Advertisement
ರಾಜ್ಯಾದ್ಯಂತ “ನೀಲಿ ನಾಲಿಗೆ’ ರೋಗ ಉಲ್ಬಣಗೊಂಡಿದ್ದು, ಈ ವೈರಸ್ ನಿಂದ ಕುರಿಗಳನ್ನು ಉಳಿಸಿಕೊಳ್ಳಲು ಕುರಿಗಾಹಿಗಳು ಹರಸಾಹಸ ಮಾಡುತ್ತಿದ್ದಾರೆ. ಪಶು ಸಾಕಾಣಿಕೆಯೇ ಪ್ರಮುಖ ಕಸುಬಾಗಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ 15 ದಿನಗಳಲ್ಲಿ 782 ಕುರಿಗಳು ಈ ರೋಗದಿಂದ ಮೃತಪಟ್ಟಿವೆ ಎಂದು ಪಶು ಸಂಗೋಪನಾ ಇಲಾಖೆಯ ಅಂಕಿ-ಅಂಶ ಹೇಳುತ್ತಿದೆ. ಆದರೆ ಕುರಿಗಾಹಿಗಳ ಪ್ರಕಾರ ಈ ಸಂಖ್ಯೆ ಸಾವಿರ ದಾಟಿದೆ. ಇನ್ನೂ 14,986 ಕುರಿಗಳಲ್ಲಿ ರೋಗದ ವೈರಸ್ ಇದೆ. ಅತಿಯಾದ ಮಳೆ ಮೆಕ್ಕೆಜೋಳ,ಈರುಳ್ಳಿ, ಕಡಲೆ ಬೆಳೆಗಳಿಗೆ ಕುತ್ತು ತಂದಿತ್ತು. ಈಗ ಮುಂದುವರೆದ ಸರಣಿಯಾಗಿ ಕುರಿಗಳನ್ನು ಆಪೋಷನ ತೆಗೆದುಕೊಳ್ಳುತ್ತಿರುವುದು ಕುರಿಗಾಹಿಗಳಲ್ಲಿ ಆತಂಕ ಮೂಡಿಸಿದೆ. ಜಿಲ್ಲೆಯಲ್ಲಿ 13,48,651 ಕುರಿಗಳಿದ್ದು, ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ, ತುರುವನೂರು ಹೋಬಳಿ ಭಾಗದಲ್ಲಿ ಈ ರೋಗ ಕಾಣಿಸಿಕೊಂಡಿದೆ. ಒಮ್ಮೆ “ನೀಲಿ ನಾಲಿಗೆ’ ರೋಗದ ವೈರಸ್ ಬಂದರೆ ಸುಮಾರು 15 ದಿನ ಬಾಧಿಸುತ್ತದೆ.
Related Articles
Advertisement
ಏನಿದು ನೀಲಿ ನಾಲಿಗೆ ರೋಗ?: 1905ರಲ್ಲಿ ಆಫ್ರಿಕಾದಲ್ಲಿ ಕಾಣಿಸಿಕೊಂಡ ಈ ರೋಗ 1964ರಲ್ಲಿ ಭಾರತದಲ್ಲಿ ಪತ್ತೆಯಾಯಿತು. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾಣಿಸಿಕೊಂಡಿರುವ ಈ ರೋಗ, ಕುರುಡು ನೊಣಗಳಿಂದ ಹರಡುತ್ತದೆ. ನೊಣ ಕಚ್ಚಿದಾಗ ಹಾಗೂ ನೊಣ ಕುಳಿತ ಹುಲ್ಲನ್ನು ಕುರಿಗಳು ತಿಂದಾಗ ನೀಲಿ ನಾಲಿಗೆ ರೋಗ ಹರಡುತ್ತದೆ.
ವೈರಸ್ ಹರಡುವುದು ಹೇಗೆ?: ಮಳೆ ಬಂದು ಎರಡು ಮೂರು ವಾರ ಅಥವಾ ತಿಂಗಳಲ್ಲಿ ಈ ರೋಗ ಕಾಣಿಸಿಕೊಳ್ಳುತ್ತದೆ. ನಿಂತ ನೀರು ಅಥವಾ ಜೌಗು ಪ್ರದೇಶದಲ್ಲಿ ಕುರುಡು ನೊಣಗಳು ಉತ್ಪತ್ತಿಯಾಗುತ್ತವೆ. ಈ ನೊಣಗಳಿಂದ ಜಾನುವಾರುಗಳಿಗೆ ರೋಗ ಹರಡುತ್ತದೆ. ವಿಪರೀತ ಜ್ವರ ಬಂದು ಬಾಯಿಯಲ್ಲಿ ಜೊಲ್ಲು ಸುರಿಯುತ್ತದೆ. ಬಾಯಿ, ಮುಖ, ಮೂಗುಗಳಲ್ಲಿ ಬಾವು ಕಂಡು ಬರುತ್ತದೆ. ಕುರಿ ವೇವು ತಿನ್ನಲು ಆಗದಷ್ಟು ನಿಶ್ಯಕ್ತಿಯಿಂದ ಬಳಲುತ್ತದೆ.
ರೋಗದ ಬಗ್ಗೆ ಆತಂಕ ಬೇಡ. ಈಗಾಗಲೇ ವ್ಯಾಕ್ಸಿನ್ ಮಾಡುತ್ತಿದ್ದು, ರೋಗದ ಲಕ್ಷಣ ಕಂಡು ಬಂದರೆ ಹತ್ತಿರದ ಪಶು ಆಸ್ಪತ್ರೆಗೆ ತಿಳಿಸಿ. ಸತ್ತ ಕುರಿಗಳನ್ನು ಬಿಸಾಡದೆ ಸೂಕ್ತ ರೀತಿಯಲ್ಲಿ ಮಣ್ಣು ಮಾಡಿ. ಸತ್ತ ಕುರಿಗಳಿಗೆ ಇಲಾಖೆ ವೈದ್ಯರ ಮೂಲಕ ಪಿಎಂ ಮಾಡಿಸಿ ವರದಿ ಸಲ್ಲಿಸಿದರೆ ಪ್ರತಿ ಕುರಿಗೆ 5 ಸಾವಿರ ರೂ. ಪರಿಹಾರ ಸಿಗಲಿದೆ. –ಡಾ| ಟಿ. ಕೃಷ್ಣಪ್ಪ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕರು
-ತಿಪ್ಪೇಸ್ವಾಮಿ ನಾಕೀಕೆರೆ