ಬೆಂಗಳೂರು: ಮಹಾನಗರದಲ್ಲಿ ಸಾರಿಗೆ ಸೇವೆಯನ್ನು ನೀಡುತ್ತಿರುವ ಬಿ.ಎಂ.ಟಿ.ಸಿ. ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು ನೀಡುವಲ್ಲಿ ಎಡವುತ್ತಿದೆಯೇ ಎಂಬ ಸಂಶಯ ಸಾರ್ವಜನಿಕರನ್ನು ಕಾಡಲಾರಂಭಿಸಿದೆ. ಇದಕ್ಕೆ ಪುಷ್ಠಿ ನೀಡುವಂತಹ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಈ ಬಾರಿ ಟೆಕ್ಕಿ ಮಹಿಳೆಯೊಬ್ಬರು ಟಿಕೆಟ್ ಪಡೆಯುವ ವಿಚಾರದಲ್ಲಿ ಬಿಎಂಟಿಸಿ ನಿರ್ವಾಹಕರಿಂದ ತನಗಾದ ತೊಂದರೆಯ ಬಗ್ಗೆ ಟ್ವೀಟ್ ಮಾಡಿ ಸಾರ್ವಜನಿಕರು ಮತ್ತು ಬಿಎಂಟಿಸಿ ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ಸಾಫ್ಟ್ವೇರ್ ಉದ್ಯೋಗಿಯಾಗಿರುವ ಲಕ್ಷ್ಮೀ ಬಿರಾದಾರ್ ಎನ್ನುವವರು ಬಿಎಂಟಿಸಿ ಬಸ್ ಸಂಖ್ಯೆ ಕೆ.ಎ. 01, ಎಫ್.9515ರಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ತಾನು ಇಳಿಯಬೇಕಾಗಿದ್ದ ಸ್ಟಾಪ್ ಗೆ ಟಿಕೆಟ್ ಕೆಳಿದ್ದಾರೆ. ಆದರೆ ಆ ಬಸ್ಸಿನ ನಿರ್ವಾಹಕ ಬಿರಾದರ್ ಅವರ ಬಳಿಯಲ್ಲಿ ಟಿಕೆಟ್ ಹಣ ಪಡೆದುಕೊಂಡು ಟಿಕೆಟ್ ಕೊಟ್ಟಿಲ್ಲ. ಲಕ್ಷ್ಮೀ ಅವರು ಮತ್ತೆ ನಿರ್ವಾಹಕನಲ್ಲಿ ಟಿಕೆಟ್ ಕೇಳಿದಾಗ ಆತ ಇವರನ್ನು ನಿಂದಿಸಿದ್ದಾನೆ ಎಂದು ಅವರು ತಮಗಾದ ಕಹಿ ಅನುಭವವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಟಿಕೆಟಿನ ಮೊತ್ತವನ್ನು ನೀಡಿದ ಬಳಿಕ ನಿರ್ವಾಹಕ ಟಿಕೆಟ್ ನೀಡದೇ ಇದ್ದ ಸಂದರ್ಭದಲ್ಲಿ ನಾನು ಎರಡೆರಡು ಬಾರಿ ಟಿಕೆಟ್ ಕೆಳಿದೆ. ಆದರೆ ಇದರಿಂದ ಸಿಟ್ಟಿಗೊಳಗಾದವನಂತೆ ಕಂಡುಬಂದ ಆ ನಿರ್ವಾಹಕ ನನ್ನನ್ನು ನಿಂದಿಸುತ್ತಲೇ ಟಿಕೆಟ್ ನೀಡಿದ.
ಈ ಹಿಂದೆಯೂ ಇಂತಹ ಅನುಭವ ಆಗಿದ್ದ ಸಂದರ್ಭದಲ್ಲಿ ನಾನು ಬಿಎಂಟಿಸಿಗೆ ದೂರು ನೀಡಿದ್ದೆ (ದೂರು ಸಂಖ್ಯೆ BMTCC10229678) ಆದರೆ ಆ ದೂರಿನ ಮೇಲೆ ಕ್ರಮ ಕೈಗೊಂಡಿರುವ ಕುರಿತು ನನಗೇನೂ ಮಾಹಿತಿ ಸಿಕ್ಕಿಲ್ಲ. ಈ ಬಾರಿಯಾದರೂ ಹಿಂದಿನಂತೆ ಮಾಡದೆ ದಯವಿಟ್ಟು ಸೂಕ್ತವಾದ ಕ್ರಮ ತೆಗೆದುಕೊಳ್ಳಿ ಎಂದು ಲಕ್ಷ್ಮೀ ಬಿರಾದಾರ್ ಅವರು ಟ್ವೀಟ್ ಮೂಲಕ ಬಿಎಂಟಿಸಿಗೆ ಮನವಿ ಮಾಡಿಕೊಂಡಿದ್ದಾರೆ.