Advertisement
ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಅವರು ಮೇ 6ರಂದು ಬಿ.ಸಿ. ರೋಡ್‌ನಲ್ಲಿ ಬಂಟ್ವಾಳ ವ್ಯಾಪ್ತಿಯ ರಾಣಿ ಅಬ್ಬಕ್ಕ ಪಡೆಗೆ ಚಾಲನೆ ನೀಡಿದ್ದು, ಅಂದಿನಿಂದ ಈ ಪಡೆ ತಮ್ಮ ಕಾರ್ಯ ಚಟುವಟಿಕೆ ಆರಂಭಿಸಿದೆ. ಇದಕ್ಕಾಗಿಯೇ ವಿನ್ಯಾಸಗೊಳಿಸಲಾದ ವಾಹನಗಳ ಮೂಲಕ ಅಬ್ಬಕ್ಕ ಪಡೆ ತಿರುಗಾಟ ನಾಡೆಸಲಿದ್ದು, ಮಹಿಳೆಯರು ಹೆಚ್ಚಿರುವ ಭಾಗಗಳಲ್ಲಿ ಗಮನಹರಿಸಲಿದೆ.
ಬಂಟ್ವಾಳ ಸರ್ಕಲ್ ವ್ಯಾಪ್ತಿಯ ಅಬ್ಬಕ್ಕ ಪಡೆಯುವ ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ, ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಿಸಲಿದೆ. ಬಂಟ್ವಾಳ ಸರ್ಕಲ್ ಇನ್ಸ್‌ಪೆಕ್ಟರ್ ಶರಣ ಗೌಡ ವಿ.ಎಚ್. ಅವರು ಇದರ ಮೇಲ್ವಿಚಾರಕರಾಗಿದ್ದು, ಎಎಸ್‌ಪಿ ಅವರು ಮಾರ್ಗದರ್ಶಕರಾಗಿರುತ್ತಾರೆ. ಬಂಟ್ವಾಳದಲ್ಲಿ 2 ವಾಹನ ಮೂಲಕ ಈ ತಂಡ ಕಾರ್ಯಾಚರಿಸಲಿದ್ದು, 3 ಸ್ಟೇಷನ್ ವ್ಯಾಪ್ತಿಯಲ್ಲಿ ಹೊಂದಾಣಿಕೆ ಮಾಡಿಕೊಂಡು ಇದರ ಕಾರ್ಯಚಟುವಟಿಕೆ ಇರುತ್ತದೆ. ಒಬ್ಬ ಮಹಿಳಾ ಹೆಡ್‌ಕಾನ್ಸ್ ಟೆಬಲ್, 5 ಮಂದಿ ಮಹಿಳಾ ಕಾನ್ಸ್‌ಟೆಬಲ್ ಸೇರಿ ಒಟ್ಟು 6 ಮಂದಿ ಸಿಬಂದಿ ಒಂದು ತಂಡದಲ್ಲಿರುತ್ತಾರೆ. ಸ್ಥಳೀಯ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಸಿಬಂದಿಯನ್ನೇ ರಾಣಿ ಅಬ್ಬಕ್ಕ ಪಡೆಗೆ ನಿಯೋಜಿಸಲಾಗಿದೆ.
Related Articles
ಸಾಮಾನ್ಯವಾಗಿ ಪೊಲೀಸರೆಂದರೆ ಖಾಕಿ ಸಮವಸ್ತ್ರ ನಮ್ಮ ಕಣ್ಣ ಮುಂದೆ ಬರುತ್ತದೆ. ಆದರೆ ರಾಣಿ ಅಬ್ಬಕ್ಕ ಪಡೆಯ ಸಿಬಂದಿ ಭಿನ್ನ ಸಮವಸ್ತ್ರದಿಂದ ಮಿಂಚಲಿದ್ದಾರೆ. ಇವರು ನೀಲಿ ಬಣ್ಣದ (ನೇವಿ ಬ್ಲೂ) ಟೀ ಶರ್ಟ್, ಡಾಂಗ್ರಿ ಫ್ಯಾಂಟ್ (ಮಿಲಿಟರಿ ಬಣ್ಣ), ಕಮಾಂಡೋ ಶೂ, ಟೋಪಿ ಧರಿಸಲಿದ್ದಾರೆ.
Advertisement
ಕಾರ್ಯಾಚರಣೆ ಹೇಗೆ?ರಾಣಿ ಅಬ್ಬಕ್ಕ ಪಡೆಯು ಮಹಿಳೆಯರ ರಕ್ಷಣೆಯ ಕುರಿತು ಮಾಹಿತಿ ನೀಡುತ್ತದೆ. ಶಾಲೆ-ಕಾಲೇಜುಗಳು ತೆರೆದಿರುವ ವೇಳೆ ಅದರ ಸುತ್ತಮುತ್ತಲಲ್ಲಿ ಕಾರ್ಯಾಚರಿಸಲಿದ್ದು, ಬಳಿಕ ಸಂಜೆಯ ವೇಳೆ ವಿದ್ಯಾರ್ಥಿನಿಯರು, ಮಹಿಳಾ ಉದ್ಯೋಗಿಗಳು ತಂಗಿರುವ ಪಿಜಿಗಳಲ್ಲಿ ಕಾರ್ಯ ನಿರ್ವಹಿಸಲಿದೆ. ಜತೆಗೆ ಬಸ್ ನಿಲ್ದಾಣ, ರೈಲು ನಿಲ್ದಾಣ, ದೇವಸ್ಥಾನ, ಪಾರ್ಕ್‌ಗಳು, ಮಾರುಕಟ್ಟೆ ಮೊದಲಾದ ಪ್ರದೇಶಗಳಿಗೂ ಭೇಟಿ ನೀಡಲಿದೆ. ಜಾತ್ರೆ, ಉತ್ಸವಗಳಿಗೂ ಭೇಟಿ ನೀಡಿ, ಮಹಿಳಾ ರಕ್ಷಣೆಯ ಕರ್ತವ್ಯ ನಿರ್ವಹಿಸಲಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. ಇನ್ನಷ್ಟು ಪರಿಣಾಮಕಾರಿ
ಬಂಟ್ವಾಳ ಪೊಲೀಸ್ ಸರ್ಕಲ್ ವ್ಯಾಪ್ತಿಯಲ್ಲಿ ರಾಣಿ ಅಬ್ಬಕ್ಕ ಪಡೆಯು ಈಗಾಗಲೇ ಕಾರ್ಯಾಚರಣೆ ಆರಂಭಿಸಿದ್ದು, ಮೂರು ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲೂ ಕಾರ್ಯಾಚರಣೆ ನಡೆಸಲಿದ್ದಾರೆ. ಮುಂದೆ ಇನ್ನಷ್ಟು ಪರಿಣಾಮಕಾರಿಯಾಗಿ ಈ ಪಡೆಯು ತಮ್ಮ ಕರ್ತವ್ಯವನ್ನು ನಿರ್ವಹಿಸಲಿದೆ.
- ಶರಣ ಗೌಡ ವಿ.ಎಚ್. ಸರ್ಕಲ್ ಇನ್ಸ್‌ಪೆಕ್ಟರ್, ಬಂಟ್ವಾಳ ವೃತ್ತ - ಕಿರಣ್ ಸರಪಾಡಿ