ವರದಿ: ಹೇಮರಡ್ಡಿ ಸೈದಾಪುರ
ಹುಬ್ಬಳ್ಳಿ: ಕೋವಿಡ್‌ನಿಂದ ಜಿಲ್ಲೆಯ ರಕ್ತ ಭಂಡಾರಗಳಲ್ಲಿ ರಕ್ತ ಹಾಗೂ ಪ್ಲಾಸ್ಮಾ ಕೊರತೆ ಉಂಟಾಗಿದ್ದು, ಮುಂದಿನ ತಿಂಗಳು ಈ ಸಮಸ್ಯೆ ತೀವ್ರಗೊಳ್ಳಲಿದೆ. 18-45 ವಯಸ್ಸಿನವರಿಗೆ ಕೋವಿಡ್ ಲಸಿಕೆ ಅಭಿಯಾನದ ಪರಿಣಾಮ ರಕ್ತದ ಅಭಾವ ಮತ್ತಷ್ಟು ಹೆಚ್ಚಾಗಲಿದ್ದು, ಲಸಿಕೆ ಪಡೆಯುವ ಮೊದಲೇ ಆಸ್ಪತ್ರೆಗಳಲ್ಲಿರುವ ರಕ್ತ ಭಂಡಾರಗಳಿಗೆ ತೆರಳಿ ಇದರ ಅಭಾವ ನೀಗಿಸಲು ಮುಂದಾಗಬೇಕಿದೆ.
ಕೋವಿಡ್, ಕಾಲೇಜುಗಳು ರಜೆ, ಲಾಕ್ ಡೌನ್ ಪರಿಣಾಮ ಈಗಾಗಲೇ ಜಿಲ್ಲೆಯ ಎರಡು ಸರಕಾರಿ ರಕ್ತ ಭಂಡಾರಗಳಾದ ಧಾರವಾಡ ಜಿಲ್ಲಾಸ್ಪತ್ರೆ, ಹುಬ್ಬಳ್ಳಿಯ ಕಿಮ್ಸ್ ಸೇರಿದಂತೆ ಖಾಸಗಿ 11 ರಕ್ತ ಭಂಡಾರಗಳಲ್ಲಿ ರಕ್ತದ ಕೊರತೆ ಕಾಣಿಸಿಕೊಂಡಿದೆ. ಜನವರಿಯಿಂದ ಮಾರ್ಚ್ ಅಂತ್ಯದವರಿಗೆ ಶಿಬಿರಗಳ ಮೂಲಕ ಸಂಗ್ರಹಿಸಿದ ರಕ್ತ ಖಾಲಿಯಾಗುತ್ತಿದೆ. ಅಲ್ಪಸ್ವಲ್ಪ ಉಳಿದಿರುವ ವಿವಿಧ ಗುಂಪುಗಳ ರಕ್ತ 15 ದಿನಗಳಿಗೆ ಸಾಕಾಗಲಿದೆ. ಸಾಂಪ್ರದಾಯಿಕ ರಕ್ತದಾನಿಗಳಾಗಿರುವ 18-45 ವಯಸ್ಸಿನವರಿಗೆ ಮೇ1 ರಿಂದ ಕೋವಿಡ್ ಲಸಿಕೆ ಅಭಿಯಾನ ನಡೆಯುವುದರಿಂದ ಮುಂದಿನ ತಿಂಗಳ ಅಂತ್ಯಕ್ಕೆ ಇದರ ಅಭಾವ ಹೆಚ್ಚಾಗಲಿದೆ ಎನ್ನುವ ಆತಂಕ ಆವರಿಸಿದೆ.
ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಪ್ರತಿ ತಿಂಗಳು 200-250 ಬ್ಯಾಗ್, ಕಿಮ್ಸ್‌ನಲ್ಲಿ 300 ಬ್ಯಾಗ್, ನವನಗರದ ಕ್ಯಾನ್ಸರ್ ಆಸ್ಪತ್ರೆಯಲ್ಲಿ 100-120 ಬ್ಯಾಗ್, ರಾಷ್ಟ್ರೋತ್ಥಾನದಲ್ಲಿ 1200 ಬ್ಯಾಗ್ ಬಳಕೆ ಹಾಗೂ ಸಂಗ್ರಹವಿರುತ್ತಿತ್ತು. ಈಗ ಸಂಗ್ರಹ ಪ್ರಮಾಣ ಎರಡಂಕಿಗೆ ಇಳಿದಿದೆ. ರಕ್ತದಾನ ಮಾಡದಿದ್ದರೂ ನೀಡುತ್ತಿದ್ದ ರಾಷ್ಟ್ರೋತ್ಥಾನ ರಕ್ತ ನಿಧಿಯಲ್ಲಿ ಒಬ್ಬರು ರಕ್ತ ದಾನ ಮಾಡಿದರೆ ಬೇಕಾದ ರಕ್ತ ನೀಡುವ ಪರಿಸ್ಥಿತಿ ಉಂಟಾಗಿತ್ತು. ಇತರೆಡೆ ರೋಗಿಗಳ ಸಂಬಂಧಿ ಕರು ರಕ್ತ ನೀಡಿದರೆ ಮಾತ್ರ ರಕ್ತ ನೀಡುವ ವ್ಯವಸ್ಥೆ ಇರುವುದರಿಂದ ಇದು ಲಾಕ್‌ಡೌನ್ ಸಮಯದಲ್ಲಿ ಮತ್ತಷ್ಟು ಸಮಸ್ಯೆಯಾಗಲಿದೆ.
ರಕ್ತಕ್ಕೆ ಬೇಡಿಕೆ: ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೆಲ ಶಸ್ತ್ರ ಚಿಕಿತ್ಸೆಗಳನ್ನು ಮುಂದೂಡಲಾಗಿದೆ. ಆದರೆ ಹೆರಿಗೆ, ಕ್ಯಾನ್ಸರ್, ಅಪಘಾತ, ಕೆಲವೊಂದು ಅಗತ್ಯ ಶಸ್ತ್ರ ಚಿಕಿತ್ಸೆ, ಹಿಮೋಫೇಲಿಯಾ, ತಲಸೀಮಿಯಾದಂತಹ ರೋಗಿಗಳಿಗೆ ರಕ್ತ ಅನಿವಾರ್ಯ. ಇದೀಗ ಉಂಟಾಗಿರುವ ಅಭಾವದಿಂದ ಅಗತ್ಯ ಗುಂಪಿನ ಮಾದರಿಯ ರಕ್ತ ದೊರೆಯದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಬೇಡಿಕೆ, ಸಂಗ್ರಹಕ್ಕೆ ಸರಿಯಾಗಿದ್ದರೂ ಮುಂದೆ ಕಷ್ಟ ಎನ್ನುವ ಅಭಿಪ್ರಾಯಗಳಿದ್ದು, ಕಿಮ್ಸ್, ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಮಾತ್ರ ರಕ್ತದ ಬೇಡಿಕೆ ಕಡಿಮೆಯಾಗಿಲ್ಲ.