Advertisement

BMTC: ಬಸ್‌ ಚಲಾಯಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ; ಪ್ರಯಾಣಿಕರ ರಕ್ಷಿಸಿದ ನಿರ್ವಾಹಕ!

01:44 AM Nov 07, 2024 | Team Udayavani |

ಬೆಂಗಳೂರು: ನೆಲಮಂಗಲದಿಂದ ದಾಸನಪುರಕ್ಕೆ ಬಿಎಂಟಿಸಿ ಬಸ್ ಸಂಚಾರದಲ್ಲಿರುವಾಗಲೇ ಬಸ್ ಚಾಲಕ ಕಿರಣ್ ಕುಮಾರ್ (40 ವರ್ಷ)   ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ವೇಳೆ  ಬಸ್‌ ನಿರ್ವಾಹಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರೂ ಸುರಕ್ಷಿತವಾದರು. ಬಸ್ ಬೆಳಗ್ಗೆ ನೆಲಮಂಗಲ ನಗರದ ಬಿನ್ನ ಮಂಗಲದ ಮುಖ್ಯರಸ್ತೆಯಲ್ಲಿ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.

Advertisement

ಈ  ಘಟನೆಯ ದೃಶ್ಯಾವಳಿಗಳು ಬಸ್‌ನ ಸಿಸಿ ಕೆಮೆರಾದಲ್ಲಿ ಸೆರೆಯಾಗಿದ್ದು ಬೆಚ್ಚಿಬೀಳಿಸುವಂತಿದೆ. ಹಾಸನ ಜಿಲ್ಲೆಯ ಗವೇನಹಳ್ಳಿಯ ಕಿರಣ್ ಕುಮಾರ್ ಬಿಲ್ಲೆ ಹೃದಯಾಘಾತದಿಂದ ಮಾರ್ಗ ಮಧ್ಯೆ ಕುಸಿದು ಬಿದ್ದಾಗ ಬಸ್‌ ಮತ್ತೊಂದು ಬಿಎಂಟಿಸಿ ಬಸ್‌ ಅನ್ನು ಹಿಂದಿಕ್ಕಿ ಮುಂದೆ ಹೋಗುವುದನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ.

ಈ ವೇಳೆ ನಿರ್ವಾಹಕ ಸಮಯಪ್ರಜ್ಞೆಯಿಂದ ಬಸ್ ಅಪಘಾತಕ್ಕೀಡಾಗುವುದನ್ನು ತಡೆದಿದ್ದಾರೆ. ನಿರ್ವಾಹಕ  ಓಬಳೇಶ್ ಧೈರ್ಯದಿಂದ ಮುಂದೆ ಹೋಗಿ ಕಿರಣ್ ಕುಮಾರ್ ರನ್ನು ಸೀಟಿನಿಂದ ಪಕ್ಕಕ್ಕೆ ಎಳೆದು ಕೂರಿಸಿ ನಂತರ ಬಸ್ ನಿಯಂತ್ರಣಕ್ಕೆ ತೆಗೆದುಕೊಂಡು ಬಸ್ ನಿಲ್ಲಿಸಿದರು. ಹೀಗಾಗಿ ಬಸ್ ನಲ್ಲಿದ್ದ ಪ್ರಯಾಣಿಕರು ನಿಟ್ಟಿಸಿರು ಬಿಡುವಂತಾಯಿತು. ನಂತರ ಓಬಳೇಶ್  ಕಿರಣ್‌ ಕುಮಾರ್ ರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಪರೀಕ್ಷಿಸಿದ ನಂತರ ಚಾಲಕ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಘೋಷಿಸಿದರು.


 ಬಿಎಂಟಿಸಿ ಸಂತಾಪ: 
ಹಠಾತ್ ಹೃದಯಾಘಾತದಿಂದ ಡಿಪೋ 40ರ ಚಾಲಕ ಕಿರಣ್ ಕುಮಾರ್ ಮೃತಪಟ್ಟ ಅಕಾಲಿಕ ನಿಧನಕ್ಕೆ ಬಿಎಂಟಿಸಿ ದುಃಖ ವ್ಯಕ್ತಪಡಿಸಿ ಅವರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ನಿಗಮವು ಪ್ರಾರ್ಥಿಸುತ್ತದೆ. ಬಿಎಂಟಿಸಿಯ ಹಿರಿಯ ಅಧಿಕಾರಿಗಳು ಕುಟುಂಬದವರ ಭೇಟಿಯಾಗಿ ಅವರಿಗೆ ಸಂತಾಪ ಸೂಚಿಸಿದರು. ಅಲ್ಲದೇ ಅಂತಿಮ ವಿಧಿ-ವಿಧಾನಗಳಿಗೆ ಸಹಾಯಧನ ನೀಡಿದರು ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next