Advertisement

ರಾಜ್ಯ ಕರಾವಳಿಗೂ ಬೋಟ್‌ ಆ್ಯಂಬುಲೆನ್ಸ್‌; ಕಡಲಿನಲ್ಲೇ ಚಿಕಿತ್ಸೆ ಸೌಲಭ್ಯ

11:39 PM Sep 03, 2020 | mahesh |

ಮಂಗಳೂರು: ಕಡಲಿನಲ್ಲಿ ಪ್ರಾಣಾಪಾಯಕ್ಕೆ ಸಿಲುಕಿದವರ ರಕ್ಷಣೆಗಾಗಿ “ಬೋಟ್‌ ಆ್ಯಂಬುಲೆನ್ಸ್‌’ ಸೇವೆಯನ್ನು ರಾಜ್ಯದಲ್ಲಿಯೂ ಆರಂಭಿಸಲು ನಿರ್ಧರಿಸಲಾಗಿದೆ. ಕೇರಳ ಸರಕಾರವು “ಮರೈನ್‌ ಆ್ಯಂಬುಲೆನ್ಸ್‌’ ಸೇವೆ ಆರಂಭಿಸಿದ ಅನಂತರ ರಾಜ್ಯದ ಮೀನುಗಾರರಿಂದಲೂ ಬೇಡಿಕೆ ಬಲಗೊಂಡಿರುವ ಹಿನ್ನೆಲೆಯಲ್ಲಿ ಮೀನುಗಾರಿಕಾ ಇಲಾಖೆಯು ಅದೇ ಮಾದರಿಯಲ್ಲಿ, ಅಗತ್ಯ ಬಿದ್ದರೆ ಮತ್ತಷ್ಟು ಸುಧಾರಿತವಾದ ಆ್ಯಂಬುಲೆನ್ಸ್‌ ವ್ಯವಸ್ಥೆ ರೂಪಿಸಲು ಮುಂದಾಗಿದೆ.

Advertisement

ಏನಿದು ಬೋಟ್‌ ಆ್ಯಂಬುಲೆನ್ಸ್‌?
ಸಮುದ್ರದಲ್ಲಿ ತುರ್ತಾಗಿ ಜೀವ ಉಳಿಸಲು ಅಗತ್ಯವಿರುವ ವೈದ್ಯಕೀಯ ಸೌಲಭ್ಯಗಳನ್ನು ಒಳಗೊಂಡ ಬೋಟ್‌/ನೌಕೆ ಇದಾಗಿರುತ್ತದೆ. ಈ ಬೋಟ್‌ 23 ಮೀ. ಉದ್ದ ಹಾಗೂ 5.5 ಮೀ. ಅಗಲವಿರುತ್ತದೆ. ಗಂಟೆಗೆ 14 ನಾಟಿಕಲ್‌ ಮೈಲು ವೇಗದಲ್ಲಿ ಸಂಚರಿಸಬಲ್ಲದು. ಏಕಕಾಲದಲ್ಲಿ 10 ಮಂದಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಇರುತ್ತದೆ. ನಾಲ್ವರು ಈಜುಗಾರರು, ಅಗತ್ಯ ಔಷಧಗಳು, ತಜ್ಞ ವೈದ್ಯರು, ಸುವ್ಯವಸ್ಥಿತ ಚಿಕಿತ್ಸಾ ಕೇಂದ್ರ, ಶವಾಗಾರ ಮೊದಲಾದವುಗಳನ್ನು ಒಳಗೊಂಡಿರುತ್ತದೆ. ಎರಡು ಬೋಟ್‌ಗಳಿಗೆ ಒಟ್ಟು 18.74 ಕೋ.ರೂ. ವೆಚ್ಚವಾಗಿದೆ.

ಕನಿಷ್ಠ ಒಂದಾದರೂ ಬೇಕು
ರಾಜ್ಯದ ಕಡಲತೀರ ಕೇರಳ ಗಡಿಯಿಂದ ಗೋವಾ ಗಡಿಯವರೆಗೆ 320 ಕಿ.ಮೀ. ಉದ್ದವಿದ್ದು ಮೂರು ಜಿಲ್ಲೆಗಳಲ್ಲಿ ಹಾದು ಹೋಗುತ್ತದೆ. 12 ಮೀನುಗಾರಿಕಾ ಬಂದರುಗಳಿವೆ. 70,000 ಬೋಟ್‌ಗಳಲ್ಲಿ ಲಕ್ಷಕ್ಕೂ ಅಧಿಕ ಮೀನುಗಾರರು ದುಡಿಯುತ್ತಿದ್ದಾರೆ. ಆಗಾಗ ಅವಘಡಗಳು ಸಂಭವಿಸುತ್ತಿರುತ್ತವೆ. ಬೀಚ್‌ಗೆ ಬರುವ ಪ್ರವಾಸಿಗರು ಸಮುದ್ರ ಪಾಲಾಗುವ ಘಟನೆಗಳೂ ನಡೆಯುತ್ತಿವೆ. ಕೇರಳದಲ್ಲಿ 2 “ಬೋಟ್‌ ಆ್ಯಂಬುಲೆನ್ಸ್‌’ಗಳಿದ್ದು, ರಾಜ್ಯಕ್ಕೆ ಒಂದನ್ನಾದರೂ ಕೂಡಲೇ ಒದಗಿಸಿಕೊಡಬೇಕು ಎಂದು ಮೀನುಗಾರ ಮುಖಂಡರು ಆಗ್ರಹಿಸಿದ್ದಾರೆ.

ಸದ್ಯ ಪ್ರಥಮ ಚಿಕಿತ್ಸೆ ಮಾತ್ರ
ರಾಜ್ಯದಲ್ಲಿ ಸದ್ಯ ಮೀನುಗಾರರ ಜೀವರಕ್ಷಣೆಗೆಂದು ಪ್ರತ್ಯೇಕ ವ್ಯವಸ್ಥೆ ಇಲ್ಲ. ಕರಾವಳಿ ಕಾವಲು ಪಡೆಯವರಲ್ಲಿ ಇಂಟರ್‌ಸೆಪ್ಟರ್‌ ಬೋಟ್‌ಗಳು, ತಟರಕ್ಷಣಾ ಪಡೆಯವರಲ್ಲಿ ಹಡಗುಗಳಿವೆ. ಅವು ಕಡಲನ್ನು ಕಾಯುವುದಲ್ಲದೆ ಅಪಾಯದಲ್ಲಿರುವವರ ರಕ್ಷಣೆಗೂ ಧಾವಿಸುತ್ತವೆ. ಪ್ರಥಮ ಚಿಕಿತ್ಸೆ ಹೊರತು ಬೇರೆ ವ್ಯವಸ್ಥೆ ಅವರಲ್ಲಿಲ್ಲ. ಚಿಕಿತ್ಸೆ ಅಗತ್ಯವೆನಿಸಿದರೆ ದಡಸೇರುವ ತನಕ ಕಾಯಲೇಬೇಕು. ಮೀನುಗಾರಿಕೆ ಸಂದರ್ಭ 2018ರಿಂದ 2020ರ ಆಗಸ್ಟ್‌ ವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 89 ಮಂದಿ, ಉಡುಪಿ ಜಿಲ್ಲೆಯಲ್ಲಿ 70 ಮಂದಿ ಮೃತಪಟ್ಟಿದ್ದಾರೆ. ದ.ಕ. ಜಿಲ್ಲೆಯಲ್ಲಿ 2018 – 2019ರಲ್ಲಿ 22 ಮಂದಿ ಮೃತಪಟ್ಟಿದ್ದಾರೆ.

ಕೇರಳದ ಅಧಿಕಾರಿಗಳಿಂದ ಸಮಗ್ರ ವರದಿ ತರಿಸಿ ಅದೇ ಮಾದರಿಯಲ್ಲಿ, ಅಗತ್ಯವಾದರೆ ಅದಕ್ಕಿಂತಲೂ ಸುಧಾರಿತ ರೀತಿಯಲ್ಲಿ ಬೋಟ್‌ ಆ್ಯಂಬುಲೆನ್ಸ್‌ ವ್ಯವಸ್ಥೆಯನ್ನು ನಮ್ಮಲ್ಲೂ ಮಾಡಲಾಗುವುದು. ಈ ಬಗ್ಗೆ ಇಲಾಖೆಯ ನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ.
– ಕೋಟ ಶ್ರೀನಿವಾಸ ಪೂಜಾರಿ, ಬಂದರು, ಮೀನುಗಾರಿಕಾ ಸಚಿವ

Advertisement

ಕರಾವಳಿ ಕಾವಲು ಪಡೆಯು ತೀರದ ಭದ್ರತೆ ಕಾಪಾಡುವ ಜತೆಗೆ ಕಡಲಿನಲ್ಲಿ ಅವಘಡಗಳಾದಾಗ ಜೀವರಕ್ಷಣೆಯ ಕೆಲಸವನ್ನೂ ನಡೆಸುತ್ತಿದೆ. 2019ರಿಂದ ಆಗಸ್ಟ್‌ ವರೆಗೆ 56 ಮಂದಿಯ ಜೀವ ಉಳಿಸಿದ್ದೇವೆ. ಪ್ರಥಮ ಚಿಕಿತ್ಸೆಯನ್ನೂ ನೀಡುತ್ತೇವೆ. ಬೋಟ್‌ ಆ್ಯಂಬುಲೆನ್ಸ್‌ ಇದ್ದರೆ ತುರ್ತು ಚಿಕಿತ್ಸೆಗೆ ಅನುಕೂಲ.
– ಚೇತನ್‌ ಕುಮಾರ್‌, ಎಸ್‌ಪಿ, ರಾಜ್ಯ ಕರಾವಳಿ ಕಾವಲು ಪೊಲೀಸ್‌

ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next