Advertisement

ಸಜ್ಜನ ರಾಜಕಾರಣಿಗೆ ಅಂತಿಮ ವಿದಾಯ

06:45 AM May 05, 2018 | |

ಬೆಂಗಳೂರು: ಚುನಾವಣಾ ಪ್ರಚಾರದ ವೇಳೆ ಹಠಾತ್‌ ಹೃದಯಾಘಾತಕ್ಕೆ ಒಳಗಾಗಿ ತೀವ್ರ ಅಸ್ವಸ್ಥಗೊಂಡು ಗುರುವಾರ ರಾತ್ರಿ ನಿಧನರಾದ ಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಸಕ ಬಿ.ಎನ್‌.ವಿಜಯಕುಮಾರ್‌ ಪಾರ್ಥಿವ ಶರೀರದ ಅಂತ್ಯಕ್ರಿಯೆ ಚಾಮರಾಜಪೇಟೆ ಹಿಂದೂ ರುದ್ರಭೂಮಿಯಲ್ಲಿ ಶುಕ್ರವಾರ ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

Advertisement

ಮೃತರ ಅಂತಿಮ ದರ್ಶನಕ್ಕೆ ಜಯನಗರ ನಿವಾಸದ ಬಳಿ ಬೆಳಗ್ಗೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಪಕ್ಷದ ನಾಯಕರು, ಮುಖಂಡರು, ಕಾರ್ಯಕರ್ತರು, ಬೆಂಬಲಿಗರು,ಆಪ್ತರು, ನಾನಾ ಪಕ್ಷಗಳ ಮುಖಂಡರು, ಸಾರ್ವಜನಿಕರು ಸೇರಿದಂತೆ ಜನಸಾಗರವೇ ಅಂತಿಮ ದರ್ಶನಕ್ಕೆ ಹರಿದು ಬಂದಿತ್ತು.ಮಧ್ಯಾಹ್ನ 3 ಗಂಟೆಗೆ ತೆರೆದ ವಾಹನದಲ್ಲಿ ಜಯನಗರ ನಿವಾಸದಿಂದ ಚಾಮರಾಜಪೇಟೆಯ ಹಿಂದು ರುದ್ರಭೂಮಿಗೆ ಪಾರ್ಥೀವ ಶರೀರ ತರಲಾಯಿತು. ಸಂಜೆ 6.15ರ ವೇಳೆಗೆ ವೈದಿಕ ವಿಧಿವಿಧಾನದಂತೆ ಅಂತ್ಯಕ್ರಿಯೆ ನೆರವೇರಿತು.

ಸಹೋದರ ಪ್ರಹ್ಲಾದ್‌ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ವೇಳೆ ಬೆಂಬಲಿಗರಿಂದ “ವಂದೇ ಮಾತರಂ’, “ಅಮರ್‌ ರಹೇ ವಿಜಯಕುಮಾರ್‌’ ಎಂಬ ಘೋಷಣೆಗಳು ಮೊಳಗಿದವು.

ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಜಯಕುಮಾರ್‌ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌, ಹಿರಿಯ ಮುಖಂಡ ಎಸ್‌.ಎಂ.ಕೃಷ್ಣ, ಸಂಸದರಾದ ಶೋಭಾ ಕರಂದ್ಲಾಜೆ,ಪಿ.ಸಿ.ಮೋಹನ್‌, ರಾಜೀವ್‌ಗೌಡ, ಸಚಿವರಾದ ಕೆ.ಜೆ.ಜಾರ್ಜ್‌,ಎಂ.ಕೃಷ್ಣಪ್ಪ, ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್‌ ಹಲವು ಬಿಜೆಪಿ ಮುಖಂಡರು ಮೃತರ ಅಂತಿಮ ದರ್ಶನ ಪಡೆದರು. ಜಯನಗರ 4ನೇ ಬ್ಲಾಕ್‌ನ ಬಿಡಿಎ ವಾಣಿಜ್ಯ ಸಂಕೀರ್ಣದ ಮಳಿಗೆದಾರರು, ತರಕಾರಿ, ಬಟ್ಟೆ ವ್ಯಾಪಾರಿಗಳು ಸೇರಿದಂತೆ ಜಯನಗರದಲ್ಲಿ ಅಂಗಡಿದಾರರು ವ್ಯಾಪಾರ ಸ್ಥಗಿತಗೊಳಿಸಿ ಗೌರವ ಸಲ್ಲಿಸಿದರು.

ಶೋಕತಪ್ತ ಆಪ್ತ ಬಳಗ: ವಿಜಯಕುಮಾರ್‌ ಅಗಲಿಕೆಯಿಂದ ಆಘಾತಕ್ಕೆ ಒಳಗಾಗಿದ್ದ ಕೇಂದ್ರ ಸಚಿವ ಅನಂತಕುಮಾರ್‌
ಮಾತನಾಡಲಾಗದೆ ಕಣ್ಣೀರಿಟ್ಟರು. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರು, ಅನಂತಕುಮಾರ್‌ ಅವರನ್ನು ತಪ್ಪಿಕೊಂಡು ಗಳಗಳನೆ ಅತ್ತರು. ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಸಹ ಗದ್ಗದಿತರಾದರು. ಚುನಾವಣೆಯಲ್ಲಿ ಎದುರಾಳಿಗಳಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಸೌಮ್ಯಾ ಆರ್‌. ರೆಡ್ಡಿ, ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾರೆಡ್ಡಿ ಅವರು ಅಂತಿಮ ದರ್ಶನ ಪಡೆದರು.

Advertisement

ಮಾಜಿ ಸಚಿವರಾದ ವಿ.ಸೋಮಣ್ಣ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಶಾಸಕರಾದ ಎಲ್‌.ಎ.ರವಿಸುಬ್ರಹ್ಮಣ್ಯ, ಎಸ್‌.ರಘು, ಅರವಿಂದ ಲಿಂಬಾವಳಿ, ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ವೈ.ಎ.ನಾರಾಯಣಸ್ವಾಮಿ, ಎನ್‌.ಎ.ಹ್ಯಾರಿಸ್‌ ಇತರರು ಅಂತಿಮ ದರ್ಶನ ಪಡೆದರು. ಗುರುವಾರ ಸಂಜೆ ಪಟ್ಟಾಭಿರಾಮನಗರ ವಾರ್ಡ್‌ನಲ್ಲಿ ಪಾದಯಾತ್ರೆ ವೇಳೆ ಹೃದಯಾಘಾತಕ್ಕೆ ಒಳಗಾದ
ವಿಜಯಕುಮಾರ್‌ ಅವರು ದಿಢೀರ್‌ ಕುಸಿದರು. ತಕ್ಷಣವೇ ಅವರನ್ನು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ದಾಖಲಿಸಿದರೂ ಚಿಕಿತ್ಸೆ ಫ‌ಲಕಾರಿಯಾಗದೆ ಗುರುವಾರ ಮಧ್ಯರಾತ್ರಿ 1 ಗಂಟೆ ವೇಳೆಗೆ ಮೃತಪಟ್ಟರು. ವಿಜಯಕುಮಾರ್‌ ತಮ್ಮ ನೇತ್ರಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಅವರ ಇಚ್ಛೆಯಂತೆ ಕುಟುಂಬದ ಸದಸ್ಯರು ಅವರ ಎರಡೂ ಕಣ್ಣುಗಳನ್ನು “ಶ್ರದಾಟಛಿ ಐ ಬ್ಯಾಂಕ್‌’ಗೆ ದಾನ ಮಾಡಿದರು. ನಾಲ್ವರು ಸಹೋದರರು, ಒಬ್ಬ ಸಹೋದರಿಯನ್ನು ಅವರು ಅಗಲಿದ್ದಾರೆ.

ಸಂಸಾರದ ಬಂಧನವಿಲ್ಲದೆ ಇಡೀ ಜೀವನವನ್ನು ಸಾರ್ವಜನಿಕ ಸೇವೆಗೆ ಮುಡಿಪಾಗಿಟ್ಟಿದ್ದ ವಿಜಯಕುಮಾರ್‌ ಅವರ ನಿಧನದಿಂದ ಕರ್ನಾಟಕ ಒಬ್ಬ ಪ್ರಾಮಾಣಿಕ ರಾಜಕಾರಣಿಯನ್ನು ಕಳೆದುಕೊಂಡಿದೆ.

ಅಧಿಕಾರ, ಹಣದ ವಿಷವರ್ತುಲದ ರಾಜಕಾರಣದಿಂದ ದೂರವಿದ್ದು, ನಿಸ್ವಾರ್ಥ ಸೇವೆಗೆ ಜೀವನವನ್ನು ಮುಡಿಪಾಗಿಟ್ಟ ವಿರಳ ವ್ಯಕ್ತಿ.
– ಅನಂತಕುಮಾರ್‌, ಕೇಂದ್ರ ಸಚಿವ

ಸರಳ, ಸಜ್ಜನಿಕೆಯ ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ಎರಡು ಬಾರಿ ಶಾಸಕರಾಗಿದ್ದ ಅವರು ಪುನರಾಯ್ಕೆ ಬಯಸಿದ್ದರು. ಇತ್ತೀಚೆಗೆ ಅವರೊಂದಿಗೆ ಮಾತನಾಡಿ, ಒತ್ತಡ ಮಾಡಿಕೊಳ್ಳದಂತೆ ಹೇಳಿದ್ದೆ. ಜೀವನವಿಡೀ ಸಂಘ ಪರಿವಾರ,
ಪಕ್ಷಕ್ಕಾಗಿ ದುಡಿದವರು.
– ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ಆರ್‌ಎಸ್‌ಎಸ್‌ ಕಾರ್ಯಕರ್ತರಾಗಿದ್ದ ವಿಜಯಕುಮಾರ್‌ ನಿಧನ ಆಘಾತ ತಂದಿದೆ. ಅವರ ನಿಧನದಿಂದ ದೇಶಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ದತ್ತಾತ್ರೇಯ ಹೊಸಬಾಳೆಯವರು ಸಂತಾಪ ಸಂದೇಶ ಕಳುಹಿಸಿದ್ದಾರೆ.
– ಬಿ.ನಾಗರಾಜ್‌, ಆರ್‌ಎಸ್‌ಎಸ್‌ ಕ್ಷೇತ್ರೀಯ ಸರಸಂಚಾಲಕ

ಏನು ಹೇಳಬೇಕೋ ತೋಚುತ್ತಿಲ್ಲ. ಬೆಂಗಳೂರಿಗೆ ಇದು ದೊಡ್ಡ ಆಘಾತ. ನಾನು ಬಿಜೆಪಿ ರಾಜ್ಯಾಧ್ಯಕ್ಷನಾಗಿದ್ದಾಗ ಅವರು ಬೆಂಗಳೂರು ಘಟಕದ ಅಧ್ಯಕ್ಷರಾಗಿದ್ದರು. ಇನ್ನೂ 15 ವರ್ಷ ಅವರ ಸೇವೆ ನಿರೀಕ್ಷಿಸಿದ್ದೆವು. ಮೇಲಿಂದಲೇ ಅವರು ನಮಗೆ ಆಶೀರ್ವಾದ ಮಾಡಲಿ.
– ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

ವಿಜಯಕುಮಾರ್‌ ಅವರ ಅಗಲಿಕೆ ತೀವ್ರ ನೋವು ತಂದಿದೆ. 35 ವರ್ಷದಿಂದ ಅವರೊಂದಿಗೆ ಒಡನಾಟವಿತ್ತು. ಬೆಂಗಳೂರು ನಗರದಲ್ಲಿ ಬಿಜೆಪಿ ದೊಡ್ಡ ಮಟ್ಟಕ್ಕೆ ಬೆಳೆಯಲು ಅವರೇ ಕಾರಣ.
– ಆರ್‌.ಅಶೋಕ, ಮಾಜಿ ಉಪಮುಖ್ಯಮಂತ್ರಿ

ವಿಜಯಕುಮಾರ್‌ ನನ್ನ ಹಳೆಯ ಸ್ನೇಹಿತರು. ಇತ್ತೀಚೆಗೆ ಅವರಿಗೆ ಹೃದಯ ಶಸOಉಚಿಕಿತ್ಸೆಯಾಗಿತ್ತು. ಚುನಾವಣಾ ಪ್ರಚಾರದ ವೇಳೆ ಹೃದಯಾಘಾತಕ್ಕೆ ಒಳಗಾದಾಗ ಗುಣಮುಖರಾಗುವ ನಿರೀಕ್ಷೆ ಇತ್ತು. ನನ್ನ ವಿರುದಟಛಿ ಎರಡು ಬಾರಿ ಸ್ಪರ್ಧಿಸಿದ್ದರೂ ನಾವಿಬ್ಬರು ಎಂದೂ ಸಣ್ಣ ವಿಚಾರಕ್ಕೂ ಜಗಳವಾಡಿದವರಲ್ಲ.
– ರಾಮಲಿಂಗಾರೆಡ್ಡಿ, ಗೃಹ ಸಚಿವ

ಸಾವಿನ ವಿಚಾರ ಕೇಳಿ ದಿಗ್ಭ್ರಮೆಯಾಯಿತು. ಅವರೊಬ್ಬ ಮಾದರಿ ಶಾಸಕರಾಗಿದ್ದರು. ಪ್ರತಿ ಹಂತದಲ್ಲಿ ನನಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಅವರ ಮಾತುಗಾರಿಕೆ ನಮಗೆಲ್ಲಾ ಸ್ಫೂರ್ತಿ.
– ಜಗದೀಶ ಶೆಟ್ಟರ್‌, ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next