ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದವರು. ಅದರಲ್ಲೂ ತಮ್ಮ ಸಿನಿಮಾಕ್ಕೆ ಸಂಬಂಧಿಸಿದ ಬಹುತೇಕ ವಿಷಯಗಳನ್ನು ತಮ್ಮ ಟ್ವಿಟ್ಟರ್ ಖಾತೆಯ ಮೂಲಕವೇ ಅಭಿಮಾನಿಗಳ ಮುಂದೆ ಹಂಚಿಕೊಳ್ಳುತ್ತಿದ್ದರು. ಆದರೆ ಪುನೀತ್ ರಾಜಕುಮಾರ್ ನಿಧನದ ಬಳಿಕ ಅವರ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಬರುತ್ತಿದ್ದ ಟ್ವೀಟ್ ಕೂಡ ನಿಂತಿತ್ತು. ಸುಮಾರು 9 ತಿಂಗಳಿನಿಂದ ಪುನೀತ್ ರಾಜಕುಮಾರ್ ಅವರ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಯಾವುದೇ ಪೋಸ್ಟ್‌ಗಳು, ಮತ್ತಿತರ ಚಟುವಟಿಕೆಗಳು ನಡೆಯದ ಕಾರಣ, ಟ್ವಿಟ್ಟರ್ ಸಂಸ್ಥೆ ನೀಲಿ ಟಿಕ್ ಮಾರ್ಕ್ ಅನ್ನು ಪುನೀತ್ ರಾಜಕುಮಾರ್ ಅವರ ಟ್ವಿಟ್ಟರ್ ಪ್ರೊಫೈಲ್‌ನಿಂದ ತೆಗೆದು ಹಾಕಿತ್ತು. ಅಧಿಕೃತವಾಗಿ ಧೃಢೀಕರಿಸಲ್ಪಟ್ಟ ಟ್ವಿಟ್ಟರ್ ಖಾತೆ ಎನ್ನುವುದನ್ನು ಸೂಚಿಸುವ ಈ ನೀಲಿ ಟಿಕ್ ಇಲ್ಲದಿರುವುದು, ಅಪ್ಪು ಅಭಿಮಾನಿಗಳಿಗೆ ಸಹಜವಾಗಿಯೇ ಬೇಸರ ತಂದಿತ್ತು.
ಪುನೀತ್ ರಾಜಕುಮಾರ್ ದೈಹಿಕವಾಗಿ ಇಲ್ಲದಿದ್ದರೂ, ಅವರ ಟ್ವಿಟರ್ ಖಾತೆಯಲ್ಲಿ ತಮ್ಮ ನೆಚ್ಚಿನ ನಟನ ಜೀವಂತಿಕೆಯನ್ನು ಕಾಣುತ್ತಿದ್ದರು ಫ್ಯಾನ್ಸ್ . ಟ್ವಿಟ್ಟರ್‌ನಲ್ಲಿದ್ದ ನೀಲಿ ಟಿಕ್ ಇದ್ದಕ್ಕಿದ್ದ ಹಾಗೆ ಮಾಯವಾಗಿದ್ದರ ಬಗ್ಗೆ ಫ್ಯಾನ್ಸ್ ಸೇರಿದಂತೆ ಅನೇಕರು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಅಷ್ಟಕ್ಕೆ ಸುಮ್ಮನಾಗದ ಅಭಿಮಾನಿಗಳು ಪುನೀತ್ ರಾಜಕುಮಾರ್ ಟ್ವಿಟ್ಟರ್‌ನಲ್ಲಿದ್ದ ನೀಲಿ ಟಿಕ್ ಮರಳಿ ನೀಡುವಂತೆ ಟ್ವಿಟ್ಟರ್‌ನಲ್ಲಿ ಅಭಿಯಾನವನ್ನೇ ಶುರು ಮಾಡಿದ್ದರು. ರೀ ವೆರಿಫೈ ಪುನೀತ್‌ರಾಜಕುಮಾರ್ ಟ್ವಿಟ್ಟರ್ ಎನ್ನುವ ಹ್ಯಾಶ್ ಟ್ಯಾಗ್ ಬಳಸಿ ಅಭಿಯಾನವನ್ನು ಜೋರಾಗಿ ನಡೆಸಿದ್ದರು. ಈ ಹ್ಯಾಶ್ ಟ್ಯಾಗ್ ಟ್ವಿಟ್ಟರ್‌ನಲ್ಲಿ ದೊಡ್ಡ ಮಟ್ಟದಲ್ಲಿ ಟ್ರೆಂಡ್ ಕೂಡ ಹುಟ್ಟು ಹಾಕಿತ್ತು.
ಇದನ್ನೂ ಓದಿ:ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರವಾದ ವಿಂಡೀಸ್ ಸ್ಪೋಟಕ ಆಟಗಾರ ಲೆಂಡ್ಲ್ ಸಿಮನ್ಸ್
ನಟರಾದ ಯುವರಾಜ್ ಕುಮಾರ್, ನಿರ್ದೇಶಕ ಸಂತೋಷ್ ಆನಂದ್ ರಾಮ್, ಪವನ್ ಒಡೆಯರ್, ನಿರ್ಮಾಪಕ ಕೆ. ಪಿ ಶ್ರೀಕಾಂತ್ ಸೇರಿದಂತೆ ಚಿತ್ರರಂಗದ ಗಣ್ಯರು ಕೂಡ ಈ ಅಭಿಯಾನಕ್ಕೆ ಸಾಥ್ ನೀಡಿದ್ದರು.
ಇದೆಲ್ಲ ನಡೆದ ಬಳಿಕ ಕೊನೆಗೂ ಟ್ವಿಟ್ಟರ್ ಪುನೀತ್ ರಾಜಕುಮಾರ್ ಅಭಿಮಾನಿಗಳ ಮನವಿಗೆ ಸ್ಪಂದಿಸಿದೆ. ಅಭಿಮಾನಿಗಳ ಬೇಡಿಕೆಯಂತೆ ಪುನೀತ್ ರಾಜಕುಮಾರ್ ಅವರ ಟ್ವಿಟ್ಟರ್ ಖಾತೆಗೆ ಮರಳಿ ನೀಲಿ ಟಿಕ್ ನೀಡಿದೆ.