ಕೊಚ್ಚಿ : ಅರೆ ನಗ್ನ ಫೋಟೊ ತೆಗೆದು ಮತ್ತು ವೀಡಿಯೊ ಕ್ಲಿಪ್ಪಿಂಗ್ ತಯಾರಿಸಿ ಹಣ ಸುಲಿಯುವ ಸಲುವಾಗಿ ನಟಿ ಭಾವನಾ ಅವರನ್ನು ಅಪಹರಿಸಿ ಕಾರಿನಲ್ಲಿ ಲೈಂಗಿಕ ಕಿರುಕುಳ ನೀಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಏಳು ಮಂದಿಯ ಕೊಟೇಶನ್ ಗ್ಯಾಂಗ್ ಸುಮಾರು ಒಂದು ತಿಂಗಳಿಂದ ನಟಿಯ ಅಪಹರಣಕ್ಕೆ ಸಂಚು ಮಾಡಿತ್ತು. ಸೆರೆಯಾಗಿರುವ ಆರೋಪಿ ಗಳು ಹಣ ಸುಲಿಯುವ ಸಲುವಾಗಿಯೇ ಈ ಕೃತ್ಯ ಎಸಗಿದ್ದೇವೆ ಎಂದು ಒಪ್ಪಿಕೊಂಡಿ ದ್ದಾರೆ. ಆದರೆ ಮುಖ್ಯ ಆರೋಪಿ ಪಲ್ಸರ್ ಸುನಿ ಅಲಿಯಾಸ್ ಸುನಿಲ್ ಕುಮಾರ್ ಸೆರೆಯಾದ ಆನಂತರ ನೈಜ ಕಾರಣ ತಿಳಿಯಬಹುದು ಎಂದಿದ್ದಾರೆ.
ನಟಿಯ ಚಾಲಕ ಮಾರ್ಟಿನ್ ಆ್ಯಂಟನಿ, ಆಲಪ್ಪುಳದ ವಾಡಿವಲ್ ಸಲೀಂ ಮತ್ತು ಕಣ್ಣೂರಿನ ಪ್ರದೀಪ್ ಎಂಬವರನ್ನು ಕೊಯಂಬತ್ತೂರಿನಿಂದ ಬಂಧಿಸಲಾಗಿದೆ. ಅವರು ಬ್ಲ್ಯಾಕ್‌ವೆುçಲ್ ಮಾತ್ರ ನಮ್ಮ ಉದ್ದೇಶವಾಗಿತ್ತು ಎಂದು ತಪ್ಪೊಪ್ಪಿಕೊಂಡಿದ್ದಾರೆ. ಆದರೆ ಪೊಲೀಸರು ಉಳಿದ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ.
ವಿಡಿಯೊ ಮತ್ತು ಫೊಟೊಗಳನ್ನು ಬಳಸಿಕೊಂಡು ನಟಿಯಿಂದ 1 ಕೋ. ರೂ. ಸುಲಿಯುವುದು ಗ್ಯಾಂಗಿನ ಗುರಿಯಾಗಿತ್ತು. ಆದರೆ ನಟಿ ಈ ವಿಷಯವನ್ನು ಬಹಿರಂಗಪಡಿಸುವ ದಿಟ್ಟತನ ತೋರಿಸುತ್ತಾರೆಂದು ಅವರು ಭಾವಿಸಿರಲಿಲ್ಲ. ಘಟನೆ ನಡೆದ ರಾತ್ರಿಯೇ ನಟಿ ನಿರ್ದೇಶಕ ಲಾಲ್ ಮನೆಗೆ ಹೋಗಿ ನಡೆದ ವಿಷಯ ತಿಳಿಸಿ ದೂರು ದಾಖಲಿಸಿದ ಕಾರಣ ಅವರ ಯೋಜನೆಗಳೆಲ್ಲ ಬುಡಮೇಲಾಗಿವೆ.
ಸಾಮಾನ್ಯವಾಗಿ ಲೈಂಗಿಕ ಕಿರುಕುಳ ನಡೆದಾಗ ಮಹಿಳೆಯರು ಸಮಾಜಕ್ಕೆ ಅಂಜಿ ಬಾಯಿ ಮುಚ್ಚಿ ಕುಳಿತುಕೊಳ್ಳುತ್ತಾರೆ. ನಟಿಯೂ ಹೀಗೆ ಮಾಡಬಹುದು ಎಂದು ಆರೋಪಿಗಳ ಎಣಿಕೆಯಾಗಿತ್ತು. ನಿರ್ದಿಷ್ಟ ಮೊತ್ತ ನೀಡುವ ಭರವಸೆ ಕೊಟ್ಟು ಪಲ್ಸರ್ ಸುನಿ ಕೊಚ್ಚಿಯ ಬಾಡಿಗೆ ಗ್ಯಾಂಗನ್ನು ಈ ಕೃತ್ಯ ನಡೆಸಲು ನàಮಿಸಿದ್ದ. ಆದರೆ ಯೋಜನೆ ವಿಫಲಗೊಂಡಿರುವ ಕಾರಣ ಗ್ಯಾಂಗಿಗೆ ಹಣ ಸಿಕ್ಕಿಲ್ಲ. ಅಪಹರಣ ನಾಟಕಕ್ಕೆ ಸಹಕರಿಸಿದರೆ ಕೈತುಂಬ ಹಣ ಕೊಡುವುದಾಗಿ ಸುನಿ ಚಾಲಕ ಮಾರ್ಟಿನ್‌ನನ್ನು ನಂಬಿಸಿದ್ದ. ಒಂದು ತಿಂಗಳಿನಿಂದ ಸುನಿ ಈ ಅಪಹರಣಕ್ಕೆ ಸಂಚು ರೂಪಿಸುತ್ತಿದ್ದ. ಸುನಿಯ ಜತೆಗೆ ಮಣಿಕಂಠನ್, ವಿಜೀಶ್ ಮತ್ತು ಇನ್ನೋರ್ವ ಅಪರಿಚಿತ ಆರೋಪಿ ತಲೆಮರೆಸಿಕೊಂಡಿದ್ದಾರೆ. ಅವರು ಪತ್ತೆಯಾದರೆ ಪ್ರಕರಣದ ಸಂಪೂರ್ಣ ಸತ್ಯ ಬಯಲಾಗಲಿದೆ. ಚಿತ್ರರಂಗದ ಕೆಲವು ಮಂದಿ ಕೃತ್ಯದಲ್ಲಿ ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದರೂ ಇಷ್ಟರ ತನಕ ಯಾವುದೇ ಸುಳಿವು ಸಿಕ್ಕಿಲ್ಲ. ಮಲಯಾಳಂ ಚಿತ್ರರಂಗ ಒಕ್ಕೂರಲಿನಿಂದ ಈ ಘಟನೆಯನ್ನು ಖಂಡಿಸಿದೆ.