Advertisement

ಸಂಚಾರ ವ್ಯವಸ್ಥೆ ಸುಧಾರಣೆಗೆ ನೀಲ ನಕ್ಷೆ  ಸಿದ್ಧ 

11:22 AM Jun 11, 2018 | Team Udayavani |

ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭ 2018 ಎಪ್ರಿಲ್‌ 18ರಂದು ಮಂಗಳೂರು ನಗರದ ಪೊಲೀಸ್‌ ಆಯುಕ್ತರಾಗಿ ವಿಪುಲ್‌ ಕುಮಾರ್‌ ಅವರು ಅಧಿಕಾರ ಸ್ವೀಕರಿಸಿದ್ದು, ಇದೇ ಜೂ. 8ರಂದು ವರ್ಗಾವಣೆ ಆದೇಶ ಬಂದಿದೆ. 51 ದಿನಗಳ ಅಲ್ಪಾವಧಿಯಲ್ಲಿ ನಗರಕ್ಕೆ ಅವರು ಅತ್ಯಮೂಲ್ಯ ಸೇವೆ ಸಲ್ಲಿಸಿದ್ದಾರೆ. ವಿಶೇಷವಾಗಿ ನಗರದ ಸಂಚಾರ ವ್ಯವಸ್ಥೆಯನ್ನು ಸುಧಾರಿಸುವ ಬಗ್ಗೆ ಸಂಬಂಧ ಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳ ಸಮನ್ವಯ ಸಭೆ ನಡೆಸಿ ನೀಲ ನಕ್ಷೆಯನ್ನು ತಯಾರಿಸಿದ್ದಾರೆ. ಜತೆಗೆ ಅಪರಾಧ ಕೃತ್ಯಗಳಿಗೆ ಅಂತ್ಯ ಹಾಡುವ ಉದ್ದೇಶದಿಂದ ದುಷ್ಕೃತ್ಯ ಎಸಗುವವರ ಪಟ್ಟಿಯೊಂದನ್ನು ತಯಾರಿಸಲು ಸಿದ್ಧತೆ ನಡೆಸಿದ್ದರು. ಜತೆಗೆ ಅಕ್ರಮ ಮರಳು ಸಾಗಾಟಗಾರರ ವಿರುದ್ಧ ಕಠಿನ ಕ್ರಮ ಜರಗಿಸಲು ತೀರ್ಮಾನ ಕೈಗೊಂಡಿದ್ದಾರೆ. ಈ ಬಗ್ಗೆ ಅವರು ತಮ್ಮ ಅನುಭವವನ್ನು ಉದಯವಾಣಿ ಸುದಿನ ನಡೆಸಿದ ಸಂದರ್ಶನದಲ್ಲಿ ಹಿಲರಿ ಕ್ರಾಸ್ತಾ ಜತೆ ಹಂಚಿಕೊಂಡಿದ್ದಾರೆ. 

Advertisement

 ಮಂಗಳೂರಿನ ಬಗ್ಗೆ ನೀವು ಏನು ಹೇಳುತ್ತೀರಿ?
ಮಂಗಳೂರು ಒಂದು ಫೆಂಟಾಸ್ಟಿಕ್‌ ಸಿಟಿ. ಹೊರಗಿನವರಿಗೆ ಇದು ಕೋಮು ಪ್ರದೇಶ ಎಂಬ ನೆಗೆಟಿವ್‌ ಇಮೇಜ್‌ ಇದೆ. ಅದರಲ್ಲಿ ಸತ್ಯಾಂಶವಿಲ್ಲ. ಇಲ್ಲಿನ ಜನರು ಕಾನೂನು ಪಾಲಕರು. ಇಲ್ಲಿ ಎಲ್ಲ ಸಮುದಾಯದವರು ಸೌಹಾರ್ದದಿಂದ ಬದುಕುತ್ತಿದ್ದಾರೆ. ಚುನಾವಣೆ ಶಾಂತಿಯುತವಾಗಿ ನಡೆದಿರುವುದು ಮತ್ತು ಇತ್ತೀಚಿನ ಮಹಾ ಮಳೆಯ ಸಂದರ್ಭ ರಕ್ಷಣಾ ಕಾರ್ಯಕ್ಕೆ ಎಲ್ಲ ಸಮುದಾಯವರು ಒಟ್ಟಾಗಿ ಪರಸ್ಪರ ಸಹಾಯ ಹಸ್ತ ಚಾಚಿರುವುದು ಇದಕ್ಕೆ ನಿದರ್ಶನ.

ಆಗಿಂದಾಗ್ಗೆ ಕೆಲವೊಂದು ಘಟನೆಗಳು ನಡೆಯತ್ತಿವೆಯಲ್ಲವೇ?
ಕೆಲವೊಂದು ಅಹಿತಕರ ಘಟನೆಗಳು ನಡೆಯುತ್ತವೆ ನಿಜ. ಆದರೆ ಅದಕ್ಕೆ ಯಾವುದೇ ಬಣ್ಣ ನೀಡಬಾರದು. ಇದರಿಂದ ಸಮಸ್ಯೆ ಉಂಟಾಗುತ್ತದೆ. 

ಪೊಲೀಸರ ಕ್ರಮ ಹೇಗಿರಬೇಕು?
ಕಾನೂನು ಮೀರಿದವರ ವಿರುದ್ಧ ಕಠಿನ ಕ್ರಮ ಜರಗಿಸಬೇಕು. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷ ಹರಡುವ ಸಂದೇಶ ಬಿತ್ತರಿಸಿದವರ ಮೇಲೆ ಕಠಿನ ಕ್ರಮ ಜರಗಿಸಲಾಗಿದೆ. ಇದನ್ನು ಜನರು ಗುರುತಿಸಿದ್ದು, ಪೊಲೀಸರನ್ನು ಅಭಿನಂದಿಸಿದ್ದಾರೆ. ಇದರಿಂದಾಗಿ ಜನರಲ್ಲಿ ಜಾಗೃತಿ ಉಂಟಾಗಿದೆ. ಪೊಲೀಸರು ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಬೇಕು. ಸಕಾಲದಲ್ಲಿ, ಸೂಕ್ತ ಕ್ರಮ ಕೈಗೊಂಡರೆ ಸಂಘರ್ಷವನ್ನು ತಡೆಯಬಹುದು.

ಪೊಲೀಸರಿಗೆ ಇಲ್ಲಿರುವ ಸವಾಲುಗಳೇನು?
ಇದು ಗಡಿ ಪ್ರದೇಶ. ಕರ್ನಾಟಕ ಮತ್ತು ಕೇರಳದ ಕ್ರಿಮಿನಲ್‌ಗ‌ಳು ಆಚೀಚೆ ಹೋಗುತ್ತಿರುತ್ತಾರೆ. ಈ ಬಗ್ಗೆ ಹೆಚ್ಚು
ಗಮನ ಹರಿಸಬೇಕು. ಇದಕ್ಕಾಗಿ ಸಿ.ಸಿ. ಟಿವಿಗಳ ಸಂಖ್ಯೆ ಹೆಚಿಸಬೇಕಿದೆ. 

Advertisement

ಫೋನ್‌ ಇನ್‌ ಕಾರ್ಯಕ್ರಮದ ಬಗ್ಗೆ ನಿಮ್ಮ ಅಭಿಪ್ರಾಯ
ನಾನು ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಆ ವೇಳೆ ಬಂದ ಕರೆಗಳನ್ನು ಆಧರಿಸಿ ನಗರಾದ್ಯಂತ ಸಂಚರಿಸಿ ಸಮಸ್ಯೆಗಳನ್ನು ಅರ್ಥೈಸಿ ಕೊಂಡು ಸ್ಪಂದಿಸಲು ಯತ್ನಿಸಿದ್ದೇವೆ. ಈಗಾಗಲೇ ಹಲವು ಸಮಸ್ಯೆಗಳಿಗೆ ಪರಿಹಾರ ಸೂಚಿಸಲಾಗಿದೆ. ಜನರಿಗೆ ಉತ್ತರ ಕೊಡಲು ಸಿದ್ಧರಾಗಿದ್ದೇವೆ.

ನಗರದ ಟ್ರಾಫಿಕ್‌ ಸಮಸ್ಯೆ ಬಗ್ಗೆ ನಿಮ್ಮ ಅಭಿಪ್ರಾಯ.
ನಗರದ ಸಂಚಾರ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಮೂರು ದಿನಗಳ ಹಿಂದೆ ಮಹಾನಗರ ಪಾಲಿಕೆ, ಟ್ರಾಫಿಕ್‌ ಪೊಲೀಸ್‌, ಲೋಕೋಪಯೋಗಿ ಇಲಾಖೆ, ಮೆಸ್ಕಾಂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮುಡಾ ಮತ್ತು ಇತರ ಇಲಾಖೆಗಳ ಸಮನ್ವಯ ಸಭೆಯನ್ನು ನಡೆಸಲಾಗಿದೆ. ವಾಹನ ದಟ್ಟಣೆ, ಪಾರ್ಕಿಂಗ್‌ ಸಮಸ್ಯೆ, ಫುಟ್‌ಪಾತ್‌ ಅತಿಕ್ರಿಮಣ, ಸಿಗ್ನಲ್‌ ಲೈಟ್‌ ಸಮಸ್ಯೆ ಇತ್ಯಾದಿಗಳ ಬಗ್ಗೆ ಚರ್ಚಿಸಲಾಗಿದೆ. ನೀಲ ನಕ್ಷೆಯನ್ನು ತಯಾರಿಸಿ ಕಾಲಮಿತಿಯಲ್ಲಿ ಅನುಷ್ಠಾನಿಸಲು ಸೂಚಿಸಲಾಗಿದೆ.

ಮಂಗಳೂರಿನ ಜನರಿಗೆ ನೀಡುವ ಸಂದೇಶ ಏನು?
ಪೊಲೀಸ್‌ ಇಲಾಖೆಯಲ್ಲಿ ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಂದಿ ಬಹಳಷ್ಟು ಕಡಿಮೆ ಇದ್ದಾರೆ. ಪೊಲೀಸ್‌ ಇಲಾಖೆಯಲ್ಲಿ ಕರ್ತವ್ಯ ಸಲ್ಲಿಸುವುದು ಒಂದು ಸಮಾಜ ಸೇವೆ ಎಂದು ಪರಿಗಣಿಸಿ ದಕ್ಷಿಣ ಕನ್ನಡದ ಯುವಜನರು ಇಲಾಖೆಗೆ ಸೇರ್ಪಡೆಗೊಳ್ಳಲು ಮುಂದೆ ಬರಬೇಕು. ಪೊಲೀಸರು ಮತ್ತು ಜನರು ಒಂದೇ ನಾಣ್ಯದ ಎರಡು ಮುಖಗಳು. ಪರಸ್ಪರ ಸಹಕಾರದಿಂದ ಕಾರ್ಯ ನಿರ್ವಹಿಸಬೇಕು. ಜನರು ಕೆಟ್ಟದ್ದನ್ನು ಹುಡುಕಿ ಪೊಲೀಸರಿಗೆ ತಿಳಿಸಬೇಕು. ಹಾಗೆಯೇ ಪೊಲೀಸರು ಎಡವಿದಾಗ ಅದನ್ನೂ ತೋರಿಸಬೇಕು. ಅಕ್ರಮ ಮರಳು ಸಾಗಾಟಕ್ಕೆ ಸಂಬಂಧಿಸಿ ಇತ್ತೀಚೆಗೆ ಕರ್ತವ್ಯ ಲೋಪ ಎಸಗಿದ 3 ಪೊಲೀಸರ ವಿರುದ್ಧ ಕ್ರಮ ಜರಗಿಸಿರುವುದು ಅವರು ಕೂಡ ಎಡವಿದರೆ ಕ್ರಮ ಜರಗಿಸಲಾಗುತ್ತದೆ ಎನ್ನುವುದಕ್ಕೆ ಉದಾಹರಣೆ. 

ಮಾಹಿತಿ ಕಲೆ
ಗೋಕಳ್ಳರು, ಕಮ್ಯೂನಲ್‌ ಮತ್ತು ಇತರ ಗೂಂಡಾಗಳು, ನೈತಿಕ ಪೊಲೀಸ್‌ಗಿರಿ, ಕೋಮು ದ್ವೇಷ ಹರಡುವವರ ಮಾಹಿತಿ ಕಲೆ ಹಾಕಲು ಸಿದ್ಧತೆ ನಡೆಸಲಾಗಿದೆ. ಸಿದ್ಧ ಮಾಹಿತಿ ಇದ್ದರೆ ಸಕಾಲದಲ್ಲಿ ಸೂಕ್ತ ಕ್ರಮ ಜರಗಿಸಲು ಸಾಧ್ಯವಾಗುತ್ತದೆ. 
– ವಿಪುಲ್‌ ಕುಮಾರ್‌
  ಪೊಲೀಸ್‌ ಆಯುಕ್ತರು

Advertisement

Udayavani is now on Telegram. Click here to join our channel and stay updated with the latest news.

Next