Advertisement

ಕೆ.ಮಹದೇವ್ ಶಾಸಕರೋ ಕಂದಾಯ ಇಲಾಖೆಯ ನೌಕರರೋ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ

07:45 PM Feb 09, 2022 | Team Udayavani |

ಪಿರಿಯಾಪಟ್ಟಣ : ಶಾಸಕ ಕೆ. ಮಹದೇವ್ ರವರು ಕುಚೋಧ್ಯ ಮತ್ತು ಇಲ್ಲಸಲ್ಲದ ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ತಾಲ್ಲೂಕಿನಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ ಎಂದು ಪಿರಿಯಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ. ಸ್ವಾಮಿ ಆರೋಪಿಸಿದರು.

Advertisement

ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಬುಧವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ದಿವಂಗತ ಮಾಜಿ ಪ್ರಧಾನಿ ಇಂದಿರಾಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ್ ಅರಸು ಅವರ ಕಾಲದಲ್ಲಿ ಆರಂಭವಾದ ವಿಧವಾವೇತನ,  ಅಂಗವಿಕಲರಿಗೆ, ವೃದ್ಧರಿಗೆ ಮಾಶಾಸನ ಸೇರಿದಂತೆ ಇನ್ನಿತರ ಸರ್ಕಾರದ ಸವಲತ್ತುಗಳು ಅಂದಿನಿಂದ ಇಂದಿನ ವರೆಗೂ ಮುಂದುವರಿಯುತ್ತಿವೆ ಇದಕ್ಕೆ ಯಾರ ಶೀಫಾರಸ್ಸಿನ ಅಗತ್ಯವಿಲ್ಲ, ಹೀಗಿರುವಾಗ   ಶಾಸಕ ಕೆ.ಮಹದೇವ್ ಈ ಸೌಲಭ್ಯಗಳನ್ನು  ಪಡೆಯಲು ಸಾರ್ವಜನಿಕರು ನಮ್ಮ ಮನೆ ಬಾಗಿಲಿಗೆ ಬಂದು ಅರ್ಜಿ ಸಲ್ಲಿಸಬೇಕು ಎಂದು ಫಾರ್ಮಾನು ಹೊರಡಿಸಿದ್ದಾರೆ ಇದಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ತಾಳ ಹಾಕುತ್ತಾ,  ಧ್ವನಿವರ್ಧಕದಲ್ಲಿ,  ಸಾರ್ವಜನಿಕ ಸ್ಥಳಗಳಲ್ಲಿ ಕೂಡ ಪ್ರಚಾರ ಮಾಡಿ ಸರ್ಕಾರಿ ಸವಲತ್ತು ಮಡೆಯಲು ಶಾಸಕರ ಮನೆ ಬಾಗಲಿಗೆ ಹೋಗಬೇಕು ಎಂದು ಪ್ರಚಾರ ಮಾಡುತ್ತಿರುವುದು ಕಂಡು ಬಂದಿದೆ ಹಾಗಿದ್ದರೆ ಕೆ.ಮಹದೇವ್ ಶಾಸಕರೋ ಕಂದಾಯ ಇಲಾಖೆಯ ನೌಕರರೋ ಸ್ಪಷ್ಟಪಡಿಸಬೇಕು ಎಂದರು. ತಾಲ್ಲೂಕಿನ ದೊಡ್ಡ ಕೊಪ್ಪಲು ಗ್ರಾಮದಲ್ಲಿ ಕನಕ ಸಮುದಾಯ ಭವನ ನಿರ್ಮಾಣಕ್ಕೆ  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಶಾಸಕ ಕೆ.ವೆಂಕಟೇಶ್ ಅವರು 10  ಲಕ್ಷ ರೂಗಳನ್ನು ಮಂಜೂರು ಮಾಡಿಸಿದ್ದರು. ಈ ಅನುದಾನವನ್ನು ಶಾಸಕರು  ಇಲ್ಲಿಯವರೆಗೂ ತಡೆದು ಚುನಾವಣೆ ಸಮೀಪಿಸುತ್ತಿರುವ 2.60 ಲಕ್ಷ ಅನುದಾನ ನೀಡಿ ಗ್ರಾಮಸ್ಥರನ್ನು ದಿಕ್ಕು ತಪ್ಪಿಸುವ ಗಿಮಿಕ್ ರಾಜಕಾರಣವನ್ನು ಮಾಡುತ್ತಿದ್ದಾರೆ ಎಂದು ದೂರಿದರು.

ರೆಹಮಾತ್ ಜಾನ್ ಬಾಬು ಮಾತನಾಡಿ ಶಾಸಕ ಕೆ.ಮಹದೇವ್ ತಮ್ಮ ಅವದಿಯಲ್ಲಿ ಒಂದು ನಿವೇಶನ ಹಾಗೂ ಮನೆಯನ್ನು ಮಂಜೂರು ಮಾಡಿಸಿಲ್ಲ ಒಂದು ವೇಳೆ ಇವರ ಅವಧಿಯಲ್ಲಿ ಮಾಡಿರುವ ಯೋಜನೆಗಳ ಬಗ್ಗೆ ಶ್ವೇತಪತ್ರ ಹೊರಡಿಸಿ   ಮಾಹಿತಿಯನ್ನು ನೀಡಲಿ ಇದನ್ನು ಬಿಟ್ಟು ಜನತೆಗೆ ಮಂಕು ಬೂದಿ ಎರಚುವ ಕೆಲಸ ಮಾಡಬಾರದು ಎಂದು ಆಗ್ರಹಿಸಿದರು.

ಐಲಾಪುರ ರಾಮು ಮಾತನಾಡಿ ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ನೌಕರರು ಮಾಡಬೇಕು ಎಂಬ ಸಾಮಾನ್ಯ ಅರಿವು ಕೂಡ ಶಾಸಕರಿಗೆ ಇಲ್ಲವಾಗಿದೆ. ಮಧ್ಯವರ್ತಿಗಳ ಹಾವಳಿಯಿಂದ ಯೋಜನೆಯ ಫಲಾನುಭವಿಗಳು ಸಾಕಷ್ಟು ಹಣ ವ್ಯಯ ಮಾಡಬೇಕಾಗಿದೆ. ಈ ಬಗ್ಗೆ ಪ್ರತಿನಿತ್ಯ ಸಾರ್ವಜನಿಕರು  ದೂರನ್ನು ನೀಡುತ್ತಿದ್ದಾರೆ. ತಾಲೂಕು ಆಡಳಿತ ಭವನದಲ್ಲಿ ನೆಪಮಾತ್ರಕ್ಕೆ ಶಾಸಕರ ಕಚೇರಿಯನ್ನು ತೆಗೆದು ಇದುವರೆಗೂ ಕೂಡ ಅಲ್ಲಿ ಶಾಸಕರು ಕಾರ್ಯನಿರ್ವಹಿಸದೆ ಇತರೆ ಕಚೇರಿಗಳಿಗೆ ತೊಂದರೆಯಾಗುತ್ತಿದೆ. ಕೆಲವು ಇಲಾಖೆಗಳು ಕಚೇರಿಯಿಲ್ಲದೆ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಆದ್ದರಿಂದ ಶಾಸಕರು ತಮ್ಮ ಕಚೇರಿಯನ್ನು  ಬಿಟ್ಟುಕೊಡಬೇಕು. ಅತಿಥಿ ಶಿಕ್ಷಕರ ನೇಮಕ ದಲ್ಲಿಯೂ ಕೂಡ ತಮ್ಮ ಶಿಫಾರಸ್ಸಿನ ನೆಪವಾಗಿಟ್ಟುಕೊಂಡು ಪಕ್ಷದ ಕಾರ್ಯಕರ್ತರಿಗೆ ಮಾತ್ರ ಶಿಫಾರಸು ಪತ್ರ ನೀಡುವುದಾಗಿ ಹೇಳಿ ಉದ್ಯೋಗ ಶಾಲಾ ಕಾಲೇಜುಗಳಿಗೆ ಶೀಫಾರಸ್ಸುಪತ್ರ ನೀಡುತ್ತಿದ್ದಾರೆ. ಭೂ ಮಾಪನ ಇಲಾಖೆಯ ಅಧಿಕಾರಿಗಳನ್ನು ಬಳಸಿಕೊಂಡು ಕೇವಲ ಕಾಂಗ್ರೆಸ್ ಕಾರ್ಯಕರ್ತರ ಜಮೀನುಗಳ ಒತ್ತುವರಿ ತೆರವು ಮಾಡುತ್ತ ತಾಲೂಕಿನಾದ್ಯಂತ ಅಶಾಂತಿಯ ವಾತಾವರಣ ಉಂಟು ಮಾಡುತ್ತಿದ್ದಾರೆ  ಎಂದರು.

Advertisement

ತಹಸೀಲ್ದಾರ್ ಕಚೇರಿಗೆ ಮುತ್ತಿಗೆ :

ಸರ್ಕಾರದ ಯೋಜನೆಗಳನ್ನು ಪಡೆಯಲು ಶಾಸಕರ ಮನೆ ಬಾಗಿಲಿಗೆ ಹೋಗಿ ಅರ್ಜಿ ನೀಡುವಂತೆ ಸಂದೇಶ ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ತಹಶೀಲ್ದಾರ್ ಕೆ.ಚಂದ್ರಮೌಳಿಯವರನ್ನು ತರಾಟೆಗೆ ತೆಗೆದುಕೊಂಡರು. ಸರ್ಕಾರಿ ಯೋಜನೆಗಳ ಬಗ್ಗೆ ಅಧಿಕಾರಿಗಳಾದ ತಾವುಗಳು ಸೂಕ್ತ ಸುತ್ತೋಲೆ ಮೂಲಕ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಬೇಕು ಹೀಗಿರುವಾಗ ಶಾಸಕರ ಮನೆಯಲ್ಲಿ ಅರ್ಜಿ ಪಡೆಯುವಂತೆ  ಪ್ರಚಾರ ಮಾಡುತ್ತಿರುವ ಅಧಿಕಾರಿಗಳ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ತಹಸೀಲ್ದಾರ್ ಚಂದ್ರಮೌಳಿ ಮಾತನಾಡಿ ಸರ್ಕಾರಿ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು ಸರ್ಕಾರ ಮತ್ತು ಅಧಿಕಾರಿಗಳು ಸನ್ನದ್ಧರಾಗಿದ್ದಾರೆ ಆದರೆ ಈ ಕಾರ್ಯಕ್ರಮಗಳ ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಿರುವ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಪ್ರಕಾಶ್, ಪಿ.ವಿ. ರವಿ, ಹರ್ಷದ್, ಚಾಮರಾಜು, ಗ್ರಾಪಂ ಸದಸ್ಯರಾದ ಮಾಲಂಗಿ ಹರೀಶ್, ಹಬಟೂರು ರಘು, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಆನಂದ್, ಮುಖಂಡ ಪಿ.ಮಹದೇವ್, ಬಿ.ಜೆ.ಬಸವರಾಜು ಅಶೋಕ್ ಕುಮಾರ್ ಗೌಡ, ಸೋಮಣ್ಣ, ಶಫಿ ಅಹಮದ್, ಜೆ.ಮೋಹನ್, ಮುರಳಿ, ವಿಜಯೇಂದ್ರ, ಅಬ್ಬೂರು ಮಹದೇವ, ಆರ್. ಡಿ.ಮಹದೇವ್ ಸೇರಿದಂತೆ ಮತ್ತಿತರರು ಹಾಜರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.