ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ್ದು ಅವರು ಕರಾವಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು.
ಯಕ್ಷೇಶ್ವರಿ ಪರ್ಸಿನ್ ಬೋಟ್ ಹಾಗೂ ಚಕ್ರಮ್ಮ ಟೂರಿಸ್ಟ್ ಬೋಟ್ ಹಾಗೂ ಇತರ ಮೀನುಗಾರರ ಸಹಾಯದಿಂದ ರಕ್ಷಣೆ ಕಾರ್ಯ ನಡೆಯಿತು. ದಯಾನಂದ ಅಂಬಿಗ, ಮಂಜುನಾಥ, ಶ್ರೀಧರ, ಗಣಪತಿ, ರಾಮ, ಕರುಣಾ ಅವರನ್ನು ರಕ್ಷಿಸಲಾಗಿದೆ. ಸಮುದ್ರದಲ್ಲಿ ಬಾಕಿಯಾದ ಬೋಟ್‌ಗೆ ನೀರು ತುಂಬಿ ಅಲೆಯ ಒತ್ತಡಕ್ಕೆ ತೇಲಿ ಬಂದು ಗಂಗೊಳ್ಳಿ ಬೇಲಿಕೇರಿ ತೀರ ತಲುಪಿದೆ. ಸ್ಥಳೀಯ ಮೀನುಗಾರರು ಹಾಗೂ ಕ್ರೇನ್ ಸಹಾಯದಿಂದ ಮೇಲೆತ್ತಲಾಯಿತು. ಬೋಟು ಪೂರ್ಣಪ್ರಮಾಣದಲ್ಲಿ ಹಾನಿಗೀಡಾಗಿದ್ದು 25ರಿಂದ 28 ಲಕ್ಷ ರೂ. ನಷ್ಟ ಎಂದು ಅಂದಾಜಿಸಲಾಗಿದೆ. ಬೋಟ್ ಸಮುದ್ರದಲ್ಲಿ ಬಾಕಿಯಾಗಿದ್ದ ಕಾರಣ ತಡವಾಗಿ ದೂರು ನೀಡಿದ್ದು ಕರಾವಳಿ ಕಾವಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.