ಸಸಿಹಿತ್ಲು: ಕರಾವಳಿಯ ಪ್ರವಾಸಿ ಕೇಂದ್ರವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹಳೆಯಂ ಗಡಿ ಗ್ರಾ. ಪಂ.ನ ಸಸಿಹಿತ್ಲು ಮುಂಡ ಬೀಚ್ ಅಭಿವೃದ್ಧಿಗೆ 7 ಕೋ. ರೂ. ವೆಚ್ಚದಲ್ಲಿ ನೀಲನಕ್ಷೆ ಯನ್ನು ತಯಾರಿಸಿ ಅದರ ಬಗ್ಗೆ ಸಮಗ್ರ ಅಧ್ಯಯನ ನಡೆಸಲಾಗುತ್ತಿದೆ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ಸಸಿಹಿತ್ಲು ಮುಂಡ ಬೀಚ್‌ಗೆ ಜನಪ್ರನಿಧಿಗಳು ಮತ್ತು ಅಧಿಕಾರಿಗಳ ಜತೆ ಭೇಟಿ ನೀಡಿ ಮಾಧ್ಯಮದೊಂದಿಗೆ ಅವರು ಮಾತನಾಡಿದರು. ಕರಾವಳಿಯ ಮಲ್ಪೆಯಿಂದ ತಲಪಾಡಿಯವರೆಗೆ ಇರುವ ಬೀಚ್‌ಗಳನ್ನು ವಿವಿಧ ಅನುದಾನ ಹಾಗೂ ಕೇಂದ್ರ ಸರಕಾರದ ಸಹಕಾರದಲ್ಲಿ ರಾಜ್ಯ ಸರಕಾರವು ಯೋಜನೆಗಳನ್ನು ರೂಪಿಸಿಕೊಂಡು ಹಂತ ಹಂತವಾಗಿ ಅಭಿವೃದ್ಧಿ ಪಡಿಸುವ ಬಗ್ಗೆ ಚಿಂತನೆ ನಡೆದಿದೆ. ಇದರಿಂದ ಕರಾವಳಿ ಭಾಗದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಮಹತ್ವ ಸಿಕ್ಕಂತಾಗುತ್ತದೆ ಎಂದರು.
ಬೀಚ್ ಅಭಿವೃದ್ಧಿಯ ಯೋಜ ನೆಗಳು ಮುಂದಿನ ಐವತ್ತು ವರ್ಷಕ್ಕಾಗುವಂತ ಹದ್ದಾಗಿರಬೇಕು, ಇದಕ್ಕೆ ಪೂರಕವಾಗಿ ಶಾಶ್ವತ ತಡೆಗೋಡೆ, ವಾಕಿಂಗ್ ಟ್ರಾಕ್‌ಗಳು, ವಿಹಂಗಮ ಪರಿಸರ, ಅಧುನಿಕ ಬೋಟಿಂಗ್, ಹಸುರು ಹೊದಿಕೆ, ಪ್ರವಾಸಿಗರಿಗೆ ಬೇಕಾದ ಮಾರಾಟ ಕೇಂದ್ರಗಳು, ಸಂಪರ್ಕ ರಸ್ತೆಗಳು ಅಭಿವೃದ್ಧಿ ಯೋಜನೆಯಲ್ಲಿ ಅಳವಡಿಸಿಕೊಂಡಿದ್ದೇವೆ ಎಂದರು.
ಈ ಸಂದರ್ಭ ಹಳೆಯಂಗಡಿ ಗ್ರಾ.ಪಂ.ನ ಸಸಿಹಿತ್ಲು ಬೀಚ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಚ್. ವಸಂತ ಬೆರ್ನಾರ್ಡ್ ಅವರು ಅಳಿವೆಯಲ್ಲಿನ ನದಿ ಕೊರೆತ ಹಾಗೂ ಪಂಚಾಯತ್ ನಿರ್ಮಿಸಿದ ಅಂಗಡಿ ಕೊಠಡಿಗಳು ನದಿ ಪಾಲಾಗಿರುವ ಬಗ್ಗೆ, ಸಮುದ್ರಕ್ಕೆ ಹಾಕಲಾದ ಶಾಶ್ವತ ತಡೆಗೋಡೆಯಿಂದ ರಕ್ಷಣೆ ಹಾಗೂ ಅಭಿವೃದ್ಧಿ ಸಮಿತಿಯ ಮೂಲಕ ಕೈಗೊಂಡ ಕಾಮಗಾರಿಗಳನ್ನು ಯೋಜನೆಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು. ಮುಂದಿನ ದಿನದಲ್ಲಿ ಅಗತ್ಯವಿರುವ ಯೋಜನೆಗಳನ್ನು ಸಹ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಐವನ್ ಡಿ’ಸೋಜಾ, ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್, ಎಡಿಸಿ ಆರ್.ವೆಂಕಟಾಚಲಪತಿ, ಮೂಲ್ಕಿಯ ವಿಶೇಷ ತಹಶೀಲ್ದಾರ್ ಮಾಣಿಕ್ಯ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ., ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಜಲಜಾ, ಚಂದ್ರಕುಮಾರ್, ಅನಿಲ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಮೂಲ್ಕಿ ನ.ಪಂ. ಸದಸ್ಯೆ ವಿಮಲಾ ಪೂಜಾರಿ, ರಾಜ್ಯ ಅಲ್ಪಸಂಖ್ಯಾಕ ಆಯೋಗದ ಎಂ.ಎ. ಗಫೂರ್, ಧನಂಜಯ ಸಸಿಹಿತ್ಲು, ಪಣಂಬೂರು ಬೀಚ್ ಅಭಿವೃದ್ಧಿ ಸಮಿತಿಯ ಯತೀಶ್ ಬೈಕಂಪಾಡಿ ಉಪಸ್ಥಿತರಿದ್ದರು.
ಆಯ್ಕೆ ವಿಸ್ತರಣೆ
ಅಕ್ರಮ ಸಕ್ರಮ ಅರ್ಜಿಗಳಾದ 94 ಸಿಸಿ ಹಕ್ಕುಪತ್ರದ ಫಲಾನುಭವಿಗಳ ಆಯ್ಕೆಯು ವಿಸ್ತರಣೆಯಾಗಲಿದೆ. ಜಿಲ್ಲಾ ಮಟ್ಟದ ಅಧಿಕಾರಿ ವರ್ಗ ಹಾಗೂ ಕಂದಾಯ ಇಲಾಖೆಯ ನಡುವಿನ ಸಂವಹನ ಹೆಚ್ಚಿಸಿಕೊಂಡು ಇದರ ವಿಸ್ತರಣೆಯನ್ನು ಮಾಡಲು ಶಿಫಾರಸ್ಸು ಮಾಡಲು ನಿರ್ಧರಿಸಲಾಗಿದೆ. ಸಮಗ್ರ ಪರಿಶೀಲನೆ ನಡೆಸಿ ಅರ್ಹ ಫಲಾನುಭವಿಗಳು ಇದರಲ್ಲಿ ಆಯ್ಕೆಯಾಗುತ್ತಾರೆ ಎಂದರು.