ಬನ್ನೂರು: ಎಲ್ಲಾ ದಾನಕ್ಕಿಂತಲೂ ಶ್ರೇಷ್ಟವಾದ ದಾನ ರಕ್ತದಾನವಾಗಿದ್ದು, ರಕ್ತವನ್ನು ದಾನ ಮಾಡುವುದರಿಂದ ತುರ್ತು ಅವಶ್ಯಕತೆಯುಳ್ಳ ರೋಗಿಯ ಜೀವ ರಕ್ಷಣೆ ಮಾಡಿದಂತಾಗುತ್ತದೆ ಎಂದು ಹಿರಿಯ ರಾಜಕಾರಣಿ ಎಸ್.ಶಂಕರ್ ತಿಳಿಸಿದರು. ಪಟ್ಟಣದ ಗಾಣಿಗನಕೊಪ್ಪಲು ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವತಿಯಿಂದ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಸೇವಾ ಯೋಜನೆ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ರಕ್ತದಾನದ ಬಗ್ಗೆ ಗ್ರಾಮಾಂತರ ಪ್ರದೇಶದಲ್ಲಿ ರಕ್ತದಾನ ಮಾಡುವುದರಿಂದ ವ್ಯಕ್ತಿಯಲ್ಲಿ ರಕ್ತ ಕಡಿಮೆಯಾಗಿ ಆತ ರೋಗಗಳಿಗೆ ತುತ್ತಾಗುತ್ತಾನೆ ಎನ್ನುವ ತಪ್ಪು ಕಲ್ಪನೆ ಇದೆ. ಇದನ್ನು ವಿದ್ಯಾವಂತರು ಅರಿವು ಮೂಡಿಸಬೇಕೆಂದರು. ಆರೋಗ್ಯವಂತ ವ್ಯಕ್ತಿ ಪ್ರತಿ 3 ತಿಂಗಳಿಗೊಮ್ಮೆ ರಕ್ತ ನೀಡುವುದರಿಂದ ಆತನಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ಆತ ಮತ್ತಷ್ಟು ಚೈತನ್ಯದಿಂದ ಇರಲು ಸಾಧ್ಯವಾಗುತ್ತದೆ ಎಂದು ನುಡಿದರು.
ಯುವಕ-ಯುವತಿಯರು ಹೆಚ್ಚು ರಕ್ತದಾನ ಮಾಡುವಂತೆ ಕರೆ ನೀಡಿದ ಅವರು, ರಕ್ತದಾನದಲ್ಲಿ ಯಾವುದೇ ಹಿಂಜರಿಕೆ ಬೇಡ. ಕೆಲವೊಂದು ಸಂದರ್ಭಗಳನ್ನು ಹೊರತು ಪಡಿಸಿದರೆ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಬಹುದೆಂದು ತಿಳಿಸಿದರು. ಉಪನ್ಯಾಸಕ ಗೂಳೇಗೌಡ ಮಾತನಾಡಿ, ತುರ್ತು ಪರಿಸ್ಥಿತಿಯಲ್ಲಿರುವ ವ್ಯಕ್ತಿಗಳಿಗೆ ರಕ್ತದ ಅವಶ್ಯಕತೆ ನೀಗುತ್ತಿರುವುದು ಇಂತಹ ರಕ್ತದಾನ ಶಿಬಿರದಲ್ಲಿ ಸಂಗ್ರಹವಾಗಿರುವ ರಕ್ತದಾನದಿಂದ. ಮೊದಲು ರಕ್ತದಾನಿಗಳಿಗೆ ಕೃತಜ್ಞತೆ ಸಲ್ಲಿಸಬೇಕೆಂದರು.
ಬನ್ನೂರು ಸಮುದಾಯ ಆರೋಗ್ಯ ಕೇಂದ್ರದ ಡಾ.ರವಿಕುಮಾರ್, ರಕ್ತದಾನ ಮಾಡುವುದರಿಂದ ವ್ಯಕ್ತಿ ದೇಹದ ತೂಕದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಬದಲಾಗಿ ಹೊಸ ರಕ್ತ ಆತನ ಶರೀರದಲ್ಲಿ ಉತ್ಪತ್ತಿಯಾಗುತ್ತದೆ. ಜೊತೆಗೆ ಶರೀರದ ಅಂಗಗಳು ಕ್ರಿಯಾಶೀಲವಾಗಿ ಕೆಲಸ ಮಾಡಲು ಸಹಕಾರಿಯಾದಂತಾಗುತ್ತದೆ ಎಂದು ತಿಳಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಹೊನ್ನಯ್ಯ, ಶಿಬಿರಾಧಿಕಾರಿ ಬಿ.ಎನ್. ನವೀನ್, ನಯನ್‌ಗೌಡ, ಮೇರಿಸಿಂಡ್ರಲಾ, ನಂದಿನಿ, ಆರ್.ಗಿರೀಶ, ರಘುಕುಮಾರ್, ಸುಶೀಲ, ಅತ್ತಹಳ್ಳಿ ದೇವರಾಜು, ಅನಿಲ್, ಕೃಷ್ಣ, ಗ್ರಾಮಸ್ಥರು, ಉಪನ್ಯಾಸಕ ಸಿಬ್ಬಂದಿ ಇದ್ದರು.