Advertisement

ದೌರ್ಜನ್ಯದಿಂದ ರಕ್ತ ಹರಿಸೋದು ಅನಾಗರಿಕತೆ

04:56 PM Aug 23, 2018 | Team Udayavani |

ಚಿತ್ರದುರ್ಗ: ಯುವ ಸಮುದಾಯ, ಕೆಲ ಶಿಕ್ಷಣವಂತರು ಭಯೋತ್ಪಾದನೆ, ಹಿಂಸೆ, ಅಮಾನವೀಯತೆ ಹೆಸರಿನಲ್ಲಿ ರಕ್ತದ ಕೋಡಿ ಹರಿಸುವುದನ್ನು ಕೂಡಲೇ ಸ್ಥಗಿತ ಮಾಡಬೇಕು. ಸಾವು-ಬದುಕಿನ ನಡುವೆ ಹೋರಾಟ ಮಾಡುವವರಿಗೆ ರಕ್ತ ದಾನ ಮಾಡಿದರೆ ಅಮೂಲ್ಯ ಜೀವಗಳು ಉಳಿಯುವುದರ ಜೊತೆಯಲ್ಲಿ ನಿಜವಾದ ಮಾನವೀಯತೆ ತೋರಿದಂತಾಗುತ್ತದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ನಗರದ ಡಾನ್‌ಬೋಸ್ಕೋ ಶಾಲೆಯಲ್ಲಿ ಯುನೈಟೆಡ್‌ ಕ್ರಿಶ್ಚಿಯನ್‌ ಫೋರಂ ಫಾರ್‌ ಹ್ಯೂಮನ್‌ ರೈಟ್ಸ್‌ ಹಾಗೂ ಭಾರತೀಯ ರೆಡ್‌ಕ್ರಾಸ್‌ ಸೊಸೈಟಿ ಆಶ್ರಯದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ದ್ವೇಷ, ಜನಾಂಗೀಯ ಘರ್ಷಣೆಯಿಂದ ರಕ್ತಹರಿದರೆ ಯಾವ ಪ್ರಯೋಜನವಿಲ್ಲ. ಅದಕ್ಕೆ ಬದಲಾಗಿ ದೇಹದಲ್ಲಿ ಹರಿಯುತ್ತಿರುವ ರಕ್ತವನ್ನು ಅವಶ್ಯಕತೆಯಿರುವವರಿಗೆ ನೀಡಿದರೆ ಅದಕ್ಕಿಂತ ಸರ್ವಶ್ರೇಷ್ಠವಾದ ದಾನ ಮತ್ತೂಂದಿಲ್ಲ. ದೌರ್ಜನ್ಯದಿಂದ ರಕ್ತ ಹರಿಸುವುದು ಅನಾಗರಿಕತನ. ಹಾಗಾಗಿ ಜೀವದ ಬೆಲೆಯನ್ನು ಎಲ್ಲರೂ ಅರ್ಥಮಾಡಿಕೊಂಡು ತುರ್ತು ಸಂದರ್ಭಗಳಲ್ಲಿ
ರಕ್ತದಾನ ಮಾಡಬೇಕು ಎಂದರು. 

ಹಿಂದೆ ಅನ್ನದಾನ, ವಿದ್ಯಾದಾನ ಮಾಡುವ ಸಂಸ್ಕೃತಿ ಇತ್ತು. ಈಗ ಅದು ಕಣ್ಮರೆಯಾಗಿದೆ. ಎಲ್ಲ ದಾನಕ್ಕಿಂತಲೂ ಈಗ ರಕ್ತ ದಾನ ಸರ್ವಶ್ರೇಷ್ಠ. ರಕ್ತದಾನ ಜಯಪ್ರಿಯತೆ ಪಡೆದುಕೊಂಡಿದೆ. ನೀರು, ಪೆಟ್ರೋಲ್‌, ಡೀಸೆಲ್‌ ಹೀಗೆ ಯಾವ ವಸ್ತುವನ್ನಾದರೂ ದುಡ್ಡು ಕೊಟ್ಟು ಕೊಂಡುಕೊಳ್ಳಬಹುದು. ಆದರೆ ರಕ್ತವನ್ನು ಉತ್ಪಾದಿಸಲು ಕೊಂಡುಕೊಳ್ಳಲು ಸಾಧ್ಯವಿಲ್ಲ. ಸ್ವಯಂ ಪ್ರೇರಿತವಾಗಿ ಪ್ರತಿಯೊಬ್ಬರು ರಕ್ತದಾನಕ್ಕೆ ಮುಂದಾಗಿ ಸಂಕಷ್ಟದಲ್ಲಿರು ಅಮೂಲ್ಯ ಜೀವ ಉಳಿಸಬೇಕಾಗಿದೆ ಎಂದು ತಿಳಿಸಿದರು.
 
ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಡಾ| ರಂಗನಾಥ್‌ ಮಾತನಾಡಿ, ಒಂದು ಬಾಟಲ್‌ ರಕ್ತದಿಂದ ನಾಲ್ವರ ಪ್ರಾಣ ಉಳಿಸಬಹುದು. ಅದಕ್ಕಾಗಿ ಸ್ವಯಂ ಪ್ರೇರಿತವಾಗಿ ಎಲ್ಲರೂ ರಕ್ತದಾನ ಮಾಡಬೇಕು ಎಂದರು. ಕೃತಕವಾಗಿ ರಕ್ತವನ್ನು ತಯಾರಿಸಲು ಆಗುವುದಿಲ್ಲ. ಹಲವಾರು ಸಂಶೋಧನೆಗಳನ್ನು ನಡೆಸಲಾಗುತ್ತಿದೆ. ಆದರೂ ಕಂಡುಹಿಡಿಯುವುದು ಕಷ್ಟ.
ಜನಸಂಖ್ಯೆಗನುಗುಣವಾಗಿ ವರ್ಷಕ್ಕೆ ಶೇ.1 ರಷ್ಟು ರಕ್ತದ ಅವಶ್ಯಕತೆಯಿದೆ. ನೆಗೆಟಿವ್‌ ಗ್ರೂಪ್‌ ರಕ್ತ ಸಿಗುವುದು ತುಂಬಾ ಅಪರೂಪ. ಆದ್ದರಿಂದ ಆ ಗುಂಪಿನ ರಕ್ತವನ್ನು ಸಂಗ್ರಹಿಸಿಟ್ಟುಕೊಂಡು ವೇಸ್ಟ್‌ ಮಾಡುವ ಬದಲು ತುರ್ತು ಸಂದರ್ಭಗಳಲ್ಲಿ ಗುರುತಿಸಿ ನೆಗೆಟಿವ್‌ ಗುಂಪಿನ ರಕ್ತವನ್ನು ಪಡೆದುಕೊಳ್ಳುವುದು ಮುಖ್ಯ ಎಂದು ಹೇಳಿದರು.

ರಕ್ತದಾನ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ದೂರವಾಗಿ ದೇಹದಲ್ಲಿ ಹೊಸ ಜೀವ ಕಣಗಳು ಉತ್ಪತ್ತಿಯಾಗಿ ಕೊಬ್ಬು ಕಡಿಮೆಯಾಗುತ್ತದೆ. ರಕ್ತದಲ್ಲಿ ಹಿಮೋಗ್ಲೋಬಿನ್‌ ಶೇ. 12 ಗ್ರಾಂನಷ್ಟು ಇರುವವರು ರಕ್ತದಾನ ಮಾಡಬಹುದು. ಹದಿನೆಂಟರಿಂದ 60 ವರ್ಷದವರು ರಕ್ತದಾನಕ್ಕೆ ಅರ್ಹರು ಎಂದು ತಿಳಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ನರೇನಹಳ್ಳಿ ಅರುಣ್‌ಕುಮಾರ್‌ ಮಾತನಾಡಿ, ಕೊಡಗಿನಲ್ಲಿ ಮಳೆಯಿಂದಾದ ಪ್ರವಾಹದಲ್ಲಿ ಮನೆ, ಮಠ, ಆಸ್ತಿ, ಪಾಸ್ತಿ ಅಷ್ಟೆ ಅಲ್ಲದೆ ಜಾತಿ, ಧರ್ಮ, ಮತ, ಪಂಥಗಳು ಸಹ ಕೊಚ್ಚಿ ಹೋಗಿದ್ದು, ಈಗ ಅಲ್ಲಿ ಉಳಿದಿರುವುದು ಗಂಜಿ ಕೇಂದ್ರದ ಜೊತೆಗೆ ಮಾನವೀಯತೆ ಮತ್ತು ಮಾನವತ್ವವಷ್ಟೆ. ಹಾಗಾಗಿ ಹೆಚ್ಚಿನ ಸಹಾಯ ಮಾಡುವಂತೆ ಮನವಿ ಮಾಡಿದರು.

Advertisement

ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ| ಜಯಪ್ರಕಾಶ್‌, ಉಪನ್ಯಾಸಕ ನಾಗರಾಜ್‌, ಯುನೈಟೆಡ್‌ ಕ್ರಿಶ್ಚಿಯನ್‌ ಫೋರಂ ಫಾರ್‌ ಹ್ಯೂಮನ್‌ ರೈಟ್ಸ್‌ ಸಂಘಟನೆ ಜಿಲ್ಲಾಧ್ಯಕ್ಷ ಫಾದರ್‌ ವರ್ಗಿಸ್‌ ಪಲ್ಲಿಪುರಂ, ಪ್ರಧಾನ ಕಾರ್ಯದರ್ಶಿ ಎಂ.ಎಸ್‌. ರಾಜು, ಉಪಾಧ್ಯಕ್ಷ ಫಾದರ್‌ ಸತೀಶ್‌, ಕೋಆರ್ಡಿನೇಟರ್‌ ಫಾದರ್‌ ಪಾಲ್‌ಕೋಡೆ, ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಜಿಲ್ಲಾ ಖಜಾಂಚಿ ಯು.ಸಿ. ಗಿರೀಶ್‌, ಜಿಲ್ಲಾಸ್ಪತ್ರೆ ರಕ್ತನಿಧಿ  ಕೇಂದ್ರದ ಡಾ|ರೂಪ, ಅನಂತರಾಜ್‌, ರವಿಕುಮಾರ್‌, ತೊಡರನಾಳ್‌ ವಿಜಯಕುಮಾರ್‌, ಡ್ಯಾನಿಯಲ್‌, ಬಸವೇಶ್ವರ ಆಸ್ಪತ್ರೆ ರಕ್ತನಿ ಕೇಂದ್ರದ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next