Advertisement

ಆರ್ಥಿಕ ಸಂಕಷ್ಟದಲ್ಲಿ ಬಿಎಂಟಿಸಿ

12:52 AM Aug 22, 2019 | Lakshmi GovindaRaj |

ಬೆಂಗಳೂರು: ಪ್ರತಿನಿತ್ಯ 40 ಲಕ್ಷ ಪ್ರಯಾಣಿಕರಿಗೆ ಸುರಕ್ಷಿತ ಸಂಚಾರ ಸೇವೆ ನೀಡುತ್ತಿರುವ ಬಿಎಂಟಿಸಿ ಸಿಬ್ಬಂದಿಯ ಜೀವನಕ್ಕೆ ಭದ್ರತೆ ಇಲ್ಲದಂತಾಗಿದ್ದು, ಒಂದು ವರ್ಷದಿಂದ ಸಂಸ್ಥೆಯು ಕಾರ್ಮಿಕರ ಭವಿಷ್ಯ ನಿಧಿ ಬಾಬ್ತಿನ ಮೊತ್ತ ಪಾವತಿಸಿಲ್ಲ. ಆರ್‌ಟಿಐ ಕಾರ್ಯಕರ್ತ ವಿ.ಎಸ್‌.ಯೋಗೇಶ್‌ ಗೌಡ ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಿದ್ದ ಅರ್ಜಿಗೆ ಉತ್ತರಿಸಿರುವ ಬಿಎಂಟಿಸಿ ಹಣಕಾಸು ವಿಭಾಗ, ಕಳೆದ ಒಂದು ವರ್ಷದಿಂದ ಕಾರ್ಮಿಕ ಭವಿಷ್ಯ ನಿಧಿ ಪಾವತಿಸಿಲ್ಲ ಎಂಬುದು ಬಹಿರಂಗಗೊಂಡಿದೆ.

Advertisement

ಜುಲೈ 2018ರಿಂದ ಜೂನ್‌ 2019ರವರೆಗಿನ ಬಿಎಂಟಿಸಿ ಕಾರ್ಮಿಕರ ಕಾರ್ಮಿಕ ಭವಿಷ್ಯ ನಿಧಿ ಬಾಬ್ತಿನ ಮೊತ್ತ ಪಾವತಿಸದ ಕಾರಣ ಸಂಸ್ಥೆಯ ಕಾರ್ಮಿಕ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದಾರೆ. ಬಿಎಂಟಿಸಿ ನೌಕರರ ಒಂದು ವರ್ಷದ ಪಿಎಫ್ (ಭವಿಷ್ಯನಿಧಿ) ಮೊತ್ತ 269.40 ಕೋಟಿ ರೂ. ಬಾಕಿ ಇದ್ದು ಈ ಮೊತ್ತವನ್ನು ಸಂಸ್ಥೆ ಈವರೆಗೆ ಪಾವತಿಸಿಲ್ಲ ಜತೆಗೆ ಕಾರ್ಮಿಕರ ಭವಿಷ್ಯ ನಿಧಿ ಸರಿಯಾದ ಸಮಯಕ್ಕೆ ಜಮೆ ಮಾಡದ ಕಾರಣ 64.28 ಲಕ್ಷ ರೂ. ಬಡ್ಡಿ ಕಟ್ಟಲಾಗಿದೆ.

ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಚಾಲಕ, ನಿರ್ವಾಹಕ, ಮೆಕಾನಿಕ್‌ ಮತ್ತು ಆಡಳಿತ ವರ್ಗ ಸೇರಿದಂತೆ 32ಸಾವಿರ ಸಿಬ್ಬಂದಿ ಇದ್ದಾರೆ. ಇವರ ಮಾಸಿಕ ವೇತನದಲ್ಲಿ ಭವಿಷ್ಯ ನಿಧಿ ಮೊತ್ತ ಕಡಿವಾಗಿದ್ದರೂ ಕಾರ್ಮಿಕ ಕಲ್ಯಾಣ ನಿಧಿ ಖಾತೆಗೆ ಜಮೆ ಮಾಡಿಲ್ಲ. ಹೀಗಾಗಿ, ಅಲ್ಲಿನ ಸಿಬ್ಬಂದಿ ಭವಿಷ್ಯದ ಭದ್ರತೆ ಬಗ್ಗೆ ಆತಂಕಗೊಂಡಿದ್ದಾರೆ. ಈ ಮಧ್ಯೆ, ಬಿಎಂಟಿಸಿಯಲ್ಲಿ ಪ್ರತಿ ತಿಂಗಳು 120 ರಿಂದ 150 ಸಿಬ್ಬಂದಿ ನಿವೃತ್ತಿ ಹೊಂದುತ್ತಾರೆ. ಅಂದರೆ ವಾರ್ಷಿಕ 1500 ದಿಂದ 1700 ನೌಕರರು ನಿವೃತ್ತಿ ಹೊಂದುತ್ತಿದ್ದಾರೆ. ಸಂಸ್ಥೆಯು ಭವಿಷ್ಯ ನಿಧಿ ಬಾಬ್ತು ಪಾವತಿಸದ ಕಾರಣ ನಿವೃತ್ತಿಯಾಗುತ್ತಿರುವವರಿಗೆ ಸಮಯಕ್ಕೆ ಸರಿಯಾಗಿ ಗ್ರಾಚ್ಯುಯಿಟಿ ಸಹ ಸಿಗುತಿಲ್ಲ.

ಈ ಬಗ್ಗೆ “ಉದಯವಾಣಿ’ಯೊಂದಿಗೆ ಮಾತನಾಡಿದ ಆರ್‌ಟಿಐ ಕಾರ್ಯಕರ್ತ ವಿ.ಎಸ್‌.ಯೋಗೇಶ್‌ ಗೌಡ, ಕಾರ್ಮಿಕರ ಭವಿಷ್ಯ ನಿಧಿ ಬಾಕಿ ಉಳಿಸಿಕೊಂಡರೆ ಹಾಲಿ ಸಿಬ್ಬಂದಿಗೆ ಭಾರಿ ಸಂಕಷ್ಟ ಎದುರಾಗಲಿದೆ. ಈವರೆಗೆ ಪಿಎಫ್ ಮೇಲೆ ಪಡೆಯುತಿದ್ದ ಪಿಎಫ್ ಸಾಲ ಸಿಗದಂತಾಗುತ್ತದೆ. ಮಕ್ಕಳ ಉನ್ನತ ವ್ಯಾಸಂಗ, ಮದುವೆ, ಮನೆ ನಿರ್ಮಾಣದಂತಹ ಹಲವು ಕಾರಣಗಳಿಗೆ ಪಿಎಫ್ ಲೋನ್‌ ಪಡೆಯುತಿದ್ದ ಸಿಬ್ಬಂದಿಗೆ ಸಾಲ ಸಿಗದಂತಾಗುತ್ತದೆ.

ಸರ್ಕಾರದ ಆಶ್ರಯದಲ್ಲಿ ನಡೆಯುತ್ತಿರುವ ಬಿಎಂಟಿಸಿ ಆರ್ಥಿಕ ಅಶಿಸ್ತಿನಿಂದ ಇಷ್ಟೆಲ್ಲಾ ಆಗುತ್ತಿದೆ ಎಂದು ಹೇಳುತ್ತಾರೆ. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಎನ್‌.ಪ್ರಸಾದ್‌ ಈ ಕುರಿತು ಪ್ರತಿಕ್ರಿಯಿಸಿ ಸಂಸ್ಥೆಯು ಈಗಾಗಲೇ ಸಂಸ್ಥೆ ಬ್ಯಾಂಕ್‌ ಆಫ್ ಬರೋಡ ಬ್ಯಾಂಕ್‌ ನಿಂದ ಸಾಲ ಪಡೆಯಲು ಸಿದ್ದತೆ ನಡೆಸಿದ್ದು, ಬ್ಯಾಂಕ್‌ನಿಂದ ಮಂಜುರಾತಿ ಕೂಡ ಸಿಕ್ಕಿದೆ. ಬಾಕಿ ಉಳಿದಿರುವ ಭವಿಷ್ಯ ನಿಧಿ ಬಾಬ್ತು ಮುಂದಿನ ವಾರದೊಳಗೆ ಜಮೆ ಮಾಡಲಾಗುವುದು ಎಂದು ಹೇಳಿದರು.

Advertisement

ದೇಶದ ಎಲ್ಲಾ ನಗರ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿಯೇ ನಡೆಯುತ್ತಿವೆ. ನಷ್ಟದ ನಡುವೆಯೂ ಬಿಎಂಟಿಸಿ ಉತ್ತಮ ಸೇವೆ ಮತ್ತು ಆಡಳಿತ ನೀಡುತ್ತಿದೆ. ಏಕೆಂದರೆ ನಾವು ಲಾಭಕ್ಕಾಗಿ ಸಂಸ್ಥೆ ನಡೆಸುವುದಿಲ್ಲ, ಸೇವೆ ನಮ್ಮ ಗುರಿ. ಈ ನಡುವೆ ಡೀಸೆಲ್‌ ಬೆಲೆ ಏರಿಕೆಯಾಗುತ್ತಿದೆ. ಸಂಸ್ಥೆಯಿಂದ ಬರುತ್ತಿರುವ ಒಟ್ಟು ಆದಾಯದ ಪೈಕಿ ಶೇ.80ರಷ್ಟು ಡೀಸಲ್‌ ಮತ್ತು ಸಿಬ್ಬಂದಿಯ ಸಂಬಳಕ್ಕೆ ಖರ್ಚಾಗುತ್ತಿದೆ. ಹಾಗಾಗಿ ಸಂಸ್ಥೆ ಆರ್ಥಿಕ ಸಂಕಷ್ಟದಲ್ಲಿದ್ದು, ಪಿಎಫ್ ಬಾಬ್ತು ಕಟ್ಟಲು ವಿಳಂಬವಾಗಿದೆ. ಸರ್ಕಾರವೂ ಸಂಸ್ಥೆಯ ಪರವಾಗಿದ್ದು, ಪೂರಕವಾಗಿ ಸ್ಪಂದಿಸುತ್ತಿದೆ. ಒಂದು ವಾರದಲ್ಲಿ ಬಿಎಂಟಿಸಿ ಬಾಕಿ ಉಳಿಸಿಕೊಂಡಿರುವ ಪಿಎಫ್ ಹಣ ಪಾವತಿಸಲಾಗುವುದು.
-ವಿ.ಎನ್‌.ಪ್ರಸಾದ್‌, ಬಿಎಂಟಿಸಿ ಎಂ.ಡಿ

* ಲೋಕೇಶ್‌ ರಾಮ್‌

Advertisement

Udayavani is now on Telegram. Click here to join our channel and stay updated with the latest news.

Next