Advertisement

ಬಿಎಂಟಿಸಿ ನಿದ್ದೆಗೆಡಿಸಿದ ಡೀಸೆಲ್‌ ಕಳ್ಳರು

12:42 AM May 07, 2019 | Lakshmi GovindaRaj |

ಬೆಂಗಳೂರು: ಡಿಪೋಗಳಿಗೆ ಸೀಮಿತವಾಗಿದ್ದ ಡೀಸೆಲ್‌ ಕಳವು ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ನಗರದ ವಿವಿಧಡೆ ರಾತ್ರಿ ನಿಲುಗಡೆಯಾಗುವ ಬಸ್‌ಗಳಲ್ಲೂ ಕಂಡುಬರುತ್ತಿರುವುದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಗೆ ದೊಡ್ಡ ತಲೆನೋವಾಗಿದೆ.

Advertisement

ರಾತ್ರಿ ಪಾಳಿ ಬಸ್‌ಗಳು ನಗರದ ಹೊರವಲಯದಲ್ಲಿ ನಿಲುಗಡೆ ಆಗಿರುತ್ತವೆ. ಆ ಬಸ್‌ಗಳ ಟ್ಯಾಂಕರ್‌ನಿಂದ ಕಿಡಿಗೇಡಿಗಳು ನೂರಾರು ಲೀ. ಡೀಸೆಲ್‌ ಕಳವು ಮಾಡುತ್ತಿದ್ದಾರೆ. ಇದರಲ್ಲಿ ಕೆಲವೇ ಕೆಲವು ವರದಿ ಆಗುತ್ತವೆ. ಇನ್ನು ಹಲವು ಬೆಳಕಿಗೆ ಬರುವುದೇ ಇಲ್ಲ. ಈ “ರಾತ್ರಿ ಕಾರ್ಯಾಚರಣೆ’ ಸಂಸ್ಥೆ ಅಧಿಕಾರಿಗಳ ನಿದ್ದೆಗೆಡಿಸಿದೆ.

ಎರಡು ದಿನಗಳ ಹಿಂದೆ ಸೋಲದೇವನಹಳ್ಳಿ ಬಳಿ ಸುಮಾರು 100 ಲೀ.ಗೂ ಅಧಿಕ ಡೀಸೆಲ್‌ ಕಳವು ಆಗಿದೆ ಎಂದು ಸ್ವತಃ ಬಸ್‌ ಚಾಲಕ ಹತ್ತಿರದ ಪೊಲೀಸ್‌ ಠಾಣೆಗೆ ದೂರು ದಾಖಲಿಸಿದ್ದಾರೆ. ಇದೇ ರೀತಿ, ಕೆಲವು ತಿಂಗಳುಗಳ ಹಿಂದೆ ಹೊಸಕೋಟೆ, ದೇವನಂದಿಯಲ್ಲೂ ನಿಲುಗಡೆಯಾದ ಬಸ್‌ಗಳಲ್ಲಿನ ಡೀಸೆಲ್‌ ಕಳವು ಆಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕಳವು ಪುನರಾವರ್ತನೆ ಆಗುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಕಳ್ಳತನ ನಡೆದಿರುವುದು ಬೆಳಕಿಗೆಬಂದರೆ, ಆಯಾ ಘಟಕಗಳ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ. ಹಾಗಾಗಿ, ಬುಕ್‌ ಅಡ್ಜಸ್ಟ್‌ಮೆಂಟ್‌ (?) ಮಾಡಲಾಗುತ್ತದೆ. ರಿಪೇರಿ ನೆಪದಲ್ಲಿ ಬರುವ ವಾಹನಗಳಲ್ಲಿನ ಡೀಸೆಲ್‌ ಕೂಡ ಕೆಲವೊಮ್ಮೆ ಮಾಯವಾಗುತ್ತದೆ ಎನ್ನಲಾಗಿದೆ.

ನಿರ್ಲಕ್ಷ್ಯದಿಂದ ಕಳ್ಳತನ: ರಾತ್ರಿ ಪಾಳಿಯಲ್ಲಿ ಸಾವಿರಕ್ಕೂ ಅಧಿಕ ಬಸ್‌ಗಳು ಕಾರ್ಯಾಚರಣೆ ಮಾಡುತ್ತವೆ. ಅವುಗಳಲ್ಲಿ ಬಹುತೇಕ ದೇವನಹಳ್ಳಿ, ಹೊಸಕೋಟೆ, ಹೆಸರಘಟ್ಟ, ನೆಲಮಂಗಲ, ಬಗಲುಗುಂಟೆ ಸೇರಿದಂತೆ ನಗರದ ಹೊರವಲಯದಲ್ಲಿ ನಿಲುಗಡೆ ಆಗುತ್ತವೆ. ಹೀಗೆ ನಿಲುಗಡೆ ಆಗುವ ಬಸ್‌ಗಳಲ್ಲಿ ಸ್ವತಃ ಚಾಲಕ ಮತ್ತು ನಿರ್ವಾಹಕ ಬಸ್‌ಗಳಲ್ಲೇ ಇರಬೇಕು ಎಂಬುದು ನಿಯಮ.

Advertisement

ಊಟಕ್ಕೆ ಹೊರಟರೂ ಒಬ್ಬರ ನಂತರ ಮತ್ತೂಬ್ಬರು ತೆರಳಬೇಕು ಎಂದೂ ಹೇಳಲಾಗಿದೆ. ಆದರೆ, ಈ ನಿಯಮ ಪಾಲನೆ ಪರಿಣಾಮಕಾರಿಯಾಗಿ ಆಗುತ್ತಿಲ್ಲ. ಅಲ್ಲದೆ, ಬಸ್‌ನ ಡೀಸೆಲ್‌ ಟ್ಯಾಂಕರ್‌ಗಳಿಗೆ ಕೀಲಿ ಕೂಡ ಹಾಕಿರುವುದಿಲ್ಲ. ಇದರಿಂದ ಕಳ್ಳತನಕ್ಕೆ ಸುಲಭವಾಗಿ ದಾರಿ ಮಾಡಿಕೊಟ್ಟಂತಾಗಿದೆ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಇಡೀ ಬಿಎಂಟಿಸಿ ವ್ಯಾಪ್ತಿಯಲ್ಲಿ ನಿಲುಗಡೆಯಾಗುವ ಸಾವಿರಾರು ಬಸ್‌ಗಳು ಮತ್ತು ಎಲ್ಲ 45 ಡಿಪೋಗಳ ಮೇಲೆ ಕಣ್ಗಾವಲಿಗೆ ಇರುವ “ಸಾರಥಿ’ಗಳು ಎರಡೇ ಎರಡು! ರಾತ್ರಿ ಗಸ್ತು ತಿರುಗುವ ಈ ವಾಹನಗಳಲ್ಲಿ ತಲಾ ಇಬ್ಬರು ಸಿಬ್ಬಂದಿ ಇರುತ್ತಾರೆ. ರಾತ್ರಿ 10ರಿಂದ ಬೆಳಗಿನಜಾವ 5ರವರೆಗೆ ಸಾರಥಿಗಳು 20ರಿಂದ 25 ಡಿಪೋಗಳು, ನಿಲ್ದಾಣಗಳಿಗೆ ಭೇಟಿ ನೀಡಿ, ತಪಾಸಣೆ ನಡೆಸುತ್ತವೆ.

ಹೊರವಲಯದಲ್ಲಿ ಬಸ್‌ಗಳು ನಿಲುಗಡೆ ಆಗಿದ್ದರೆ, ಅದರಲ್ಲಿ ಸಿಬ್ಬಂದಿ ಇದ್ದಾರೆಯೇ ಹಾಗೂ ಅವರು ಎಚ್ಚರವಾಗಿದ್ದಾರೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುತ್ತದೆ ಎಂದು ಭದ್ರತಾ ಮತ್ತು ಜಾಗೃತ ದಳದ ಸಿಬ್ಬಂದಿ ಸ್ಪಷ್ಟಪಡಿಸುತ್ತಾರೆ. ಆದರೆ, ವಾಸ್ತವವಾಗಿ ಕೇವಲ ಎರಡು ವಾಹನಗಳಲ್ಲಿ ಇದೆಲ್ಲವೂ ಸಾಧ್ಯವೇ? ಇದ್ದರೂ ಆ ಕಾರ್ಯವು ಸಮರ್ಪಕವಾಗಿ ನಡೆಯುವುದು ವಾಸ್ತವವಾಗಿ ಅಸಾಧ್ಯ ಎಂದೂ ಅಧಿಕಾರಿಗಳು ಹೇಳುತ್ತಾರೆ.

ವರ್ಷಕ್ಕೆ ಒಂದೆರಡು ಕೇಸು ಅಷ್ಟೇ: ಪದೇ ಪದೆ ಈ ರೀತಿ ಪ್ರಕರಣಗಳು ನಡೆಯುವುದಿಲ್ಲ. ವರ್ಷದಲ್ಲಿ ಒಂದೆರಡು ಘಟನೆಗಳು ವರದಿ ಆಗಿರುತ್ತವೆ ಅಷ್ಟೇ. ಅದೇನೇ ಇರಲಿ, ಈ ಮಧ್ಯೆ ಕಳ್ಳತನ ಪ್ರಕರಣಗಳು ಪುನರಾವರ್ತನೆ ಆಗುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ಗಸ್ತು ತಿರುಗುವ ಸಾರಥಿಗಳ ಸಂಖ್ಯೆ ಹೆಚ್ಚಿಸಲು ಚಿಂತನೆ ನಡೆದಿದೆ. ಸಿಸಿ ಕ್ಯಾಮೆರಾ ಅಳವಡಿಕೆ ಮಾಡುವುದು, ಪೊಲೀಸರ ನೆರವು, ಮೆಷ್‌ ಹಾಕುವುದು, ಲಾಕ್‌ ಮಾಡುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚಿಂತನೆ ನಡೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಸಾಕಷ್ಟು ಬಂದೋಬಸ್ತ್ ಇರುತ್ತದೆ. ಸಂಸ್ಥೆಯ ಸಿಬ್ಬಂದಿಯೇ ಬಸ್‌ಗಳಲ್ಲಿ ಠಿಕಾಣಿ ಹೂಡಿರುತ್ತಾರೆ. ಆದರೂ, ಕಿಡಿಗೇಡಿಗಳು ಇಂತಹ ಕೃತ್ಯ ಎಸಗಿರುವುದು ಬೆಳಕಿಗೆ ಬರುತ್ತಿವೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಏನು ಕ್ರಮ ಕೈಗೊಳ್ಳಬಹುದು ಎನ್ನುವುದರ ಬಗ್ಗೆ ಒಂದೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು.
ಅನುಪಮ್‌ ಅಗರವಾಲ್‌, ನಿರ್ದೇಶಕರು (ಭದ್ರತಾ ಮತ್ತು ಜಾಗೃತಿ), ಬಿಎಂಟಿಸಿ

Advertisement

Udayavani is now on Telegram. Click here to join our channel and stay updated with the latest news.

Next