Advertisement

ತಂತ್ರಜ್ಞಾನ ಕ್ಷೇತ್ರದ ಪ್ರಗತಿ ಹೆಚ್ಚಿಸಲು ನೀಲನಕ್ಷೆ: ಸಿ.ಎನ್‌. ಅಶ್ವತ್ಥ ನಾರಾಯಣ 

10:20 PM Nov 13, 2021 | Team Udayavani |

ಬೆಂಗಳೂರು: ಬೆಂಗಳೂರಿನಾಚೆಗೂ ತಂತ್ರಜ್ಞಾನ ಕ್ಷೇತ್ರದ ಪ್ರಗತಿಯ ವೇಗ ಹೆಚ್ಚಿಸಲು ನೀಲನಕ್ಷೆ ಸಿದ್ಧಪಡಿಸಿರುವ ಸರಕಾರ, ಮುಂದಿನ ಐದು ವರ್ಷಗಳಲ್ಲಿ ರಾಜ್ಯದ ಎರಡು ಮತ್ತು 3ನೇ ಹಂತದ ನಗರಗಳಲ್ಲಿ ಐಟಿ ರಫ್ತು ಪ್ರಮಾಣ ದ್ವಿಗುಣಗೊಳಿಸುವ ಗುರಿ ಹೊಂದಿದೆ ಎಂದು ಐಟಿ-ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ| ಸಿ.ಎನ್‌. ಅಶ್ವತ್ಥ ನಾರಾಯಣ ಹೇಳಿದ್ದಾರೆ.

Advertisement

ನ. 17ರಿಂದ ಮೂರು ದಿನಗಳ ಕಾಲ ನಗರದಲ್ಲಿ ನಡೆಯಲಿರುವ ಟೆಕ್‌ ಸಮಿಟ್‌ ಹಿನ್ನೆಲೆಯಲ್ಲಿ ಶುಕ್ರವಾರ ಬೆಂಗಳೂರಿನ  “ಉದಯವಾಣಿ’ ಕಚೇರಿಗೆ ಭೇಟಿ ನೀಡಿ ಮಾಹಿತಿ ನೀಡಿದ ಅವರು, ದೇಶದ ಒಟ್ಟಾರೆ ಐಟಿ ರಫ್ತಿನಲ್ಲಿ ಬೆಂಗಳೂರು ಸಿಂಹಪಾಲು (ಅಂದಾಜು ಶೇ. 30) ಹೊಂದಿದೆ. ದೇಶದ ಉಳಿದ ಯಾವ ನಗರಗಳನ್ನೂ ಉದ್ಯಾನ ನಗರಿಗೆ ಹೋಲಿಸಲೂ ಆಗುವುದಿಲ್ಲ. ಆದರೆ, ಇದನ್ನು ವಿಕೇಂದ್ರೀಕರಣಗೊಳಿಸಲು ರಾಜ್ಯದ ಇತರೆಡೆ ಐಟಿ ಉದ್ಯಮ ವಿಸ್ತರಣೆಗೆ ಯೋಜನೆ ರೂಪಿಸಲಾಗುತ್ತಿದೆ.  “ಇಂಡಿಯಾ ಇನ್ನೋವೇಷನ್‌ ಅಲಯನ್ಸ್‌’ ಕೂಡ ಇದರ ಭಾಗವೇ ಆಗಿದೆ ಎಂದರು.

ಪ್ರಸ್ತುತ ಎರಡು ಮತ್ತು ಮೂರನೇ ಹಂತದ ನಗರಗಳಿಂದ ಶೇ.2ರಷ್ಟು ಅಂದರೆ, ಸುಮಾರು 58 ಬಿಲಿಯನ್‌ ಡಾಲರ್‌ನಷ್ಟು ಐಟಿ ರಫ್ತು ಆಗುತ್ತಿದೆ. ಇದನ್ನು 5 ವರ್ಷಗಳಲ್ಲಿ ಕನಿಷ್ಠ ಶೇ.5ಕ್ಕೆ ಹೆಚ್ಚಿಸುವ ಉದ್ದೇಶ ಇದೆ. ಇದಕ್ಕೆ ಬೆಂಗಳೂರು ಟೆಕ್‌ ಸಮಿಟ್‌-2021 ಮುನ್ನುಡಿ ಆಗಲಿದೆ. ಈ ನಿಟ್ಟಿನಲ್ಲಿ ಈಗಿನಿಂದಲೇ ಬೆಂಗಳೂರಿಗೆ ಸೀಮಿತವಾಗಿರುವ ತಂತ್ರಜ್ಞಾನ ಮೇಳವನ್ನು ಮೊದಲ ಬಾರಿಗೆ ರಾಜಧಾನಿಯಿಂದ ಆಚೆಗೆ ತೆಗೆದುಕೊಂಡು ಹೋಗಿದ್ದೇವೆ ಎಂದರು.

ಕೋವಿಡ್‌-19 ಲಸಿಕೆ ಅಭಿವೃದ್ಧಿ ಬಳಿಕ ಜೈವಿಕ ತಂತ್ರಜ್ಞಾನ (ಬಿಟಿ)ಕ್ಕೆ ಹೆಚ್ಚಿನ ಪ್ರಾಮುಖ್ಯ ಸಿಕ್ಕಿದೆ. ಇದನ್ನೂ ಗಮನದಲ್ಲಿಟ್ಟುಕೊಂಡು ಬಿಟಿಗೆ ಆದ್ಯತೆ ನೀಡಲಾಗುತ್ತಿದೆ. ಪ್ರಸ್ತುತ ವಾರ್ಷಿಕ 26 ಶತಕೋಟಿ ಡಾಲರ್‌ ವಹಿವಾಟು ನಡೆಯುತ್ತಿದ್ದು, ಮುಂದಿನ 5 ವರ್ಷಗಳಲ್ಲಿ ಇದನ್ನು 54 ಶತಕೋಟಿ ಡಾಲರ್‌ಗೆ ಹೆಚ್ಚಿಸುವ ಗುರಿ ಇದೆ. ಈ ದಿಕ್ಕಿನಲ್ಲಿ ಎಲೆಕ್ಟ್ರಾನಿಕ್ಸ್‌ ಸಿಟಿಯಲ್ಲಿ ಯುನಿಕ್ಸ್‌ ಪಾರ್ಕ್‌ ಸಿದ್ಧಗೊಳ್ಳುತ್ತಿದ್ದು, ಬರುವ ವರ್ಷ ಈ ಕಟ್ಟಡ ತಲೆಯೆತ್ತಲಿದೆ ಎಂದರು.

ಎಲ್ಲೆಲ್ಲಿ ಕ್ಲಸ್ಟರ್‌ ರಚನೆ?:

Advertisement

ಮಂಗಳೂರು, ಮೈಸೂರು, ಹುಬ್ಬಳ್ಳಿ, ಕಲಬುರಗಿ, ತುಮಕೂರು, ಶಿವಮೊಗ್ಗದಲ್ಲಿ ಸುತ್ತಲಿನ ಜಿಲ್ಲೆಗಳನ್ನು ಒಳಗೊಂಡಂತೆ ಕ್ಲಸ್ಟರ್‌ಗಳನ್ನು ಮಾಡಿ, ಅಲ್ಲಿ ಬ್ಯುಸಿನೆಸ್‌ ಪ್ರೊಸೆಸಿಂಗ್‌ ಔಟ್‌ಸೋರ್ಸಿಂಗ್‌ (ಬಿಪಿಒ), ಎಲೆಕ್ಟ್ರಾನಿಕ್‌ ಸಿಸ್ಟಂ ಡಿಸೈನ್‌ ಮ್ಯಾನ್ಯುಫ್ಯಾಕ್ಚರಿಂಗ್‌ (ಇಎಸ್‌ಡಿಎಂ), ಟೆಲಿಕಾಂ ಸೆಕ್ಟರ್‌ ಇಂಡಸ್ಟ್ರೀಸ್‌ ವೃದ್ಧಿಗೆ ಒತ್ತು ನೀಡಲಾಗುವುದು. ಕರ್ನಾಟಕ

ಡಿಜಿಟಲ್‌ ಎಕಾನಮಿ ಮಿಷನ್‌ (ಕೆಡಿಇಎಂ) ರೂಪಿಸಲಾಗಿದೆ. ಇದಲ್ಲದೆ,ಮೊದಲ ಬಾರಿಗೆ ದೇಶದ ಇತರ ರಾಜ್ಯಗಳೊಂದಿಗೆ ಮೈತ್ರಿ ಮಾಡಿ ಕೊಂಡು, ತಂತ್ರಜ್ಞಾನಗಳ ವಿನಿಮಯ ಮಾಡಿಕೊಳ್ಳಲಾಗುತ್ತಿದೆ. ಹಲವು ಐಐಐಟಿ ಸಹಿತ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಸುಮಾರು ಹತ್ತು ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಇದು ಕೂಡ ಪೂರಕವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next