ಕೊಪ್ಪಳ: ಕಳೆದ ವರ್ಷ ಕೋವಿಡ್-19 ಮಹಾಮಾರಿ ಭೀತಿಯಲ್ಲಿ ಲಾಕ್‌ಡೌನ್ ಜಾರಿಯಾಗಿದ್ದರೂ ಕೊಪ್ಪಳದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯು ರಕ್ತ ನಿಧಿ ಸಂಗ್ರಹಿಸುವ ಸೇವೆ ಮರೆತಿಲ್ಲ. ಜನರು ಮನೆಯಿಂದ ಹೊರ ಬರದಂತ ಕಠಿಣ ಪರಿಸ್ಥಿತಿಯಲ್ಲೂ 2020ರ ವರ್ಷದಲ್ಲಿ ಬರೊಬ್ಬರಿ 7273 ಯೂನಿಟ್ ರಕ್ತ ನಿಧಿ ಸಂಗ್ರಹಿಸಿ ರಾಜ್ಯದ ಗಮನ ಸೆಳೆದಿದೆ.
ಹೌದು.. ಕಳೆದ ವರ್ಷ ಕೋವಿಡ್ ಮಹಾಮಾರಿಯಿಂದ ಇಡೀ ಜಗತ್ತೇ ತಲ್ಲಣಗೊಂಡಿತು. ದೇಶದಲ್ಲೂ ಲಾಕ್ ಡೌನ್ ಜಾರಿ ಮಾಡಿ ಮನೆಯಿಂದ ಯಾರೂ ಬರದಂತೆ ಜನರಲ್ಲಿ ಎಚ್ಚರಿಕೆ ನೀಡಲಾಗಿತ್ತು. ಸೋಂಕು ನಿಯಂತ್ರಣಕ್ಕಾಗಿ ಮನೆಯಲ್ಲಿಯೇ ಇರಿ ಎಂದು ಸರ್ಕಾರ ಸೂಚನೆ ನೀಡಿತ್ತು. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಾಹಸಗಾಥೆ ಮರೆಯುವಂತಿಲ್ಲ. ಅದರಲ್ಲೂ ಕೊಪ್ಪಳ ಜಿಲ್ಲೆಯ ಬ್ಲಿಡ್‌ಬ್ಯಾಂಕ್ ಸೇವೆ ನಿಜಕ್ಕೂ ಅನನ್ಯವಾದದ್ದು.
ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದ ವೇಳೆ ಬಹುಪಾಲು ಜನರು ತುತ್ತಿನ ಅನ್ನಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೈಯಲ್ಲಿ ಹಣವಿದ್ದರೂ ತಿನ್ನಲು ಆಹಾರ ಇಲ್ಲದಂತಹ ಸಂಕಷ್ಟದ ಸನ್ನಿವೇಶದಲ್ಲಿ ಬ್ಲಿಡ್ ಬ್ಯಾಂಕ್ ರಕ್ತದಾನಿಗಳನ್ನು ಆಸ್ಪತ್ರೆಗೆ ಕರೆ ತಂದು ಅವರಿಂದ ಸುರಕ್ಷಿತವಾಗಿ ರಕ್ತ ಪಡೆದು ಮನೆಗಳಿಗೆ ಬಿಟ್ಟು ಬಂದಿದೆ. ಇನ್ನು ನಾಲ್ಕಾರು ಜನರು ರಕ್ತದಾನ ಮಾಡುವ ಮನಸ್ಸಿದ್ದರೂ ಅವರ ಬಳಿಯೇ ಬ್ಲಿಡ್‌ಬ್ಯಾಂಕ್ ವಾಹನ ತೆರಳಿ ಅಲ್ಲಿಯೇ ಅವರಿಂದ ರಕ್ತ ಸಂಗ್ರಹಿಸಿ ಅಗತ್ಯವಿರುವ ರೋಗಿಗಳಿಗೆ ಪೂರೈಕೆ ಮಾಡುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಅಂತಹ ಸಾಹಸದ ಕೆಲಸವನ್ನು ಕೊಪ್ಪಳ ಬ್ಲಿಡ್ ಬ್ಯಾಂಕ್ ಮಾಡಿ ಗಮನ ಸೆಳೆದಿದೆ.
7273 ಯೂನಿಟ್ ರಕ್ತ ಸಂಗ್ರಹ:
ಕೊಪ್ಪಳ ಬ್ಲಿಡ್ ಬ್ಯಾಂಕ್ 2020ರಲ್ಲಿ ರಕ್ತ ನಿಧಿ ಸಂಗ್ರಹಿಸಿದ ಅಂಕಿ ಅಂಶ ಗಮನಿಸಿದಾಗ, ಫೆಬ್ರುವರಿಯಲ್ಲಿ 674 ಯೂನಿಟ್ ರಕ್ತ ಸಂಗ್ರಹಿಸಿದ್ದರೆ, ಮಾರ್ಚ್‌ನಲ್ಲಿ 461, ಏಪ್ರಿಲ್-450, ಮೇ-452, ಜೂನ್-444, ಜುಲೈ-388, ಸೆಪ್ಟೆಂಬರ್ -517, ಅಕ್ಟೊಬರ್-600, ನವೆಂಬರ್-584, ಡಿಸೆಂಬರ್-748, 2021ರ ಜನವರಿ-1036, ಫೆಬ್ರುವರಿ-446 ಯೂನಿಟ್ ಸೇರಿ ಒಟ್ಟಾರೆ ಕಳೆದ ಸಾಲಿನಲ್ಲಿ 7273 ಯೂನಿಟ್ ರಕ್ತ ಸಂಗ್ರಹಿಸಿದೆ. ಕಳೆದ ಮಾರ್ಚ್‌ನಿಂದ ಅಕ್ಟೋಬರ್‌ವರೆಗೂ ಅಂದಾಜು 4 ಸಾವಿರ ಯೂನಿಟ್ ರಕ್ತ ಸಂಗ್ರಹಿಸಿದ್ದು ಸಾಹಸವೇ ಸರಿ.
2ನೇ ಸ್ಥಾನ: ಬೆಂಗಳೂರಿನಲ್ಲಿ ಪ್ರತಿವರ್ಷ 40-45 ಸಾವಿರ ಯೂನಿಟ್ ರಕ್ತ ಸಂಗ್ರಹಿಸಲಾಗುತ್ತದೆ. ಆದರೆ ಲಾಕ್‌ಡೌನ್ ಸಂದರ್ಭದಲ್ಲಿಯೇ 18 ಸಾವಿರ ಯೂಟಿನ್ ರಕ್ತ ಸಂಗ್ರಹಿಲಾಗಿದೆ. ಮುಂದುವರಿದಂತಹ ಪ್ರದೇಶದಲ್ಲಿ ಅಷ್ಟು ರಕ್ತ ನಿಧಿ ಸಂಗ್ರಹವಾಗಿದೆ. ಆದರೆ ಕಲ್ಯಾಣ ಕರ್ನಾಟಕದ ಭಾಗದ ಹಿಂದುಳಿದ ಕೊಪ್ಪಳ ಜಿಲ್ಲೆಯಲ್ಲಿ ಕೋವಿಡ್ ಸಂದರ್ಭದಲ್ಲಿ 7 ಸಾವಿರ ಯೂನಿಟ್ ರಕ್ತ ನಿಧಿ ಸಂಗ್ರಹ ಮಾಡುವುದು ನಿಜಕ್ಕೂ ಸಾಹಸಗಾಥೆಯೇ ಸರಿ.
ಕೊಪ್ಪಳ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯು ರಕ್ತ ನಿಧಿ ಸಂಗ್ರಹದಲ್ಲಿ ರಾಜ್ಯದಲ್ಲಿಯೇ 2ನೇ ಸ್ಥಾನದಲ್ಲಿರುವುದು ಜಿಲ್ಲೆಯ ಹೆಮ್ಮೆಯ ವಿಷಯವಾಗಿದೆ. ಒಟ್ಟಿನಲ್ಲಿ ಕೋವಿಡ್-19 ಸೋಂಕಿನ ಆರ್ಭಟದ ಮಧ್ಯೆಯೂ ಬ್ಲಿಡ್ ಬ್ಯಾಂಕ್ ತಂಡ ಜೀವದ ಹಂಗು ತೊರೆದು ಜನ ಸೇವೆಯ ಕಾಯಕ ಮಾಡಿದ್ದು ಮೆಚ್ಚುವಂತಹ ಕಾರ್ಯವಾಗಿದೆ.
ದತ್ತು ಕಮ್ಮಾರ