Advertisement

ಕರಾವಳಿಗೆ ನೀಲಿ ಆರ್ಥಿಕತೆ: ಮೋದಿ

09:58 AM Jan 06, 2021 | |

ಮಂಗಳೂರು/ ಹೊಸದಿಲ್ಲಿ: ಕರಾವಳಿ ನಗರಗಳಲ್ಲಿ ನೀಲಿ ಆರ್ಥಿಕತೆ (ಬ್ಲೂ ಎಕಾನಮಿ) ಬೆಳೆಸುವ ಸಂಕಲ್ಪವಿದ್ದು, ಈ ನಿಟ್ಟಿನಲ್ಲಿ ಸಮಗ್ರ ಯೋಜನೆಗಳನ್ನು “ಆತ್ಮನಿರ್ಭರ ಭಾರತ’ ಯೋಜನೆಯಡಿ ಕೈಗೊಳ್ಳಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Advertisement

ಮಂಗಳೂರು-ಕೊಚ್ಚಿ ಮಧ್ಯೆ 450 ಕಿ.ಮೀ. ನೈಸರ್ಗಿಕ ಅನಿಲ (ಸಿಎನ್‌ಜಿ) ಸರಬರಾಜು ಕೊಳವೆ ಮಾರ್ಗವನ್ನು ಮಂಗಳವಾರ ವೀಡಿಯೋ ಕಾನ್ಫರೆನ್ಸ್‌ ಮೂಲಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಬಹುವಿಧ ಸಂಪರ್ಕ, ಕರಾವಳಿ ರಸ್ತೆ ನಿರ್ಮಾಣ ಇತ್ಯಾದಿಗೆ ಒತ್ತು ನೀಡಲಾಗುವುದು ಎಂದರು.

ಕರಾವಳಿ ಪರಿಸರವನ್ನು ಸಂರಕ್ಷಿಸುವುದಕ್ಕೆ ಸರಕಾರ ಬದ್ಧವಾಗಿದೆ. ಆಳ ಸಮುದ್ರ ಮೀನುಗಾರಿಕೆಗೆ ಸಹಕಾರ, ಸುಲಭ ಮತ್ತು ಅಗ್ಗದ ಸಾಲವನ್ನು ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಮೂಲಕ ನೀಡುವ ಉದ್ದೇಶ ವಿದೆ. ಕರಾವಳಿಯನ್ನು ನೆಮ್ಮದಿ ಬದುಕು- ನೆಮ್ಮದಿಯ ವ್ಯಾಪಾರಗಳಿಗೆ ಮಾದರಿಯಾಗಿ ಪರಿಗಣಿಸಲಾಗುವುದು ಎಂದರು.

ಒಂದು ರಾಷ್ಟ್ರ- ಒಂದು ಗ್ಯಾಸ್‌ ಗ್ರಿಡ್‌
ದೇಶಕ್ಕೆ ಒಂದು ಗ್ಯಾಸ್‌ ಗ್ರಿಡ್‌ ರೂಪಿಸುವ ನಿಟ್ಟಿನಲ್ಲಿ ಹಲವಾರು ನೀತಿಗಳನ್ನು ಸರಕಾರ ರೂಪಿಸುತ್ತಿದೆ. ಒಟ್ಟು ಇಂಧನದ ಪೈಕಿ ನೈಸರ್ಗಿಕ ಅನಿಲದ ಪಾಲನ್ನು ಶೇ. 6ರಿಂದ ಶೇ. 15ಕ್ಕೆ ಏರಿಸುವ ಗುರಿ ಇದೆ. ಇದರ ಭಾಗವಾಗಿ ಕೊಚ್ಚಿನ್‌ – ಮಂಗಳೂರು ಪೈಪ್‌ಲೈನ್‌ ಸಾಕಾರಗೊಂಡಿದೆ ಎಂದರು.

ಮಾಲಿನ್ಯ ಪ್ರಮಾಣ ಕುಗ್ಗುವ ವಿಶ್ವಾಸ
ನೈಸರ್ಗಿಕ ಅನಿಲ ಸಂಪರ್ಕದಿಂದ ಎರಡೂ ರಾಜ್ಯಗಳ ಜನರ ಬದುಕಿನ ನೆಮ್ಮದಿ ಹೆಚ್ಚಲಿದ್ದು, ಬಡವರು, ಮಧ್ಯಮ ವರ್ಗ ಮತ್ತು ಉದ್ದಿಮೆದಾರರಿಗೆ ಇಂಧನ ವೆಚ್ಚ ಕಡಿಮೆಯಾಗಲಿದೆ. ಇದು ಎಂಆರ್‌ಪಿಎಲ್‌ಗೆ ಶುದ್ಧ ಇಂಧನ ಪೂರೈಸಲಿದೆ. ರಸಗೊಬ್ಬರ, ಪೆಟ್ರೋಕೆಮಿಕಲ್ಸ್‌ ಮತ್ತು ಇಂಧನ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ವಿಸ್ತರಣೆಗೊಳ್ಳಲಿದೆ. ಇದರಿಂದ ಪ್ರವಾಸೋದ್ಯಮ ಹೊಸ ಬದಲಾವಣೆಗೆ ತೆರೆದುಕೊಳ್ಳಲಿದೆ ಎಂದರು.

Advertisement

ಕರ್ನಾಟಕ ರಾಜ್ಯಪಾಲ ವಿ.ಆರ್‌. ವಾಲಾ, ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್‌ ಖಾನ್‌, ಕರ್ನಾಟಕ ಸಿಎಂ ಬಿಎಸ್‌ವೈ, ಕೇರಳ ಸಿಎಂ ಪಿಣರಾಯಿ ವಿಜಯನ್‌, ಸಚಿವರಾದ ಸಚಿವ ಧರ್ಮೇಂದ್ರ ಪ್ರಧಾನ್‌, ಪ್ರಹ್ಲಾದ್‌ ಜೋಶಿ ಉಪಸ್ಥಿತರಿದ್ದರು.

ಯಾವ್ಯಾವ ಜಿಲ್ಲೆಗಳ ಮೂಲಕ ಪೈಪ್‌ಲೈನ್‌: ಎರ್ನಾಕುಲಂ, ತೃಶ್ಶೂರು, ಪಾಲಕ್ಕಾಡ್‌, ಮಲಪ್ಪುರಂ, ಕೋಯಿಕ್ಕೋಡ್‌, ಕಣ್ಣೂರು, ಕಾಸರಗೋಡು, ದಕ್ಷಿಣ ಕನ್ನಡ

ಅನಿಲ ಸಾಗಣೆ ಸಾಮರ್ಥ್ಯ ದಿನಕ್ಕೆ 12 ಮಿಲಿಯ ಕ್ಯುಬಿಕ್‌ ಮೀ. ನಿರ್ಮಾಣ ವೆಚ್ಚ 3,000 ಕೋ.ರೂ.

450 ಕಿ.ಮೀ ಪೈಪ್‌ಲೈನ್‌ ಉದ್ದ
10 ಜಿಲ್ಲೆಗಳಿಗೆ ಅನಿಲ

Advertisement

Udayavani is now on Telegram. Click here to join our channel and stay updated with the latest news.

Next