Advertisement

ಅಂಧರ ಸ್ವಯಂ ಕೃಷಿಗೆ ಡಿಜಿಟಲ್‌ ಸ್ಟಿಕ್‌ ಕಣ್ಣು

06:00 AM Nov 10, 2018 | |

ಹುಬ್ಬಳ್ಳಿ: ಇನ್ನು ಮುಂದೆ ಅಂಧರು ಸಹ ಸ್ವತಃ ಕೃಷಿ ಮಾಡಬಹುದು. ಮಣ್ಣಿನ ತೇವಾಂಶ, ದಿನದ ಉಷ್ಣಾಂಶ, ಬೆಳೆಗಳ ರೋಗ, ಕೀಟಬಾಧೆ, ಬೆಳೆ ಸ್ಥಿತಿಗತಿ ಬಗ್ಗೆ ಮಣ್ಣು, ಬೆಳೆಗಳೊಂದಿಗೆ ಸಂವಾದದ ಮೂಲಕ ತಿಳಿಯಬಹುದಾಗಿದೆ. ಇದಕ್ಕೆಲ್ಲ ಡಿಜಿಟಲ್‌ಸ್ಟಿಕ್‌ ದಾರಿದೀಪವಾಗಿದೆ!

Advertisement

ಕೃಷಿ ಕಾಯಕದ ಒಲವು, ಬಯಕೆ ಇದ್ದರೂ ಅಂಧತ್ವದ ಕಾರಣದಿಂದ ಸಾಧ್ಯವಾಗುತ್ತಿಲ್ಲವೆಂದು ಕೃಷಿಯಿಂದ ದೂರವಿರುವ ಅಂಧರು ಸಾಮಾನ್ಯರಂತೆ ಬಹುತೇಕವಾಗಿ ಕೃಷಿ ಮಾಡುವಂತಾಗಲು ತಂತ್ರಜ್ಞಾನ ಬಳಕೆಯೊಂದಿಗೆ ದೇಶದಲ್ಲೇ ಮೊದಲೆನ್ನುವ ರೀತಿ ಪ್ರಯೋಗ ಕೈಗೊಳ್ಳಲಾಗುತ್ತಿದೆ. ವಿಜಯಪುರ ಜಿಲ್ಲೆಯ ಗಿರೀಶ ಬದ್ರಗೊಂಡ ಹಲವು ಸಂಶೋಧನೆಗಳನ್ನು ಕೈಗೊಳ್ಳುತ್ತಿದ್ದು, ಅದರಲ್ಲಿ ಅಂಧರು ಕೃಷಿ ಕಾಯಕದಲ್ಲಿ ತೊಡಗುವಂತೆ ಮಾಡುವುದು ಒಂದಾಗಿದೆ. ಇಂತಹ ಸಂಶೋಧನೆಗಾಗಿಯೇ “ಕೃಷಿ ತರಂಗ’ ಎಂಬ ಸಂಸ್ಥೆ ಆರಂಭಿಸಿದ್ದು, ಇವರ ಅನ್ವೇಷಣೆ, ಸಾಧನೆ ರಾಷ್ಟ್ರಪತಿ ಭವನದಲ್ಲೂ ಪ್ರದರ್ಶನಗೊಂಡಿದ್ದು, ರಾಷ್ಟ್ರಪತಿಯಿಂದ ಪ್ರಶಸ್ತಿ ಸೇರಿ ವಿವಿಧ ಸುಮಾರು 16 ಪ್ರಮುಖ ಪ್ರಶಸ್ತಿಗಳು ಇವರಿಗೆ ಬಂದಿವೆ.

ಅಂಧರು ಕೃಷಿ ಕಾಯಕ ಕೈಗೊಳ್ಳಲು ಅನುಕೂಲವಾಗುವಂತೆ ಹೊಲದಲ್ಲಿ ಸೆನ್ಸರ್‌ ಅಳವಡಿಸಲಾಗುತ್ತದೆ. ಸೆನ್ಸರ್‌ ಹಾಗೂ ಡಿಜಿಟಲ್‌ಸ್ಟಿಕ್‌ ನಡುವಿನ ಸಂಪರ್ಕ-ಸಂವಾದ ಅಂಧರ ಕಿವಿಗೆ ಕೇಳಿಸುತ್ತದೆ. ಡಿಜಿಟಲ್‌ ಸ್ಟಿಕ್‌ ಮೂಲಕ ಸುಲಭವಾಗಿ ನಿರ್ವಹಿಸಬಹುದಾಗಿದೆ. ಅಂಧರು ಈ ಸ್ಟಿಕ್‌ನೊಂದಿಗೆ ಜಮೀನು ಪ್ರವೇಶಿಸುತ್ತಿದ್ದಂತೆಯೇ ಸೆನ್ಸರ್‌ನ ಮಾತು ಆರಂಭವಾಗುತ್ತದೆ. ಹೊಲದಲ್ಲಿ ಮಣ್ಣಿನ ತೇವಾಂಶ ಯಾವ ಭಾಗದಲ್ಲಿ ಎಷ್ಟಿದೆ, ಇಂದಿನ ತಾಪಮಾನದ ಸ್ಥಿತಿಗತಿ, ಬೆಳೆಗಳಿಗೇನಾದರೂ ರೋಗ-ಕೀಟ ಬಾಧೆ ಕಾಣಿಸಿಕೊಂಡಿದೆಯೇ, ಅದರ ಪ್ರಮಾಣ ಎಷ್ಟಿದೆ, ಬಿತ್ತನೆಯಾದ ಬೆಳೆ ಯಾವ ಹಂತದಲ್ಲಿದೆ, ತೋಟಗಾರಿಕೆಯಾಗಿದ್ದರೆ ಹಣ್ಣುಗಳು ಮಾಗಿವೆಯೇ ಇತ್ಯಾದಿ ಮಾಹಿತಿ ಲಭ್ಯವಾಗುತ್ತದೆ. 

ಬೆಳೆಗಳಿಗೆ ನೀರು ಹರಿಸುವ ಅವಶ್ಯಕತೆ ಇದ್ದರೆ ಡಿಜಿಟಲ್‌ ಸ್ಟಿಕ್‌ನಿಂದಲೆ ನೀರು ಹರಿಸುವಿಕೆ ಆರಂಭಿಸಬಹುದಾಗಿದೆ. ನೀರು ಸಾಕೆನಿಸಿದರೆ ಸಂದೇಶ ಬರುತ್ತದೆ ಆಗ ವಾಲ್‌ಗ‌ಳನ್ನು ಬಂದ್‌ ಮಾಡಬಹುದಾಗಿದೆ.

ಬೆಳೆಗಳಿಗೆ ಕಾಣಿಸಿಕೊಳ್ಳುವ ರೋಗ-ಕೀಟಗಳ ಕುರಿತು ಇಮೇಜ್‌ ಪ್ರೊಸೆಸ್‌ನಲ್ಲಿ ಪತ್ತೆ ಮಾಡಲಾಗುತ್ತಿದ್ದು, ಈ ಬಗ್ಗೆ ಅಗತ್ಯವಿರುವ ಹೆಚ್ಚಿನ ಮಾಹಿತಿಯನ್ನು “ಕೃಷಿ ತರಂಗ’ದಿಂದ ಮಾರ್ಗದರ್ಶನ, ಮಾಹಿತಿ ನೀಡಲಾಗುತ್ತದೆ. ಅಂಧರಿಗೆ ತೋಟಗಾರಿಕಾ ಬೆಳೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಅಟ್ರಾಸೊನಿಕ್‌ ಸೆನ್ಸರ್‌ ಮೂಲಕ ತೋಟಗಾರಿಕಾ ಬೆಳೆಗಳು ಎಷ್ಟು ಎತ್ತರದಲ್ಲಿ ಬೆಳೆದಿವೆ ಎಂಬ ಮಾಹಿತಿ ದೊರೆಯುತ್ತದೆ.

Advertisement

ಡಿಜಿಟಲ್‌ ಸ್ಟಿಕ್‌ ಮತ್ತು ಅಟ್ರಾಸೊನಿಕ್‌ ಸೆನ್ಸರ್‌ ಸಹಾಯದೊಂದಿಗೆ ಅಂಧರು ಹಣ್ಣುಗಳನ್ನೂ ಕೀಳಬಹುದಾಗಿದೆ.ಒಂದು ಎಕರೆಯಲ್ಲಿ ಪ್ರಯೋಗ: ಅಂಧರು ಕೃಷಿ ಮಾಡಬಹುದು ಎಂಬುದನ್ನು ಮನದಟ್ಟು ಮಾಡಲು ಸುಮಾರು ಒಂದು ಎಕರೆ ಜಮೀನಿನಲ್ಲಿ ಪ್ರಯೋಗ ಕೈಗೊಳ್ಳಲಾಗುತ್ತದೆ. ಒಂದು ಎಕರೆಯಲ್ಲಿ ನಾಲ್ಕು ಪ್ಲಾಟ್‌ಗಳನ್ನಾಗಿ ಮಾಡಿ ಒಂದು ಪ್ಲಾಟ್‌ನಲ್ಲಿ ತರಕಾರಿ, ಇನ್ನೊಂದರಲ್ಲಿ ದಾಳಿಂಬೆ, ಮತ್ತೂಂದರಲ್ಲಿ ನಿಂಬೆಹಣ್ಣು, ನಾಲ್ಕನೇ ಪ್ಲಾಟ್‌ನಲ್ಲಿ ವಿವಿಧ ಹಣ್ಣು ಸಸಿಗಳನ್ನು ನೆಡಲಾಗುತ್ತದೆ. ಇಲ್ಲಿನ ಬೆಳೆಗಳ ನಿರ್ವಹಣೆಗೆ ಅಂಧರೊಬ್ಬರನ್ನು ನೇಮಿಸಲಾಗುತ್ತಿದ್ದು, ಅವರೇ ಕೃಷಿ ಕಾಯಕದ ಜತೆಗೆ ಬಂದವರಿಗೆ ಅವರೇ ವಿವರಣೆ ನೀಡುವಂತೆ ಮಾಡುವ ನಿಟ್ಟಿನಲ್ಲಿ ಯತ್ನಗಳು ನಡೆಯುತ್ತಿವೆ.

ಮಿನಿ ವೆದರ್‌ ಸ್ಟೇಶನ್‌:  ಅಂಧರಿಗೆ ಅನುಕೂಲವಾಗುವಂತೆ ಮಿನಿ ಹವಾಮಾನ ಕೇಂದ್ರ ಆರಂಭಿಸಲಾಗುತ್ತಿದ್ದು, ಕೇಂದ್ರದಿಂದ ಹವಾಮಾನ ಮುನ್ಸೂಚನೆ, ಮಣ್ಣಿನ ಫ‌ಲವತ್ತತೆ ಮಾಹಿತಿ, ತೇವಾಂಶದ ಮಾಹಿತಿಯನ್ನು ಇದರ ಸಹಾಯದಿಂದ ಪಡೆಯಬಹುದಾಗಿದೆ. ಕೃಷಿ ತರಂಗದಿಂದ ಅಂಧರಿಗೆ ತಂತ್ರಜ್ಞಾನದ ಸೌಲಭ್ಯದೊಂದಿಗೆ ಕೃಷಿ ಕಾಯಕದ ಕುರಿತಾಗಿ ಅಗತ್ಯ ತರಬೇತಿಯನ್ನು ನೀಡಲಾಗುತ್ತದೆ. ಅಂಧರು ಕೃಷಿ ಕಾಯಕ ಕೈಗೊಳ್ಳಲು ತಂತ್ರಜ್ಞಾನ ಬಳಕೆಗೆ ಪ್ರಸ್ತುತ ಒಂದು ಎಕರೆಗೆ ಅಂದಾಜು 4-5 ಲಕ್ಷ ರೂ. ವೆಚ್ಚವಾಗುತ್ತದೆ. ಇದರ ಬಳಕೆ ಪ್ರಮಾಣ ಹೆಚ್ಚಿದರೆ ವೆಚ್ಚದಲ್ಲಿ ಶೇ.50 ಕಡಿಮೆ ಆಗಲಿದೆ ಎಂಬುದು ಕೃಷಿ ತರಂಗದ ವಿಶ್ವಾಸ.

ಅಂಧರು ಕೃಷಿ ಕಾಯಕದಲ್ಲಿ ತೊಡಗುವಂತಾಗಬೇಕೆಂಬ ಉದ್ದೇಶದಿಂದ ಈ ತಂತ್ರಜ್ಞಾನ ರೂಪಿಸಿದ್ದೇನೆ. ವಿಶೇಷವಾಗಿ ಅಂಧರಿಗೆ ಸೂಕ್ಷ್ಮತೆ ಅಧಿಕವಾಗಿರುತ್ತದೆ. ಕಣ್ಣು ಕಾಣುವುದಿಲ್ಲ ಎಂಬುದು ಬಿಟ್ಟರೆ ಅವರು ಕೇಳಿದ್ದನ್ನು, ಒಮ್ಮೆ ಮಾಡಿದ್ದನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ. ಅವರ ಸೂಕ್ಷ್ಮತೆ ಹಾಗೂ ತೀಕ್ಷ್ಣತೆಗೆ ತಂತ್ರಜ್ಞಾನ ಸಾಥ್‌ ನೀಡಿದರೆ, ಸಾಮಾನ್ಯರಿಗಿಂತಲೂ ಒಂದು ಕೈ ಮೇಲೆನ್ನುವ ರೀತಿಯಲ್ಲಿ ಅವರು ಕೃಷಿ ಸಾಧನೆ ಮಾಡಬಲ್ಲರು.
– ಗಿರೀಶ ಬದ್ರಗೊಂಡ, ಮುಖ್ಯಸ್ಥ, ಕೃಷಿ ತರಂಗ ಸಂಸ್ಥೆ

– ಅಮರೇಗೌಡ ಗೋನವಾರ​​​​​​​

Advertisement

Udayavani is now on Telegram. Click here to join our channel and stay updated with the latest news.

Next