ಮುಂಬಯಿ, ಮೇ 16: ವಾಂಖೆಡೆ ಕ್ರೀಡಾಂಗಣದ ಆವರಣವನ್ನು ನಾಗರಿಕ ಸಂಸ್ಥೆಗೆ ಹಸ್ತಾಂತರಿಸುವಂತೆ ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಶುಕ್ರವಾರ ಮುಂಬಯಿ ಕ್ರಿಕೆಟ್ ಅಸೋಸಿಯೇಶನ್(ಎಂಸಿಎ)ಗೆ ಸೂಚಿಸಿದೆ.
ಶುಕ್ರವಾರದ ನೋಟಿಸ್‌ಗೆ ಪ್ರತಿಕ್ರಿಯಿಸಿದ ಎಂಸಿಎ ಅಧ್ಯಕ್ಷ ಡಾ| ವಿಜಯ್ ಪಾಟೀಲ್ ಅವರು, ಕೋವಿಡ್ ವೈರಸ್ ಬಿಕ್ಕಟ್ಟಿನ ಸಮಯದಲ್ಲಿ ಮುಂಬಯಿ ಕ್ರಿಕೆಟ್ ಅಸೋಸಿಯೇಷನ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಸರಕಾರಿ ಅಧಿಕಾರಿಗಳಿಗೆ ತಮ್ಮಿಂದ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.
ಕೋವಿಡ್ ಹಿನ್ನೆಲೆ ಸಂಭವನೀಯ ಉಲ್ಬಣಕ್ಕೆ ಪೂರ್ವ ಯೋಜನೆಯಾಗಿ ಬಿಎಂಸಿ ಜಿಮ್‌ಗಳು, ಕ್ಲಬ್‌ಗಳು, ಮದುವೆ ಸಭಾಂಗಣಗಳು, ಶಾಲೆಗಳು, ಕಾಲೇಜುಗಳು, ಹೋಟೆಲ್‌ಗಳು, ವಸತಿ ಗೃಹಗಳು ಮತ್ತು ಮೈದಾನಗಳಲ್ಲಿ ತಾತ್ಕಾಲಿಕವಾಗಿ ಅವುಗಳನ್ನು ಕೋವಿಡ್ ಕೇರ್ ಕೇಂದ್ರಗಳಾಗಿ ಪರಿವರ್ತಿಸಲು ಸ್ವಾಧೀನಪಡಿಸಿಕೊಳ್ಳುತ್ತಿದೆ. ಮುಂಬಯಿಯ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು ಮತ್ತು ಕ್ವಾರಂಟೈನ್ ನಿರ್ಮಿಸುವ ಉಸ್ತುವಾರಿಯನ್ನು ವಹಿಸಿಕೊಂಡಿರುವ ಬಿಎಂಸಿಯ ಹೆಚ್ಚುವರಿ ಪುರಸಭೆ ಆಯುಕ್ತ ಸಂಜೀವ್ ಜೈಸ್ವಾಲ್ ಅವರು, ವಾಂಖೆಡೆ ಕ್ರೀಡಾಂಗಣದಂತೆ, ನಾವು ಇತರ ಜಿಮ್ಖಾನಾಗಳಾದ ಪೋಲಿಸ್ ಜಿಮ್ಖಾನಾ, ಪಾರ್ಸಿ ಜಿಮ್ಖಾನಾ, ಇಸ್ಲಾಂ ಜಿಮ್ಖಾನಾಗಳನ್ನು ಕೋವಿಡ್ ವೈರಸ್ ಆರೈಕೆ ಕೇಂದ್ರಗಳಾಗಿ ಸಿದ್ಧಪಡಿಸುತ್ತಿದ್ದೇವೆ.
ಈ ಸ್ಥಳಗಳಲ್ಲಿನ ಮೈದಾನವು ಕೋವಿಡ್ -19 ಪಾಸಿಟಿವ್ ರೋಗಿಗಳ ಹೆಚ್ಚಿನ ಅಪಾಯದ ಸಂಪರ್ಕಗಳಿಗೆ ಸೂಕ್ತವಲ್ಲ. ಹೆಚ್ಚಿನ-ಅಪಾಯದ ಸಂಪರ್ಕಗಳನ್ನು ಪ್ರತ್ಯೇಕಿಸಲು ಸ್ವತಂತ್ರ ಕಟ್ಟಡಗಳನ್ನು ಬಳಸುವುದು ಉತ್ತಮ. ಪ್ರತ್ಯೇಕ ಕೊಠಡಿಗಳು ಅಥವಾ ಕ್ಯೂಬಿಕಲ್ಸ್ ಶೌಚಾಲಯ ಸೌಲಭ್ಯಗಳು ಇರಬೇಕು. ಈ ಜಿಮ್‌ಖಾನಗಳಂತಹ ದೊಡ್ಡ ಕೇಂದ್ರಗಳಲ್ಲಿ, ಕ್ಯುಬಿಕಲ್‌ಗಳನ್ನು ಮಾಡಬೇಕಾಗುತ್ತದೆ. ಅಂತಹ ದೊಡ್ಡ ಸೌಲಭ್ಯಗಳು ಪಾಸಿಟಿವ್ ಲಕ್ಷಣರಹಿತ ಮತ್ತು ಸೌಮ್ಯ ರೋಗಲಕ್ಷಣದ ಆರೈಕೆ ಕೇಂದ್ರಗಳಾಗಿ ಮಾಡಿಕೊಳ್ಳಬಹುದು ಎಂದು ಜೈಸ್ವಾಲ್ ಅವರು ಹೇಳಿದ್ದಾರೆ.
ವಾಂಖೆಡೆ ಕ್ರೀಡಾಂಗಣದ ಪೆವಿಲಿಯನ್ ಅಡಿಯಲ್ಲಿರುವ ಸ್ಥಳಗಳನ್ನು, ಗಾಳಿ ಬೀಸುವ ಮತ್ತು ಸ್ನಾನಗƒಹದ ಸೌಲಭ್ಯಗಳನ್ನು ಹೊಂದಿರುವ ಸ್ಥಳಗಳನ್ನು ಕ್ವಾರಂಟೈನ್ ಸೌಲಭ್ಯಗಳಾಗಿ ಪರಿವರ್ತಿಸಲಾಗುತ್ತದೆ. ಬಿಎಂಸಿ ತನ್ನ ಸಂಪರ್ಕ ಪತ್ತೆಹಚ್ಚುವ ಪ್ರಯತ್ನಗಳನ್ನು ಬೆಂಬಲಿಸಲು ಮೇ ಅಂತ್ಯದ ವೇಳೆಗೆ ಅಥವಾ ಜೂನ್ ಮೊದಲ ವಾರದ ವೇಳೆಗೆ ಅಸ್ತಿತ್ವದಲ್ಲಿರುವ ಸಿಸಿಸಿ 1 ಸೌಲಭ್ಯಗಳಲ್ಲಿ ಹಾಸಿಗೆಗಳನ್ನು 1,00,000 ಕ್ಕೆ ಏರಿಸಲಾಗುವುದು ಎಂದು ಜೈಸ್ವಾಲ್ ಹೇಳಿದ್ದಾರೆ.
ಜೂನ್‌ಗೆ ಈಗಲೇ ತಯಾರಿ: ಜೈಸ್ವಾಲ್ ನಾವು ಜೂನ್‌ನಲ್ಲಿ ಬರಲಿರುವ ಪ್ರಕರಣಗಳಿಗೆ ಸಿದ್ಧತೆ ನಡೆಸುತ್ತಿದ್ದೇವೆ. ಜೂನ್‌ನಲ್ಲಿ ಏನು ಬೇಕು ಎಂಬುವುದು ಮೇ ತಿಂಗಳಲ್ಲಿ ಸಿದ್ಧವಾಗಬೇಕಿದೆ. ಪ್ರಕರಣಗಳ ಏರಿಕೆಯ ಪ್ರಕ್ಷೇಪಣಕ್ಕೆ ಅನುಗುಣವಾಗಿ ಬಿಎಂಸಿ ಮೀಸಲಾದ ಕೋವಿಡ್ ಆಸ್ಪತ್ರೆಗಳು, ಮೀಸಲಾದ ಕೋವಿಡ್ ಆರೋಗ್ಯ ಕೇಂದ್ರಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಹಾಸಿಗೆಗಳನ್ನು ಹೆಚ್ಚಿಸುತ್ತಿದೆ ಎಂದು ಬಿಎಂಸಿಯ ಹೆಚ್ಚುವರಿ ಪುರಸಭೆ ಆಯುಕ್ತ ಸಂಜೀವ್ ಜೈಸ್ವಾಲ್ ಹೇಳಿದ್ದಾರೆ.