Advertisement

ಬಿಎಂಟಿಸಿಗೆ ಲಾಭವಾದ ಚುನಾವಣೆ

12:43 AM Apr 29, 2019 | Lakshmi GovindaRaju |

ಬೆಂಗಳೂರು: ಲೋಕಸಭಾ ಚುನಾವಣೆಯಿಂದ ಅಭ್ಯರ್ಥಿಗಳಿಗೆ ಹಾಗೂ ಮತದಾರರಿಗೆ ಎಷ್ಟರಮಟ್ಟಿಗೆ ಲಾಭ ಆಗಿದೆಯೋ ಗೊತ್ತಿಲ್ಲ. ಆದರೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪಾಲಿಗೆ ಮಾತ್ರ ಹಿಂದೆಂದಿಗಿಂತ ಲಾಭವಾಗಿದೆ!

Advertisement

ಹೌದು, ರಾಜ್ಯದಲ್ಲಿ ಏಪ್ರಿಲ್‌ 18ರಂದು ನಡೆದ ಮೊದಲ ಹಂತದ ಚುನಾವಣೆ ವೇಳೆ ಕೇವಲ ಎರಡು ದಿನ (ಏ. 17 ಮತ್ತು 18)ಗಳಲ್ಲಿ ಬಿಎಂಟಿಸಿಗೆ ಮೂರೂವರೆ ಕೋಟಿ ರೂ. ಹರಿದುಬಂದಿದೆ. ಹಿಂದಿನ 2014ರ ಲೋಕಸಭಾ ಮತ್ತು 2018ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ, ಅತಿ ಹೆಚ್ಚು ಲಾಭ ಇದಾಗಿದೆ. ಹಾಗಾಗಿ, ಆರ್ಥಿಕ ಸಂಕಷ್ಟದಲ್ಲಿರುವ ಸಂಸ್ಥೆಗೆ ಈ ಚುನಾವಣೆಯು ಕೊಂಚ ನಿರಾಳಭಾವ ಮೂಡಿಸಿದೆ.

ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಚುನಾವಣಾ ಸಿಬ್ಬಂದಿಯನ್ನು ಮತಗಟ್ಟೆಗಳಿಗೆ ಕೊಂಡೊಯ್ಯಲು ಮತ್ತು ವಾಪಸ್‌ ಕರೆತರಲು ಎರಡು ದಿನಗಳ ಮಟ್ಟಿಗೆ ಬಿಎಂಟಿಸಿಯಿಂದ 1,700 ಬಸ್‌ಗಳನ್ನು ಚುನಾವಣಾ ಆಯೋಗ ಗುತ್ತಿಗೆ ಪಡೆದಿತ್ತು. ಒಂದು ಬಸ್‌ಗೆ ಒಂದು ದಿನಕ್ಕೆ 10 ಸಾವಿರ ರೂ. ಬಾಡಿಗೆ ನಿಗದಿಪಡಿಸಲಾಗಿತ್ತು. ಇದರಿಂದ ಒಟ್ಟಾರೆ 3.40 ಕೋಟಿ ರೂ. ಆದಾಯ ಹರಿದುಬಂದಿದೆ.

2014ರ ಲೋಕಸಭಾ ಚುನಾವಣೆಯಲ್ಲಿ 1,053 ಬಸ್‌ಗಳನ್ನು ಪಡೆಯಲಾಗಿತ್ತು. ಇದರಿಂದ ಪ್ರತಿ ಬಸ್‌ಗೆ 8,600 ರೂ. ಬಾಡಿಗೆಯಂತೆ 90.55 ಲಕ್ಷ ರೂ. ಬಂದಿತ್ತು. ಇನ್ನು ಕಳೆದ ವಿಧಾನಸಭಾ ಚುನಾವಣೆ ವೇಳೆ 1,500 ಬಸ್‌ಗಳನ್ನು ಬಾಡಿಗೆ ಪಡೆಯಲಾಗಿತ್ತು. ಸುಮಾರು ಮೂರು ಕೋಟಿ ರೂ. ಆದಾಯ ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಚಿತವಾಗಿ ಬೇಡಿಕೆ; ವಿಭಾಗದ ಶ್ರಮ ಕಾರಣ: “ಈ ಬಾರಿ ವಾಣಿಜ್ಯ ವಿಭಾಗದ ಅಧಿಕಾರಿಗಳು ಹೆಚ್ಚು ಶ್ರಮ ಹಾಕಿದ್ದು, ಮುಂಚಿತವಾಗಿ ಬಸ್‌ಗಳಿಗೆ ಬೇಡಿಕೆ ಬಂದಿತ್ತು. ಅದಕ್ಕೆ ಪೂರಕವಾಗಿ ಬಸ್‌ಗಳು ಮತ್ತು ಸಿಬ್ಬಂದಿಯನ್ನು ಸಜ್ಜುಗೊಳಿಸಲಾಗಿತ್ತು. ಪರಿಣಾಮ ಹೆಚ್ಚು ಆದಾಯ ಬಂದಿದೆ’ ಎಂದು ಬಿಎಂಟಿಸಿ ನಿರ್ದೇಶಕ (ಭದ್ರತಾ ಮತ್ತು ಜಾಗೃತೆ) ಅನುಪಮ್‌ ಅಗರವಾಲ್‌ ಹೇಳಿದರು.

Advertisement

ಇನ್ನೂ ವಿಶೇಷವೆಂದರೆ ಈ ಎರಡೂ ದಿನಗಳಲ್ಲಿ ಬಸ್‌ ಕಾರ್ಯಾಚರಣೆ ಮಾಡಿದ್ದೇ ಕಡಿಮೆ! ಸಾಮಾನ್ಯವಾಗಿ ಸಂಸ್ಥೆಯ ಒಂದು ಬಸ್‌ ದಿನಕ್ಕೆ ಸರಾಸರಿ 220 ಕಿ.ಮೀ. ಸಂಚರಿಸುತ್ತದೆ. ಇದಕ್ಕಾಗಿ ನಿತ್ಯ ಸರಿಸುಮಾರು 45ರಿಂದ 50 ಸಾವಿರ ಲೀ. ಡೀಸೆಲ್‌ ಖರ್ಚಾಗುತ್ತದೆ. ಇದನ್ನು ಎರಡು ದಿನಗಳಿಗೆ ಲೆಕ್ಕಹಾಕಿದರೆ, 1,700 ಬಸ್‌ಗಳಿಗೆ 1.50ರಿಂದ 1.60 ಲಕ್ಷ ಲೀ. ಡೀಸೆಲ್‌ ಖರ್ಚಾಗುತ್ತದೆ.

ಡೀಸೆಲ್‌ ದರ ಲೀ.ಗೆ 68 ರೂ. ಹಿಡಿದರೂ 1.02 ಕೋಟಿ ರೂ. ಆಗುತ್ತದೆ. ಚುನಾವಣೆ ಸಂದರ್ಭದಲ್ಲಿ ಒಂದು ಬಸ್‌ ಸರಾಸರಿ 50ರಿಂದ 60 ಕಿ.ಮೀ. ಕಾರ್ಯಾಚರಣೆ ಮಾಡಿದ್ದು, ಅಬ್ಬಬ್ಟಾ ಎಂದರೆ 18ರಿಂದ 20 ಸಾವಿರ ಲೀ. ಡೀಸೆಲ್‌ ಖರ್ಚಾಗಿದೆ. ಇದರ ಮೊತ್ತ 13.60 ಲಕ್ಷ ರೂ. ಆಗುತ್ತದೆ. ಅಂದರೆ ಈ ನಿಟ್ಟಿನಿಂದಲೂ ಸಂಸ್ಥೆಗೆ ಸಾಕಷ್ಟು ಉಳಿತಾಯ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚುನಾವಣಾ ಆಯೋಗವೂ ಸರ್ಕಾರಿ ಬಸ್‌ಗಳಿಗೆ ಆದ್ಯತೆ ನೀಡಿರುವುದು ಸ್ವಾಗತಾರ್ಹ. ಮುಂದಿನ ದಿನಗಳಲ್ಲೂ ಇದೇ ರೀತಿ, ಆದ್ಯತೆ ಮೇರೆಗೆ ಸರ್ಕಾರಿ ಬಸ್‌ಗಳನ್ನೇ ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳುವುದರಿಂದ ಸಂಸ್ಥೆಗಳಿಗೆ ಅನುಕೂಲ ಆಗಲಿದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ. ಅಂದಹಾಗೆ ಬಿಎಂಟಿಸಿಯ ದಿನದ ಕಾರ್ಯಾಚರಣೆ ಆದಾಯ 3.75ರಿಂದ 4 ಲಕ್ಷ ರೂ. ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next