Advertisement

ನಟಿಯರಿಗೆ ಜಾಮೀನು ಕೊಡದಿದ್ದರೆ ಸ್ಫೋಟ, ಕೊಲೆ!; ನ್ಯಾಯಾಧೀಶರಿಗೇ ಡಿಟೋನೇಟರ್‌ ಇರಿಸಿ ಪತ್ರ

12:38 AM Oct 20, 2020 | mahesh |

ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣದ ಆರೋಪಿಗಳಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಗೆ ಜಾಮೀನು ನೀಡಬೇಕು, ಇಲ್ಲದಿದ್ದರೆ ಕೋರ್ಟ್‌ ಅನ್ನೇ ಸ್ಫೋಟಿಸುವುದಾಗಿ ಕಿಡಿಗೇಡಿಗಳು ನ್ಯಾಯಾಧೀಶರಿಗೇ ಬೆದರಿಕೆ ಹಾಕಿದ್ದಾರೆ!

Advertisement

ಅಷ್ಟೇ ಅಲ್ಲ, ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪ್ರಕರಣದ ಎಲ್ಲ ಆರೋಪಿಗಳಿಗೂ ಜಾಮೀನು ನೀಡಬೇಕು ಎಂದಿರುವ ಆರೋಪಿಗಳು, ಎನ್‌ಡಿಪಿಎಸ್‌ ನ್ಯಾಯಾಲಯವನ್ನು ಸ್ಫೋಟಿಸುತ್ತೇನೆ ಎಂದು ಬೆದರಿಕೆ ಹಾಕಿ ನ್ಯಾಯಾಧೀಶ ಸೀನಪ್ಪ ಅವರಿಗೆ ಸ್ಫೋಟಕ ವಸ್ತು ಇರುವ ಪಾರ್ಸೆಲ್‌ ಕಳುಹಿಸಿದ್ದಾರೆ.

ಎರಡೂ ಪ್ರಕರಣಗಳ ಆರೋಪಿಗಳು ಅಮಾಯಕರಾಗಿದ್ದು, ಯಾವುದೇ ತಪ್ಪು ಮಾಡಿಲ್ಲ. ಪ್ರತಿಯೊಬ್ಬರಿಗೂ ಜಾಮೀನು ನೀಡಬೇಕು. ಹಾಗೆಯೇ ಈ ಎಲ್ಲ ಆರೋಪಿಗಳಿಗೆ ಜಾಮೀನು ಸಿಗಲು ಸಹಕರಿಸಬೇಕು, ಪ್ರಕರಣದ ತನಿಖೆಯಿಂದ ದೂರ ಸರಿಯಬೇಕು ಎಂದು ಬೆಂಗಳೂರು ಪೊಲೀಸ್‌ ಆಯುಕ್ತ ಕಮಲ್‌ ಪಂತ್‌, ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ಮತ್ತು ಉಪ ಪೊಲೀಸ್‌ ಆಯುಕ್ತ ಕೆ.ಪಿ. ರವಿಕುಮಾರ್‌ ಅವರಿಗೂ ಪತ್ರ ಬರೆಯಲಾಗಿದೆ. ಇಲ್ಲದಿದ್ದರೆ ನ್ಯಾಯಾಧೀಶ ಸಹಿತ ಈ ಎಲ್ಲರ ಕಾರು, ಕಚೇರಿಗಳನ್ನು ಸ್ಫೋಟಿಸುವ ಎಚ್ಚರಿಕೆ ಸಂದೇಶವನ್ನೂ ನೀಡಿದ್ದಾರೆ!

ಈ ಪಾರ್ಸೆಲ್‌ ಬಾಕ್ಸ್‌ ಮತ್ತು ಪತ್ರಗಳನ್ನು ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು ಅಂಚೆ ಕಚೇರಿಯಿಂದ ಕಳುಹಿಸಲಾಗಿದೆ. ಈ ಸಂಬಂಧ ಹಲಸೂರು ಗೇಟ್‌ ಠಾಣೆಯಲ್ಲಿ 2 ಪ್ರತ್ಯೇಕ ಎಫ್ಐಆರ್‌ ದಾಖಲಿಸಲಾಗಿದೆ.

ಸ್ಫೋಟಿಸುವ ಬೆದರಿಕೆ
ಸಂಜೆ 4.15ರ ಸುಮಾರಿಗೆ ಸಿಟಿ ಸಿವಿಲ್‌ ಕೋರ್ಟ್‌ ಆವರಣದಲ್ಲಿ ಇರುವ 36ನೇ ಸಿಸಿಎಚ್‌ ನ್ಯಾಯಾಲಯದ ನ್ಯಾಯಾಧೀಶರಾದ ಸೀನಪ್ಪ ಅವರ ಕಚೇರಿಗೆ ಒಂದು ಪಾರ್ಸೆಲ್‌ ಬಂದಿತ್ತು. ಈ ಪಾರ್ಸೆಲ್‌ನಲ್ಲಿ ಡೆಟೋನೇಟರ್‌ ಇತ್ತು. ಜತೆಗೆ, ತಾನು ಸೂಚಿಸುವ ಪ್ರಕರಣದ ಆರೋಪಿಗಳಿಗೆ ಜಾಮೀನು ನೀಡಬೇಕು. ಇಲ್ಲವಾದಲ್ಲಿ ನಿಮ್ಮ ಕಾರುಗಳ ಸಮೇತ ಸ್ಫೋಟಗೊಳಿಸುತ್ತೇನೆ ಎಂದು ಬೆದರಿಸಿರುವ ಪತ್ರ ಇತ್ತು. ಇದರಿಂದ ಭಯಗೊಂಡ ನ್ಯಾಯಾಧೀಶರು ಮತ್ತು ವಕೀಲರು ಕೊಠಡಿಯಿಂದ ಸುರಕ್ಷಿತ ಸ್ಥಳಕ್ಕೆ ತೆರಳಿದರು.

Advertisement

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಿಸಿಬಿ ಡಿಸಿಪಿ ಕೆ.ಪಿ. ರವಿಕುಮಾರ್‌, ಬಹಳ ಎಚ್ಚರಿಕೆಯಿಂದ ಪಾರ್ಸೆಲ್‌ ತೆರೆದು ನೋಡಿದಾಗ ಅದರಲ್ಲಿ ಡೆಟೋನೇಟರ್‌ಗೆ ಸಂಪರ್ಕಿಸಿದ ವೈರ್‌ಗಳಿದ್ದು, ಅವುಗಳನ್ನು ಟೈಮ್‌ ತೋರಿಸುತ್ತಿದ್ದ ಬ್ಯಾಟರಿಯೊಂದಕ್ಕೆ ಸಂಪರ್ಕಿಸಲಾಗಿತ್ತು. ಅದನ್ನು ಗಮನಿಸಿದ ರವಿಕುಮಾರ್‌, ವೈರ್‌ಗಳನ್ನು ಕತ್ತರಿಸಿ ಸ್ಫೋಟಕವನ್ನು ನಿಷ್ಕ್ರಿಯಗೊಳಿಸಿದರು. ಕೆಲವೇ ಕ್ಷಣಗಳಲ್ಲಿ ಅಗ್ನಿಶಾಮಕ ಸಿಬಂದಿ, ಶ್ವಾನದಳ ಸಿಬಂದಿ ಆಗಮಿಸಿ ಇಡೀ ಕೋರ್ಟ್‌ ಆವರಣ ಮತ್ತು ನ್ಯಾಯಾಧೀಶರ ಕಾರುಗಳನ್ನು ಪರಿಶೀಲಿಸಿದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಆದರೆ ಪೊಲೀಸ್‌ ಅಧಿಕಾರಿಗಳಿಗೆ ಬಂದ ಪತ್ರದಲ್ಲಿ ಯಾವುದೇ ಸ್ಫೋಟಕ ವಸ್ತುಗಳನ್ನು ಇರಿಸಲಾಗಿಲ್ಲ. ಎರಡು ಪ್ರಕರಣಗಳ ಆರೋಪಿಗಳಿಗೆ ಜಾಮೀನು ಕೊಡಿಸಬೇಕು. ಇಲ್ಲವಾದಲ್ಲಿ ಕೊಲ್ಲುವುದಾಗಿ ಪತ್ರದಲ್ಲಿ ಉಲ್ಲೇಖೀಸಲಾಗಿದೆ.

ಆರೋಪಿ ಬಂಧನಕ್ಕೆ ಸಿಸಿಬಿ ತಂಡ
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದಿಂದ ಬೆದರಿಕೆ ಪತ್ರಗಳು ಬಂದಿದ್ದು, ಆರೋಪಿಗಳ ಬಂಧನಕ್ಕೆ ಸಿಸಿಬಿಯ ಒಂದು ತಂಡ ಚೇಳೂರಿಗೆ ತೆರಳಿದೆ. ಈ ಸಂಬಂಧ ಹಲಸೂರು ಗೇಟ್‌ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್‌ ದಾಖಲಿಸಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ತಪಾಸಣೆ
ಬಾಂಬ್‌ ಬೆದರಿಕೆ ಹಿನ್ನೆಲೆಯಲ್ಲಿ ಸೆಷನ್ಸ್‌ ನ್ಯಾಯಾಲಯ ಮತ್ತು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಕಾಂಪ್ಲೆಕ್ಸ್‌ ಆವರಣ ಮತ್ತು ಪ್ರತೀ ಕೊಠಡಿಯಲ್ಲಿ ಸ್ಫೋಟಕ ವಸ್ತು ಪತ್ತೆಗೆ ಶ್ವಾನದಳ ಪೊಲೀಸರು, ಬಾಂಬ್‌ ನಿಷ್ಕ್ರಿಯ ದಳ ಪೊಲೀಸರು ಮತ್ತು ಸಿಸಿಬಿ ತನಿಖಾಧಿಕಾರಿಗಳು ತೆರಳಿ ತಪಾಸಣೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next