ಚಿತ್ರದುರ್ಗ ಬಹಳ ಬಿಸಿಲಿನ ಪ್ರದೇಶ. ಹಲವಾರು ಕಡೆ ಕುರುಚಲು ಕಾಡು. ಕೋಟೆಯೊಳಗೆ ಬರೀ ಕಲ್ಲುಬಂಡೆಗಳ ಕಾರುಬಾರು. ಬಿಸಿಲ ಜಳವಂತೂ ಹೇಳತೀರದು. ರಜಾ ದಿನಗಳಲ್ಲಿ ಮತ್ರಾ ಕೋಟೆ ನೋಡಲು ಬರುವ ಜನರ ಓಡಾಟ. ಹೀಗೆ ಒಂದು ದಿನ ಕೋಟೆ ನೋಡುತ್ತಾ ನೆಡೆಯುತ್ತಿರುವಾಗ ಗಾಢ ನೀಲಿ ಬಣ್ಣದ ಹಕ್ಕಿ ಕಾಣಿಸಿತು. ಸುತ್ತ ಮುತ್ತ ಸಾಮಾನ್ಯವಾಗಿ ಕಾಣಸಿಗುವ ಹಕ್ಕಿಗಳಿಗಿಂತ ವಿಭಿನ್ನವಾಗಿದ್ದು, ಅಪರೂಪದ ಹಕ್ಕಿಯೆನಿಸಿತು. ಲಗುಬಗೆಯಿಂದ ಕ್ಯಾಮರಾ ತೆಗೆದು ಹಲವಾರು ಫೋಟೋ ಕ್ಲಿಕ್ಕಿಸಿ, ಸೂಕ್ಷ್ಮವಾಗಿ ಗಮನಿಸಿದೆ. ಒಂಟಿಯಾಗಿದ್ದ ಈ ಹಕ್ಕಿ ಸದ್ದಿಲ್ಲದೆ ಅಲ್ಲಲ್ಲಿ ಹುಳು ಹುಪ್ಪಟೆಗಳನ್ನು ಹುಡುಕುತ್ತಿತ್ತು.
ಮನೆಗೆ ಬಂದು ಡಾಣ ಸಲೀಂ ಆಲಿಯವರ “ಭಾರತದ ಹಕ್ಕಿಗಳು” ಪುಸ್ತಕ ತೆಗೆದು ನೋಡಿದರೆ ವಾಹ್ ಎನ್ನುವಂತಾಯಿತು. ಕಾರಣ ಅದು ಕಾಶ್ಮೀರ ಕಣಿವೆಯಿಂದ ಚಿತ್ರದುರ್ಗದ ಕೋಟೆಗೆ ಚಳಿಗಾಲದ ವಲಸೆಗಾರನಾಗಿ ಬಂದ ನೀಲಿ ಬಂಡೆಗುಟುಕ ಹಕ್ಕಿ (ಬ್ಲೂ ರಾಕ್ ತ್ರಶ್). ಗಾತ್ರದಲ್ಲಿ ಬುಲ್ ಬುಲ್ ಹಕ್ಕಿಯಷ್ಟು (೨೩ ಸೆಂ.ಮೀ). ಗಂಡು ಹಕ್ಕಿ ಗಾಢ ನೀಲಿ ಬಣ್ಣದ್ದಾಗಿದೆ. ಹೆಣ್ಣು ಪೇಲವ ಬೂದು ಬಣ್ಣವಿದ್ದು, ಮಾಸಲು ಬಿಳಿ ಬಣ್ಣದ ಕೆಳಮೈಯಲ್ಲಿ ಕಡುಕಂದು ಬಣ್ಣದ ಗೆರೆಗಳಿರುತ್ತವೆ. ಸಾಮಾನ್ಯವಾಗಿ ಒಂಟಿ ಜೀವನ. ಕೋಟೆ ಕೊತ್ತಲಗಳಲ್ಲಿ, ಹಳೆ ಬುರುಜುಗಳಲ್ಲಿ, ಕಲ್ಲು ಕ್ವಾರಿಗಳಲ್ಲಿ, ಬಂಡೆ ಕಲ್ಲುಗಳ ನಡುವೆ ಅದರ ಜೀವನ.
ಚಳಿಗಾಲದಲ್ಲಿ ಭಾರತದೆಲ್ಲೆಡೆ, ಪಾಕಿಸ್ತಾನ, ಶ್ರೀಲಂಕಾ ಮತ್ತು ಮಯನ್ಮಾರ್ ಗಳಲ್ಲೂ ಕಾಣಸಿಗುತ್ತವೆ. ಮುಖ್ಯವಾಗಿ ಹಿಮಾಲಯದಲ್ಲಿ ವಾಸ. ಕೋಟೆಗಳಿಲ್ಲದ ಕಡೆ ಹಳೆಯ ಬಂಗಲೆಗಳೂ ಆದೀತು. ಆಗಾಗ್ಗೆ ಬಾಲವನ್ನು ಅದುರಿಸುತ್ತಿರುತ್ತದೆ. ನೆಲದಲ್ಲಿರುವ ಹುಳುಗಳಿಗಾಗಿ ವಿಮಾನದಂತೆ ಇಳಿದು ಬೇಟೆಯಾಡಿ ತಿನ್ನುತ್ತವೆ. ಹುಳು ದೊಡ್ಡದಿದ್ದರೆ ಎತ್ತಿಕೊಂಡು ಹೋಗಿ ಕಲ್ಲ ಬಂಡೆಗೆ ಬಡಿದು ಅನಂತರ ತಿನ್ನುತ್ತವೆ. ಕೀಟಗಳಲ್ಲದೆ ಕೆಲವು ಜಾತಿಯ ಹಣ್ಣುಗಳನ್ನು ತಿನ್ನುತ್ತವೆ.
ಸದಾ ಮೌನಿ. ಆದರೆ ಪರಿಣಯ ಕಾಲದಲ್ಲಿ ಗಂಡು ಹಕ್ಕಿ ಸುಶ್ರಾವ್ಯವಾಗಿ ಸಿಳ್ಳೆಯಂತೆ ಹಾಡುತ್ತದೆ. ಕಾಶ್ಮೀರದ ಘರ್ ವಾಲ್ ಮುಂತಾದ ಪ್ರದೇಶಗಳಲ್ಲಿ ಎರಡು ಸಾವಿರದಿಂದ ಮೂರು ಸಾವಿರ ಮೀಟರ್ ಎತ್ತರದ ಗುಡ್ಡಗಾಡುಗಳಲ್ಲಿ ಏಪ್ರಿಲ್ ನಿಂದ ಜೂನ್ ವರೆಗೆ ಸಂತಾನಾಭಿವೃದ್ಧಿ. ಕಲ್ಲು ಬಂಡೆಗಳ ನಡುವೆ ಅಥವ ನದಿ ತೀಗಳಲ್ಲಿ ಹುಲ್ಲು ಎಲೆಗಳಿಂದ ಮಾಡಿದ ಗೂಡಿನಿಂದ ಮೂರರಿಂದ ಐದು ಕಂದು ಕೆಂಪು ಬಣ್ಣದ ಚುಕ್ಕೆಗಳಿರುವ ಪೇಲವ ನೀಲಿ ಬಣ್ಣದ ಮೊಟ್ಟೆಗಳನ್ನಿಡುತ್ತವೆ. ಈ ಪ್ರದೇಶಗಳ ಚಳಿಗಾಲದ ಕೊರೆಯುವ ಚಳಿ ತದೆಯಲಾರದೆ ಉಷ್ಣ ಪ್ರದೇಶಗಳಿಗೆ ವಲಸೆ ಹೋಗುತ್ತವೆ.
ದುರ್ಗದ ಕೋಟೆಯಲ್ಲಿ ಕಾಶ್ಮೀರದ ಹಕ್ಕಿ ಜೀವನ ನಡೆಸುವುದು ಪ್ರಕೃತಿಯ ಸೋಜಿಗ. ಸುಗಮ ಜೀವನಕ್ಕಾಗಿ ಸಾವಿರಾರು ಮೈಲಿ ದೂರದ ಊರಿನಿಂದ ಕೋಟೆನಾಡಿಗೆ ಬಂದು ಮತ್ತೆ ಸ್ವಸ್ಥಾನವಾದ ಕಾಶ್ಮೀರಕ್ಕೆ ಹಿಂತಿರುಗುವ ಅಗಾಧ ಶಕ್ತಿ ಈ ಹಕ್ಕಿಗಳಿಗಿದೆ. ಇಂಥ ಪ್ರಕೃತಿಯ ವಿಸ್ಮಯಗಳು ಅದು ಎಷ್ಟಿವೆಯೋ?
ಡಾ|ಎಸ್. ಶಿಶುಪಾಲ
(ತರಂಗ ಅಕ್ಟೋಬರ್ 25)