ಬಾಲಸೋರ್/ನವದೆಹಲಿ: ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ 100ಕ್ಕೂ ಅಧಿಕ ಮಂದಿಯ ಸಾವಿಗೆ ಕಾರಣವಾಗಿರುವ ಬ್ಲೂ ವೇಲ್ ಚಾಲೆಂಜ್ ಗೇಮ್ ಇರುವ ರಷ್ಯಾದ ಸಾ ಮಾಜಿಕ ಜಾಲತಾಣ ವಿಕೊಂಟಕ್ಟೆ (Vkontakte)ಗೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಬೆಂಗಳೂರು ಮತ್ತು ಚೆನ್ನೈನನಲ್ಲಿ ಎರಡು ಜನಪ್ರಿಯ ಇಂಟರ್‌ನೆಟ್ ಸೇವೆ ನೀಡುವ ಸಂಸ್ಥೆಗಳ ಮೂಲಕ ಕೆಲವರು ಆ ಸಾಮಾಜಿಕ ಜಾಲ ತಾಣಕ್ಕೆ ಭೇಟಿ ಕೊಟ್ಟಿರುವುದು ಖಚಿತಪಟ್ಟಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ಮಾಹಿತಿಯನ್ನು ಖಚಿತಪಡಿಸಿದೆ.
ಸಚಿವಾಲಯದ ಕಾರ್ಯದರ್ಶಿ ಡಾ.ಅಜಯಕುಮಾರ್ ಮಾತನಾಡಿ ಮಾರಕ ಗೇಮ್‌ನಿಂದ ಉಂಟಾಗಿರುವ ಆತ್ಮಹತ್ಯೆ ಪ್ರಕರಣ ಮತ್ತು ಆ ಜಾಲ ತಾಣಕ್ಕೆ ಭೇಟಿ ನೀಡಿರುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಬಗ್ಗೆ ಇಂಟರ್‌ನೆಟ್ ನೀಡುವ ಕಂಪನಿಗಳ ಜತೆ ಮಾತುಕತೆ ನಡೆಸಿದ್ದೇವೆ ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರಿನ ಸೆಂಟರ್ ಫಾರ್ ಇಂಟರ್‌ನೆಟ್ ಆ್ಯಂಡ್ ಸೊಸೈಟಿಯ ಪ್ರೋಗ್ರಾಮ್ ಆಫೀಸರ್ ರೋಹಿಣಿ ಲಕ್ಷಣೆ ಭಾರತದಲ್ಲಿ ನಡೆದಿರುವ ಆತ್ಮಹತ್ಯೆಗಳು ಬ್ಲೂವೇಲ್ ಗೇಮ್‌ನಿಂದಲೇ ಉಂಟಾಗಿದೆ ಎಂದು ಹೇಳುವುದಕ್ಕೆ ಸೂಕ್ತ ಸಾಕ್ಷ್ಯಗಳಿಲ್ಲವೆಂದು ಹೇಳಿದ್ದಾರೆ.
ಬಾಲಕ ಪಾರು
ಈ ನಡುವೆ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಬ್ಲೂ ವೇಲ್ ಚಾಲೆಂಜ್ ಆಡುತ್ತಿದ್ದ ವಿದ್ಯಾರ್ಥಿಯನ್ನು ಪಾರು ಮಾಡಲಾಗಿದೆ. ವಿದ್ಯಾರ್ಥಿಯ ವರ್ತನೆ ಬಗ್ಗೆ ಪ್ರಾಂಶುಪಾಲರು ಮತ್ತು ಇತರರು ನಿಗಾ ಇರಿಸಿದಾಗ ಗೇಮ್ ಆಡುತ್ತಿದ್ದ ಬಗ್ಗೆ ಮಾಹಿತಿ ದೊರೆಯಿತು. ಆತ ಅಸಹಜವಾಗಿ ವರ್ತಿಸುತ್ತಿದ್ದುದರಿಂದ ಅವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.