Advertisement

ರಕ್ತ ಒಸರುವ ಮರ

06:00 AM Sep 06, 2018 | |

ಮೊದಲು ಪತ್ತೆಯಾದಾಗ ಈ ಮರವನ್ನು ಕಂಡು ಸ್ಥಳೀಯರು ಭಯಪಟ್ಟಿದ್ದರಂತೆ. ಕೆಲವರು ಇದನ್ನು ಮಾಟ ಮಂತ್ರದ ಮರ ಅಂತಲೂ ಕರೆದು ಭಯ ಹುಟ್ಟಿಸಿದ್ದರಂತೆ!

Advertisement

ಆಪ್ರಿಕಾದ ದಕ್ಷಿಣ ಪ್ರದೇಶದಲ್ಲಿ ಪೆಟೋಕಾರ್ಪಸ್‌ ಅಂಗೋಲೆನ್ಸಿಸ್‌ ಎಂದು ಸಸ್ಯಶಾಸ್ತ್ರದಲ್ಲಿ ಗುರುತಿಸಲ್ಪಡುವ ಮರವಿದೆ. ಅದನ್ನು ಹೆಚ್ಚಾಗಿ ಗುರುತಿಸುವುದು “ಬ್ಲಿಡ್‌ ವುಡ್‌ ಟ್ರೀ’ ಎಂಬ ಹೆಸರಿನಿಂದ. ಯಾಕೆಂದರೆ, ಈ ಮರವನ್ನು ಕಡಿದಾಗ ಅದರಿಂದ ರಕ್ತದಂಥ ದ್ರವ ಒಸರುತ್ತದೆ. ಈ ಮರವನ್ನು ಸ್ಥಳೀಯರು, “ಕಿಯಾಟ್‌’, “ಮುನಿಂಗಾ’, “ಮುಕ್ವಾ’ ಮುಂತಾದ ಹೆಸರುಗಲಿಂದ ಕರೆಯುತ್ತಾರೆ. ಆದರೆ ವಿಶ್ವಾದ್ಯಂತ ಇದು ಪ್ರಸಿದ್ದಿಯಾಗಿರುವುದು “ಬ್ಲಿಡ್‌ ವುಡ್‌ ಟ್ರೀ’ ಎಂದು!

ಭಯ ಹುಟ್ಟಿಸಿದ್ದ ಮರ
ಬ್ಲಿಡ್‌ ವುಡ್‌ ಟ್ರೀಯ ಕಾಂಡವನ್ನಾಗಲಿ, ಕೊಂಬೆಯನ್ನಾಗಲಿ ಕೊಡಲಿ ಅಥವಾ ಇನ್ನಾವುದೇ ಹರಿತವಾದ ಆಯುಧದಿಂದ ಕಡಿದಾಗ, ಆ ಜಾಗದಿಂದ ಕೆಂಪು ಬಣ್ಣದ ದ್ರವ ಹೊರಬರುತ್ತದೆ. ದ್ರವ ಅಂಟಂಟಾಗಿರುವುದರಿಂದ ರಕ್ತವನ್ನೇ ಹೆಚ್ಚು ಹೋಲುತ್ತದೆ. ಮೊದಲು ಪತ್ತೆಯಾದಾಗ ಈ ಮರವನ್ನು ಕಂಡು ಸ್ಥಳೀಯರು ಭಯಪಟ್ಟಿದ್ದರಂತೆ. ಕೆಲವರು ಇದನ್ನು ಮಾಟ ಮಂತ್ರದ ಮರ ಅಂತಲೂ ಕರೆದು ಭಯ ಹುಟ್ಟಿಸಿದ್ದರಂತೆ. ಆದರೀಗ ಯಾರಿಗೂ ಆ ಭಯ ಇಲ್ಲ.

ದ್ರವದಿಂದ ಸೌಂದರ್ಯ
ಮೊದಲು ಭಯ ಪಟ್ಟಿದ್ದೇನೋ ನಿಜ, ಆದರೆ ಕ್ರಮೇಣ ಭಯ ಮಾಯವಾದ ನಂತರ ಮನುಷ್ಯ ರಕ್ತವರ್ಣದ ದ್ರವವನ್ನು ದಿನಬಳಕೆ ವಸ್ತುಗಳ ತಯಾರಿಕೆಯಲ್ಲಿ ಬಳಸಿಕೊಳ್ಳುವುದು ಹೇಗೆ ಎಂಬುದರ ಕುರಿತು ಅಧ್ಯಯನ ನಡೆಸಿದ. ಈಗ ದ್ರವವನ್ನು ಬಣ್ಣದ ವಸ್ತುಗಳ ತಯಾರಿಕೆಯಲ್ಲಿ ಬಳಸುತ್ತಿದ್ದಾರೆ. ಮತ್ತೆ ಕೆಲವೆಡೆ ಪ್ರಾಣಿಯ ಕೊಬ್ಬನ್ನು ಇದರೊಡನೆ ಬೆರೆಸಿ ಅನೇಕ ಸೌಂದರ್ಯವರ್ಧಕಗಳ ತಯಾರಿಕೆಯಲ್ಲಿಯೂ ಬಳಸಲಾಗುತ್ತಿದೆ. ಮೈ ಮತ್ತು ಮುಖದ ಸೌಂದರ್ಯ ಹೆಚ್ಚಿಸಲು ಬಳಸುವ ಸೌಂದರ್ಯವರ್ಧಕಗಳ ತಯಾರಿಕೆಯಲ್ಲೇ ಇದರ ಬಳಕೆ ಹೆಚ್ಚು.

ಛತ್ರಿ ಮರ
ಬ್ಲಿಡ್‌ ವುಡ್‌ ಟ್ರೀ 12 ರಿಂದ 18 ಮೀಟರ್‌ ಎತ್ತರಕ್ಕೆ ಬೆಳೆಯುತ್ತದೆ. ಇದರ ತೊಗಟೆ ಬಹಳ ಒರಟು. ದಟ್ಟ ಕಂದು ಬಣ್ಣ. ಆಕರ್ಷಣೀಯವಾದ ಹಳದಿ ಹೂವುಗಳು ಇದರ ವೈಶಿಷ್ಟ್ಯ. ಮರದ ಕೊಂಬೆಗಳು ಬಹಳ ಎತ್ತರದಲ್ಲಿ ಕವಲೊಡೆಯುವುದರಿಂದ ಛತ್ರಿಯಾಕಾರದಂತೆ ಕಂಡುಬರುತ್ತದೆ. ಮಳೆ ಬಂದಾಗ ಇದರಡಿ ನಿಂತರೆ ಅಕ್ಷರಶಃ ಛತ್ರಿಯಂತೆ ಮಳೆಯಿಂದ ರಕ್ಷಣೆ ಪಡೆದುಕೊಳ್ಳಬಹುದು.

Advertisement

ಔಷಧೀಯ ಗುಣವೂ ಇದೆ 
ಬ್ಲಿಡ್‌ ವುಡ್‌ ಟ್ರೀನ ಕೆಂಪು ದ್ರವದಲ್ಲಿ ಅನೇಕ ಔಷಧೀಯ ಹಾಗೂ ಹಲವಾರು ಕಾಯಿಲೆಗಳನ್ನು ಗುಣಪಡಿಸುವ ಅಂಶವಿರುವುದನ್ನೂ ಸ್ಥಳೀಯರು ಕಂಡುಕೊಂಡಿದ್ದಾರೆ. ಗಾಯ ಬೇಗ ವಾಸಿಯಾಗಲು ಇದರ ಲೇಪನ ಅತ್ಯಂತ ಉಪಯುಕ್ತ. ಇದನ್ನು ಚರ್ಮದ ಮೇಲೆ ಹಚ್ಚಿದರೆ ಗಾಯ ಶೀಘ್ರ ಮಾಯುತ್ತದೆ ಎಂಬ ನಂಬಿಕೆ ಅವರಲ್ಲಿದೆ. ದ್ರವದ ಹೊರತಾಗಿ ಮರವನ್ನು ಪೀಠೊಪಕರಣ ತಯಾರಿಕೆಗೆ ಬಳಸಲಾಗುತ್ತಿದೆ. ಇವು ನೋಡಲು ಆಕರ್ಷಕವಾಗಿರುವುದರಿಂದ ಬೆಲೆಯೂ ಹೆಚ್ಚು. ಅತಿ ಹೆಚ್ಚು ಕಾಲ ಬಾಳಿಕೆ ಬರುವ ಮರವಾದ್ದರಿಂದ ದೋಣಿಗಳ ತಯಾರಿಕೆಯಲ್ಲಿ, ಸ್ನಾನದ ಮನೆಯ ನೆಲಹಾಸಾಗಿ ಹೆಚ್ಚು ಬಳಕೆಯಾಗುತ್ತದೆ.

ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next