Advertisement
ಜನ್ಮ ಕೊಟ್ಟ ಮಾತಾ-ಪಿತೃರು, ವಿದ್ಯಾ ಬುದ್ದಿ ಕೊಟ್ಟ ಗುರುಗಳು, ನಮ್ಮ ಹಿತವನ್ನು ಬಯಸುವ ಮಿತ್ರ ಬಳಗ ಇವರೆಲ್ಲರೂ ನಮ್ಮ ಬದುಕಿನಲ್ಲಿ ಅಭಿನಂದನೆಗೆ ಅರ್ಹರು. ನಮ್ಮ ಹಿತವನ್ನು ಅಪೇಕ್ಷಿಸುವ ಹಿರಿಯರು ಹಾಗೂ ದೇವರಿಂದ ಪಡೆಯುವ ಆಶೀರ್ವಾದಗಳು ಸರಿ ಸಮಾನವಾಗಿರುತ್ತವೆ ಎಂಬುದು ಶ್ರೀಮದ್ಭಾಗವತದಿಂದ ನಾವು ತಿಳಿದು ಕೊಳ್ಳಬೇಕಾದ ಸತ್ಯ ವಿಚಾರ. ಗುರು-ಹಿರಿಯರಿಂದ ಆಶೀರ್ವಾದ ಪಡೆದು ತಮ್ಮ ಕೆಲಸ ಕಾರ್ಯಗಳನ್ನು ಆರಂಭಿಸಿದಲ್ಲಿ ಅದರಲ್ಲಿ ಯಶಸ್ವಿಯಾಗುತ್ತವೆ ಎಂದು ಧರ್ಮ ಶಾಸ್ತ್ರಗಳೇ ಹೇಳುತ್ತವೆ. ಆದರೆ ಆ ಕೆಲಸ ಕಾರ್ಯಗಳಲ್ಲಿ ನಮ್ಮಲ್ಲಿ ದೃಢ ಚಿತ್ತದ ಕಠಿನ ಕ್ರಿಯಾಶೀಲ ಮನೋಭಾವನೆಯೂ ಇರಬೇಕಾಗುತ್ತದೆ.ಶುದ್ಧ ಚಾರಿತ್ರÂವಂತರಾಗಿ, ಸಜ್ಜನರಾಗಿ, ಪ್ರಾಮಾಣಿಕರಾಗಿ ಜೀವನವನ್ನು ನಡೆಸಿದಾಗ ದೇವರ ಅನುಗ್ರಹವು ಇದ್ದೇ ಇರುತ್ತದೆ. ಅದಕ್ಕೆ ಪೂರಕವಾಗಿ ಗುರು – ಹಿರಿಯರ ಆಶೀರ್ವಾದ ಲಭಿಸಿದಾಗ ಫಲಿತಾಂಶದಲ್ಲಿ ಸಫಲತೆಯನ್ನು ಕಾಣಲು ಸಾಧ್ಯವಿದೆ. ಅದಕ್ಕಾಗಿ ಗುರು – ಹಿರಿಯರ ಮನಸ್ಸನ್ನು ನೋಯಿಸದೆ ಗೌರವ ಕೊಡುವುದರ ಮುಖೇನ ಸಕಾರಾತ್ಮಕವಾದ ಸಂಚಲನ ಕ್ರಿಯೆ ಭಗವಂತನಿಂದ ಪ್ರಾಪ್ತಿಯಾಗುತ್ತದೆ. ಹಿರಿಯರಿಗೆ ಕೊಡುವ ವಿಧೇಯತೆಯು ನಮ್ಮನ್ನು ಸಂಸ್ಕೃತಿ, ಸಂಸ್ಕಾರದಲ್ಲಿ ಉನ್ನತಿಯ ಪರಂಪರೆಯಲ್ಲಿ ಮುನ್ನಡೆಯಲು ಪ್ರೇರಣೆಯಾಗುತ್ತದೆ.
ಗುರು -ಹಿರಿಯರು ನಮಗೆ ಎಂದೆಂದೂ ಒಳ್ಳೆಯದನ್ನೇ ಬಯಸುವವರಾದ್ದರಿಂದ ಅವರ ನೀತಿ – ಬೋಧನೆಗಳ ಒಂದೊಂದು ಮಾತುಗಳು ನಮಗೆ ಮುತ್ತಿನ ಹಾರಕ್ಕೆ ಸರಿ ಸಮಾನವಾಗುತ್ತದೆ. ನಮ್ಮನ್ನು ಯಾವ ರೀತಿಯಲ್ಲಿ ಶ್ರೇಯಸ್ಸಿನ ಹಾದಿಗೆ ಕೊಂಡು ಹೋಗುತ್ತಾರೆಯೋ ಅದೇ ರೀತಿ ಅವರ ಕಷ್ಟ – ಕಾರ್ಪಣ್ಯ ಹಾಗೂ ವೃದ್ಯಾಪ್ಯದ ಸಮಯದಲ್ಲಿ ಅವರ ಸೇವೆ ಮಾಡುವುದು ದೇವರು ಮೆಚ್ಚುವ ಕೆಲಸವೇ ಆಗಿರುತ್ತದೆ. ಧರ್ಮ ಚಕ್ರವು ನಮ್ಮ ಜೀವನ ಚಕ್ರವನ್ನು ಹಿಂಬಾಲಿಸುತ್ತಾ ಬರುತ್ತದೆ. ನಾವು ಯಾವ ರೀತಿಯಲ್ಲಿ ಹಿರಿಯರನ್ನು ಪೋಷಣೆ ಮಾಡುತ್ತೇವೆಯೋ ಅದೇ ರೀತಿಯಲ್ಲಿ ನಮ್ಮ ಕಠಿಣ ಸಮಯದಲ್ಲಿ ನಮ್ಮ ಕಿರಿಯರಿಗೂ ಅದೇ ಮನಸ್ಥಿತಿಯ ಯೋಗ ಭಾಗ್ಯವನ್ನು ಭಗವಂತನು ಕರುಣಿಸುತ್ತಾನೆ.