Advertisement
ಪ್ರಸ್ತುತ ಖಾಸಗಿ ಕಂಪನಿಗಳು ಪ್ರಯಾಣಿಕರಿಂದ ಬೇಕಾಬಿಟ್ಟಿ ವಸೂಲು ಮಾಡುತ್ತಿವೆ. ಈ ಮಧ್ಯೆ ಸರ್ಕಾರದಿಂದಲೇ ಅಗ್ರಿಗೇಟರ್ ಆ್ಯಪ್ ಪರಿಚಯಿಸುವ ಮಾತುಗಳು ಕೇಳಿ ಬರುತ್ತಿವೆ. ಇದು ಬಿಎಂ ಟಿಸಿಗೆ ಅವಕಾಶದ ಬಾಗಿಲು ತೆರೆಯುವಂತೆ ಮಾಡಿದೆ.
Related Articles
Advertisement
“ಈ ನಿಟ್ಟಿನಲ್ಲಿ ಖಂಡಿತ ಚರ್ಚಿಸಬಹುದಾಗಿದೆ. ಆದರೆ, ಸರ್ಕಾರದ ತೀರ್ಮಾನ ಅಂತಿಮವಾಗಿದೆ. ಈ ಸೇವೆಗಿಂತ ಹೆಚ್ಚಾಗಿ ಈಗಿರುವ ಪ್ರಮುಖ ಮಾರ್ಗಗಳಲ್ಲಿ ಉತ್ತಮ ಬಸ್ ಸೇವೆಗಳನ್ನು ಕಲ್ಪಿಸುವುದು, ಬಸ್‌ಗಳ ಸಂಖ್ಯೆ ಹೆಚ್ಚಿಸುವುದು, ಆ ಮೂಲಕ ಪ್ರಯಾಣಿಕರನ್ನು ಹೆಚ್ಚಿಸುವುದು ನಮ್ಮ ಮುಂದಿರುವ ಆದ್ಯತೆ’ ಎಂದು ನಿರ್ದೇಶಕ (ಮಾಹಿತಿ ತಂತ್ರಜ್ಞಾನ) ಎ.ವಿ. ಸೂರ್ಯಸೇನ್ ತಿಳಿಸುತ್ತಾರೆ.
ವಿದ್ಯುತ್‌ಚಾಲಿತ ಬಸ್‌ಗಳನ್ನು ಮತ್ತು ಅದರ ಚಾಲಕರನ್ನು ಖಾಸಗಿ ಸಂಸ್ಥೆಗಳಿಂದ ಇಂದು ಗುತ್ತಿಗೆ ಪಡೆದು ಬಿಎಂಟಿಸಿಯು ಸೇವೆ ಒದಗಿಸುತ್ತಿದೆ. ಇದಕ್ಕೆ ಹೋಲಿಸಿದರೆ, ಆ್ಯಪ್ ಆಧಾರಿತ ಸೇವೆಗಳನ್ನು ಒದಗಿಸುವುದು ಸಾರಿಗೆ ಸಂಸ್ಥೆಗೆ ಸುಲಭದ ಕೆಲಸ. ಐಟಿ ಸಿಟಿಯಲ್ಲಿ ತಂತ್ರಜ್ಞಾನಕ್ಕೆ ಕೊರತೆ ಇಲ್ಲ. ಸಂಸ್ಥೆಯಲ್ಲಿ ಪ್ರತ್ಯೇಕ ಐಟಿ ವಿಭಾಗವೂ ಇದೆ. ಅದನ್ನು ಸಮರ್ಪಕವಾಗಿ ಬಳಿಸಿಕೊಂಡು ಆ್ಯಪ್ ಪರಿಚಯಿಸಬಹುದಿತ್ತು. ಅದಕ್ಕೆ ಖಾಸಗಿ ಚಾಲಕರು ಲಿಂಕ್ ಮಾಡಿಕೊಂಡು ಸೇವೆ ಒದಗಿಸುತ್ತಿದ್ದರು. ಇದಕ್ಕಾಗಿ ಹೆಚ್ಚು ಖರ್ಚು ಕೂಡ ಆಗುವುದಿಲ್ಲ.
ಒಂದು ವೇಳೆ ಬಿಎಂಟಿಸಿಯು ಈ ನಿಟ್ಟಿನಲ್ಲಿ ಮುಂದಾಗಿದ್ದರೆ, ಪ್ರಯಾಣಿಕರಿಗೆ ಲಾಸ್ಟ್ ಮೈಲ್ ಕನೆಕ್ಟಿವಿಟಿ ಜತೆಗೆ ಉತ್ತಮ ಸೇವೆ ದೊರೆಯುತ್ತಿತ್ತು. ಸರ್ಕಾರದ ಅಂಗಸಂಸ್ಥೆ ಆಗಿದ್ದರಿಂದ ಹೊಣೆಗಾರಿಕೆ ಇರುತ್ತಿತ್ತು. ಹಾಗಾಗಿ, ಜನರಿಗೆ ಹೊರೆಯೂ ಆಗುತ್ತಿರಲಿಲ್ಲ. ಸಂಸ್ಥೆಗೆ ಆದಾಯವೂ ಬರುತ್ತಿತ್ತು. ಆದರೆ, ಕೈಚೆಲ್ಲಿದ್ದರಿಂದ ಖಾಸಗಿ ಅಗ್ರಿಗೇಟರ್ ಕಂಪನಿಗಳಿಗೆ ಇಂಬು ಮಾಡಿಕೊಟ್ಟಂತಾಯಿತು. ಪರಿಣಾಮ ಬಸ್‌ಗಳ ಪ್ರಯಾಣಿಕರ ಸಂಖ್ಯೆ ಇಳಿಮುಖ ಆಗಿರುವುದರಲ್ಲಿ “ನಮ್ಮ ಮೆಟ್ರೋ’ ಜತೆಗೆ ಈ ಕಂಪನಿಗಳ ಪಾಲೂ ಇದೆ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.
“ಬರೀ ಬಿಎಂಟಿಸಿಯಿಂದ ಸಾಧ್ಯವಿಲ್ಲ’: “ಬರೀ ಬಿಎಂಟಿಸಿಯಿಂದ ಆಗುವ ಕೆಲಸ ಇದಲ್ಲ. ಅದರೊಂದಿಗೆ ಸಾರಿಗೆ ಇಲಾಖೆ, ಪೊಲೀಸ್ ಮತ್ತಿತರ ಇಲಾಖೆಗಳನ್ನು ಸೇರಿ ಒಂದು ಪ್ರತ್ಯೇಕ ವಿಭಾಗ ಮಾಡಬೇಕು. ಅದರ ಮೂಲಕ ಸರ್ಕಾರದಿಂದ ಆ್ಯಪ್ ಸೇವೆಗಳನ್ನು ಒದಗಿಸಬೇಕಾಗುತ್ತದೆ. ಆಗ ಅದರಡಿ ಸಂಚರಿಸುವ ವಾಹನಗಳ ಮೇಲೂ ಹಿಡಿತ ಇರುತ್ತದೆ’ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸುತ್ತಾರೆ. ಕೊನೆಪಕ್ಷ ಅಗ್ರಿಗೇಟರ್ ಆ್ಯಪ್‌ಗೆ ಮುಂದಾಗದಿ ದ್ದರೂ, ಬೇರೆಯವರು ಬರದಂತೆ ತಡೆಯುವ ಕೆಲಸವಾದರೂ ಮಾಡಬಹುದಿತ್ತು. ಉದಾಹರಣೆಗೆ ಕೆಎಸ್‌ಆರ್‌ಟಿಸಿಯು ಹೆದ್ದಾರಿಗಳಲ್ಲಿ ಏಕಸ್ವಾಮ್ಯ ಹೊಂದಿದೆ. ಅಲ್ಲಿ ಖಾಸಗಿಯವರು ಹಸ್ತಕ್ಷೇಪ ಮಾಡಲು ಬಿಡುವುದೇ ಇಲ್ಲ. ಅದೇ ರೀತಿ, ನಗರದಲ್ಲಿ ಬಿಎಂಟಿಸಿ ಏಕಸ್ವಾಮ್ಯ ಹೊಂದಿದೆ. ಇಲ್ಲಿ ಆ್ಯಪ್ ಆಧಾರಿತ ಸೇವೆಗಳಿಗೆ ಆಕ್ಷೇಪ ಸಲ್ಲಿಸಬಹುದಿತ್ತು. ಇದಾವುದೂ ಆಗಲಿಲ್ಲ. ಪರಿಣಾಮ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಯಿತು. ಬೆನ್ನಲ್ಲೇ ಆದಾಯವೂ ಖೋತಾ ಆಯಿತು.
ಹಿಂದೆ ಪ್ರಯೋಗ ನಡೆದಿತ್ತು: ಈ ಹಿಂದೆ ಬಿಎಂಟಿಸಿಯಿಂದ ಆ್ಯಪ್ ಆಧಾರಿತ ಲಾಸ್ಟ್ ಮೈಲ್ ಕನೆಕ್ಟಿವಿಟಿ ಸೇವೆಯ ಪ್ರಯೋಗ ನಡೆದಿತ್ತು. 2017-18ರಲ್ಲಿ ಬಿಎಂಟಿಸಿಯು ಕಂಪನಿಯೊಂದರಿಂದ ಆ್ಯಪ್ ಅಭಿವೃದ್ಧಿಪಡಿಸಿತ್ತು. ಅದರ ಮೂಲಕ ಆಟೋ ಮತ್ತು ಕ್ಯಾಬ್‌ಗಳನ್ನು ಲಿಂಕ್ ಮಾಡಿ, ಬಸ್ ಪ್ರಯಾಣಿಕರಿಗೆ ಲಾಸ್ಟ್ ಮೈಲ್ ಕನೆಕ್ಟಿವಿಟಿ ಸೇವೆ ಒದಗಿಸುವ ಪ್ರಯತ್ನ ನಡೆದಿತ್ತು. ಆದರೆ, ಬಸ್ ಮತ್ತು ಆಟೋಗಳು ನಿಗದಿತ ಅವಧಿಗೆ ತಲುಪುವುದು, ನಿರ್ಗಮಿಸುವುದು ಸೇರಿದಂತೆ ಸಮನ್ವಯದ ಹಲವು ಸವಾಲುಗಳು ಅಲ್ಲಿದ್ದವು. ಈ ಹಿನ್ನೆಲೆಯಲ್ಲಿ ಪರೀಕ್ಷೆ ಹಂತದಲ್ಲೇ ಸ್ಥಗಿತಗೊಂಡಿತು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
-ವಿಜಯಕುಮಾರ ಚಂದರಗಿ