Advertisement

ಮನಸ್ಸಿನೊಳಗೆ ಬ್ಲೂ ವೇಲ್ ಆಟ

12:43 AM Aug 16, 2019 | Team Udayavani |

ಕನ್ನಡದಲ್ಲಿ ಈಗಾಗಲೇ ‘ಬ್ಲೂ ವೇಲ್ ಗೇಮ್‌’ ಕುರಿತಾದ ಕೆಲ ಚಿತ್ರಗಳು ತಯಾರಾಗುತ್ತಿವೆ ಎಂಬ ಬಗ್ಗೆ ಎಲ್ಲರಿಗೂ ಗೊತ್ತು. ಆ ಸಾಲಿಗೆ ‘ಮನಸ್ಸಿನಾಟ’ ಚಿತ್ರ ಕೂಡ ಸೇರಲಿದೆೆ ಎಂಬುದು ಗೊತ್ತು. ಈಗ ಹೊಸ ಸುದ್ದಿಯೆಂದರೆ ‘ಮನಸ್ಸಿನಾಟ’ ಚಿತ್ರ ಸದ್ದಿಲ್ಲದೆಯೇ 16 ಫಿಲ್ಮ್ಫೆಸ್ಟಿವಲ್ಗೆ ನಾಮನಿರ್ದೇಶನಗೊಳ್ಳುವ ಮೂಲಕ ಚಿತ್ರತಂಡದ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಆ ಕುರಿತು ಹೇಳಿಕೊಳ್ಳಲೆಂದೇ ನಿರ್ದೇಶಕ ರವೀಂದ್ರ ತಂಡದೊಂದಿಗೆ ಪತ್ರಕರ್ತರ ಮುಂದೆ ಬಂದಿದ್ದರು.

Advertisement

ಈ ‘ಬ್ಲೂ ವೇಲ್ ಗೇಮ್‌’ನಿಂದ ಇಡೀ ಪ್ರಪಂಚವೇ ಬೆಚ್ಚಿಬೀಳುವ ಘಟನೆಗಳು ನಡೆದಿರುವುದು ಗೊತ್ತೇ ಇದೆ. ಈ ಭಯಾನಕ ಗೇಮ್‌ ದೇಶ-ವಿದೇಶಗಳಲ್ಲಿ ಹರಿದಾಡಿದ್ದು ಹಳೆಯ ಸುದ್ದಿ. ಈ ‘ಬ್ಲೂ ವೇಲ್ ಗೇಮ್‌’ ಮಕ್ಕಳ ಮನಸ್ಸಿನ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತೆ ಎಂಬ ಅಂಶಗಳೊಂದಿಗೆ ನಿರ್ದೇಶಕ ರವೀಂದ್ರ ಸೂಕ್ಷ್ಮ ವಿಷಯಗಳನ್ನು ಹೇಳಿದ್ದಾರೆ. ಆ ಕುರಿತು ರವೀಂದ್ರ ಹೇಳುವುದು ಹೀಗೆ. ‘ಇದು ಹೊಸ ಕಥೆಯಲ್ಲ. ಎಲ್ಲರಿಗೂ ಈ ಗೇಮ್‌ ಬಗ್ಗೆ ಗೊತ್ತಿದೆ. ಬಹಳಷ್ಟು ವಿದ್ಯಾರ್ಥಿಗಳು ಈ ಬ್ಲೂ ವೇಲ್ ಗೇಮ್‌ಗೆ ದಾಸರಾಗಿದ್ದಾರೆ ಎಂಬುದನ್ನು ಸಂಶೋಧನೆಯಿಂದ ತಿಳಿದುಕೊಂಡು, ಅದರ ಮೇಲೆ ಚಿತ್ರ ಮಾಡಿದ್ದೇನೆ. ಇದು ಕೇವಲ ವಿದ್ಯಾರ್ಥಿಗಳಷ್ಟೇ ಅಲ್ಲ, ಪೋಷಕರು ಸಹ ನೋಡಬೇಕಾದ ಚಿತ್ರ. ಮಕ್ಕಳ ಕೈಯಲ್ಲಿ ಮೊಬೈಲ್ ಕೊಡಬೇಡಿ. ಕೊಟ್ಟರೆ, ಅವರ ಮನಸ್ಸು ಹೇಗೆಲ್ಲಾ ಪರಿವರ್ತನೆಯಾಗುತ್ತೆ. ಕೆಲವೊಂದು ಆಟಗಳಿಂದ ಅವರು ಹೇಗೆ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಾರೆ ಎಂಬ ಅಂಶಗಳಿವೆ ಎನ್ನುವ ಅವರು, ಈ ಚಿತ್ರವನ್ನು ರಾಷ್ಟ್ರಪ್ರಶಸ್ತಿಗೆ ಕಳುಹಿಸಿದ್ದೆ. ಆದರೆ, ಅಲ್ಲಿ ಸರಿಯಾಗಿ ಗುರುತಿಸಿಕೊಂಡಿಲ್ಲ. ಇಂತಹ ಸೂಕ್ಷ್ಮ ವಿಷಯಗಳಿರುವ ಚಿತ್ರ ಅವರ ಗಮನಕ್ಕೆ ಬರಲಿಲ್ಲವೇ? ಎಂದು ಬೇಸರಿಸಿಕೊಂಡರು.

ಇನ್ನು, ಚಿತ್ರದಲ್ಲಿ ಮಾ.ಹರ್ಷಿತ್‌ ಇಲ್ಲಿ ಪ್ರಮುಖ ಆಕರ್ಷಣೆ. ಅವರಿಗೆ ಇದು ಮೊದಲ ಚಿತ್ರ. ‘ಮೊದಲು ನನಗೆ ಭಯವಿತ್ತು. ಆಮೇಲೆ ತಂಡದವರ ಸಹಕಾರದಿಂದ ಚೆನ್ನಾಗಿ ನಟಿಸಲು ಸಾಧ್ಯವಾಯ್ತು. ಇದೊಂದು ಸಂದೇಶ ಇರುವ ಚಿತ್ರ’ ಎಂದರು ಹರ್ಷಿತ್‌.

ಪ್ರೀತಿಕಾ ಕೂಡ ಇಲ್ಲಿ ಅರ್ಪಿತಾ ಎಂಬ ಪಾತ್ರ ಮಾಡಿದ್ದು, ಅವರಿಲ್ಲಿ ಡ್ರಗ್ಸ್‌ ಸೇವಿಸುವ ಹುಡುಗಿಯಾಗಿ ಕಾಣಸಿಕೊಂಡಿ ದ್ದಾರಂತೆ. ಡ್ರಗ್ಸ್‌ ಖರೀದಿಸಲು ಹಣ ಇಲ್ಲದಿದ್ದಾಗ, ಯಾವ ದಾರಿ ಹಿಡಿಯುತ್ತಾಳೆ ಎಂಬ ಪಾತ್ರ ಮಾಡುವಾಗ, ಸ್ವಲ್ಪ ನರ್ವಸ್‌ ಆಗಿದ್ದುಂಟಂತೆ. ಆದರೂ, ಇದು ಸಿನಿಮಾ ಅಂದುಕೊಂಡು ಮಾಡಿದ್ದಾಗಿ ಹೇಳಿದರು ಪ್ರೀತಿಕಾ.

ದತ್ತಣ್ಣ ಇಲ್ಲಿ ತಾತನ ಪಾತ್ರ ಮಾಡಿದ್ದಾರಂತೆ. ‘ಒಳ್ಳೆಯ ವಿಷಯ ಇಟ್ಟುಕೊಂಡು ಚಿತ್ರ ಮಾಡಿದ್ದಾರೆ. ಇದು ಎಲ್ಲರಿಗೂ ತಲುಪಬೇಕು. ಚಿತ್ರಕ್ಕೆ ಮೊದಲು ‘ಎ’ ಪ್ರಮಾಣ ಪತ್ರ ಕೊಟ್ಟಿದ್ದನ್ನು ಪ್ರಶ್ನಿಸಿದ ನಿರ್ಮಾಪಕರು, ರಿವೈಸಿಂಗ್‌ ಕಮಿಟಿಗೆ ಹೋಗಿ ಅಲ್ಲಿ ‘ಯು’ ಪ್ರಮಾಣ ಪತ್ರ ಪಡೆದಿದ್ದಾರೆ. ಇಂತಹ ಚಿತ್ರಗಳನ್ನು ವೀಕ್ಷಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದರು ದತ್ತಣ್ಣ.

Advertisement

ಇತ್ತೀಚೆಗೆ ಚಿತ್ರದ ಟ್ರೇಲರ್‌ ಮತ್ತು ಹಾಡು ತೋರಿಸಲಾಯಿತು. ನಂತರ ನಿರ್ಮಾಪಕದ್ವಯರಾದ ಮಂಜುನಾಥ್‌, ಹನುಮೇಶ್‌ ಪಾಟೀಲ್ ಮಾತನಾಡಿದರು. ಅತಿಥಿಗಳಾಗಿ ಆಗಮಿಸಿದ್ದ ಚೇಂಬರ್‌ ಉಪಾಧ್ಯಕ್ಷ ಉಮೇಶ್‌ ಬಣಕಾರ್‌, ಭಾ.ಮ.ಹರೀಶ್‌ ಮಾತನಾಡಿದರು. ಚಿತ್ರಕ್ಕೆ ಸಚಿನ್‌ ಸಂಗೀತ, ಮಂಜುನಾಥ್‌ ಬಿ.ನಾಯ್ಕ ಛಾಯಾಗ್ರಹಣವಿದೆ. ಸೇನಾಪತಿ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಯಮುನಾ ಶ್ರೀನಿಧಿ, ರಾಮಸ್ವಾಮಿ, ಚಂದನ್‌, ಮಂಜುನಾಥ್‌ ಹೆಗಡೆ, ರಮೇಶ್‌ ಪಂಡಿತ್‌ ಇತರರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next