ಬೆಂಗಳೂರು: ಬಿಎಂಟಿಸಿ ಡಿಪೋ ಹಂತಗಳಲ್ಲಿ ನಡೆಯುತ್ತಿರುವ ಲಂಚಾವತಾರಕ್ಕೆ ಕಡಿವಾಣ ಹಾಕಲು ಮೇಲಧಿಕಾರಿಗಳು ಚಾಪೆ ಕೆಳಗೆ ನುಗ್ಗಿದರೆ, ಕೆಳಹಂತದ ಅಧಿಕಾರಿಗಳು ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ.
ರಜೆ ಮಂಜೂರು, ಮಾರ್ಗಗಳ ನಿಯೋಜನೆ ಮತ್ತಿತರ ಕಾರಣಗಳಿಗೆ ಈ ಮೊದಲು ಸಾರಿಗೆ ನೌಕರರಿಂದ ನೇರವಾಗಿ ಘಟಕಗಳಲ್ಲಿನ ಸಹಾಯಕರು ಸೇರಿದಂತೆ ಅಧಿಕಾರಿಗಳಿಗೆ ಗೂಗಲ್ ಪೇ, ಫೋನ್ ಪೇ ಮೂಲಕ ನೇರವಾಗಿ ಹಣ ವರ್ಗಾವಣೆ ಆಗುತ್ತಿತ್ತು. ಆದರೆ, ಇದರಲ್ಲಿ ಸಿಕ್ಕಿಬೀಳುವ ಸಾಧ್ಯತೆಗಳು ಕಂಡುಬರುತ್ತಿರುವುದರಿಂದ ಈ “ಕಮಿಷನ್ ಜಾಲ’ವು ಸುತ್ತಲಿನ ಟೀ-ಕಾಫಿ ಶಾಪ್ ಮತ್ತು ಪಾನ್‌ಶಾಪ್‌ಗ ಗೆ ವಿಸ್ತರಣೆಯಾಗಿದೆ! ರಜೆ, ತುರ್ತುರಜೆ ಮತ್ತಿತರ ಸೌಲಭ್ಯಗಳಿಗೆ ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಸೇರಿ ಸಂಬಂಧಪಟ್ಟ ಅಧಿಕಾರಿಗಳು ಈಗ ಡಿಪೋಗಳಿಗೆ ಹತ್ತಿರದಲ್ಲಿರುವ ಅಂಗಡಿ ಮಾಲೀಕರ ನಂಬರ್ ನೀಡುತ್ತಾರೆ. ಆ ಸಂಖ್ಯೆಗೆ ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ ಫೋನ್ ಪೇ, ಗೂಗಲ್ ಪೇ ಮೂಲಕ ಲಂಚ ನೀಡುವ “ಟ್ರೆಂಡ್’ ಶುರುವಾಗಿದೆ. ಇದನ್ನು ಪತ್ತೆಹಚ್ಚುವುದು ಮೇಲಧಿಕಾರಿಗಳಿಗೆ ಮತ್ತೂಂದು ರೀತಿಯ ತಲೆನೋವಾಗಿ ಪರಿಣಮಿಸಿದೆ.
ಗೂಗಲ್ ಪೇ, ಫೋನ್ ಪೇನಲ್ಲಿ ಕೆಳಹಂತದ ನೌಕರರಿಂದ ವಿನಾಕಾರಣ ಅಧಿಕಾರಿಗಳ ಮೊಬೈಲ್‌ಗಳಿಗೆ ಹಣ ವರ್ಗಾವಣೆ ಆಗುತ್ತಿರುವುದು ದಾಖಲೆಗಳಿಂದ ಸುಲಭವಾಗಿ ಪತ್ತೆಯಾಗು ತ್ತಿದೆ. ಅದನ್ನು ಆಧರಿಸಿ ಅಧಿಕಾರಿಗಳ ವಿರುದ್ಧ ವರ್ಗಾವಣೆ, ಅಮಾನತಿನಂತಹ ಶಿಸ್ತುಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ. ಈಚೆಗೆ ಒಂದೇ ಘಟಕ (ಡಿಪೋ- 8)ದ ಆರು ಜನರನ್ನು ಅಮಾನತುಗೊಳಿಸಲಾಗಿದೆ. ಅಷ್ಟೇ ಅಲ್ಲ, ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ “ಡಿಜಿಟಲ್ ಲಂಚ’ ತೆಗೆದುಕೊಳ್ಳುವವರ ವಿರುದ್ಧ ಕಾರ್ಯಾಚರಣೆ ಸದ್ದಿಲ್ಲದೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅನ್ಯಮಾರ್ಗಗಳ ಮೂಲಕ ಹಣ ಪಡೆಯುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ ಎಂದು ಹೆಸರು ಹೇಳಲಿಚ್ಛಿಸದ ಬಿಎಂಟಿಸಿ ಭದ್ರತಾ ಮತ್ತು ಜಾಗೃತ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಹೀಗೆ ಶಾಪ್‌ಗಳ ಮಾಲೀಕರಿಗೆ ಹಾಕಿಸಿಕೊಳ್ಳಲಾಗುತ್ತದೆ. ಅಲ್ಲಿಂದ ನಂತರದಲ್ಲಿ ನಗದು ಅಥವಾ ಡಿಜಿಟಲ್ ರೂಪದಲ್ಲಿ ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳಲಾಗುತ್ತದೆ. ಇದಕ್ಕೆ ಪ್ರತಿಯಾಗಿ ಕೆಲವೆಡೆ ಆಯಾ ಅಂಗಡಿ ಮಾಲಿಕರಿಗೆ ಕಮಿಷನ್ ಕೂಡ ಇದೆ. ಈ ಜಾಲ ಪತ್ತೆಗೂ ಕಾರ್ಯಪ್ರವೃತ್ತರಾಗಿದ್ದೇವೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
“ಟೀ ಶಾಪ್‌ಗಳ ಮೇಲೆ ನಿಗಾ’: “ಚಾಲನಾ ಸಿಬ್ಬಂದಿ ಸೇರಿದಂತೆ ಡಿಪೋಗಳಲ್ಲಿ ಕಾರ್ಯನಿರ್ವ ಹಿಸುವ ಕೆಳಹಂತದ ಸಿಬ್ಬಂದಿಯಿಂದ ರಜೆ ಮಂಜೂರು ಮಾಡಲು, ಅನುಕೂಲಕರವಾದ ಮಾರ್ಗ ಅಥವಾ ಪಾಳಿ ಹಾಕಿಸಿಕೊಳ್ಳಲು ಲಂಚ ಪಡೆಯುತ್ತಿದ್ದು, ಇದಕ್ಕಾಗಿ ಹತ್ತಿರದ ಟೀ-ಕಾμ ಶಾಪ್‌ಗ್ಳನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಅಂತಹ ಡಿಪೋಗಳ ಸುತ್ತ ನಿಗಾ ಇಡಲಾಗಿದೆ. ಅವುಗಳಿಗೂ ಶೀಘ್ರ ಕಡಿವಾಣ ಹಾಕಲಾಗುವುದು’ ಎಂದು ಬಿಎಂಟಿಸಿ ನಿರ್ದೇಶಕಿ (ಭದ್ರತಾ ಮತ್ತು ಜಾಗೃತ) ರಾಧಿಕಾ “ಉದಯವಾಣಿ’ಗೆ ತಿಳಿಸಿದರು.
“ಕಳೆದ ವಾರವಷ್ಟೇ ಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದ ಆರೋಪದ ಹಿನ್ನೆಲೆಯಲ್ಲಿ ಆರು ಜನ ನೌಕರರನ್ನು ಅಮಾನತುಗೊಳಿಸಲಾಗಿದೆ. ಇನ್ನೂ ಕೆಲವರ ವಿರುದ್ಧ ತನಿಖೆ ಮುಂದುವರಿದಿದೆ. ದೃಢಪಟ್ಟ ತಕ್ಷಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಇದರ ಜತೆಗೆ ಮುಂಬರುವ ದಿನಗಳಲ್ಲಿ ತಂತ್ರಜ್ಞಾನ ಬಳಸಿಕೊಂಡು ಇದಕ್ಕೆ ಕಡಿವಾಣ ಹಾಕಲಿಕ್ಕೂ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದರು.