ಬೆಂಗಳೂರು: ರಾಜ್ಯ ರಾಜಧಾನಿ ಒಂದೇ ವಾರದಲ್ಲಿ ಮತ್ತೊಂದು ಭೀಕರ ದೃಶ್ಯಕ್ಕೆ ಸಾಕ್ಷಿಯಾಗಿದೆ. ನಗರದ ನ್ಯೂ ತರಗುಪೇಟೆಯಲ್ಲಿ ಗುರುವಾರ ಸಂಭವಿಸಿದ ಸ್ಫೋಟದಲ್ಲಿ ಮೂವರು ಸಾವನ್ನಪ್ಪಿದ ಘಟನೆ ನಡೆದಿದೆ.
ಘಟನೆಯಲ್ಲಿ ಮೃತರಾದವರನ್ನು ಪಟಾಕಿ ಮಳಿಗೆ ನಡೆಸುತ್ತಿದ್ದ ಫಯಾಜ್ (50 ವ), ಟಾಟಾ ಏಸ್ ಚಾಲಕ ಮನೋಹರ್ (29) ಹಾಗೂ ಪಂಕ್ಚರ್ ಅಂಗಡಿ ಮಾಲಕ ಅಸ್ಲಂ (45) ಎಂದು ವರದಿ ತಿಳಿಸಿದೆ.
ಮನೋಹರ್ ಅವರು ಟಾಟಾ ಏಸ್‌ನಲ್ಲಿ ಪಟಾಕಿ ಬಾಕ್ಸ್‌ಗಳನ್ನು ತಂದಿದ್ದು, ಅದನ್ನು ಮಳಿಗೆಯೊಳಗೆ ಅನ್‌ಲೋಡ್ ಮಾಡಿದ್ದರು. ಮಾಲಕ ಫಯಾಜ್ ಜೊತೆ ಮಾತನಾಡುತ್ತ ನಿಂತಿದ್ದ ಸಂದರ್ಭದಲ್ಲಿ ಸ್ಪೋಟ ಸಂಭವಿಸಿದೆ. ಇಬ್ಬರೂ ಹಾರಿ ಹೊರಗೆ ಬಿದ್ದಿದ್ದಾರೆ. ಸ್ಪೋಟದ ಪರಿಣಾಮ ಅವರಿಬ್ಬರ ದೇಹಗಳು ಛಿದ್ರಗೊಂಡಿವೆ’ ಎಂದು ಪೊಲೀಸರು ತಿಳಿಸಿದರು.
ಇದನ್ನೂ ಓದಿ:‘RSS ಕ್ಯಾನ್ಸರ್ ಇದ್ದಂತೆ’ ಎಂದ ಜಾವೇದ್ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ
‘ಸ್ಫೋಟದ ತೀವ್ರತೆಗೆ ಪಟಾಕಿ ಮಳಿಗೆ ಪಕ್ಕದಲ್ಲಿದ್ದ ಪಂಕ್ಚರ್ ಮಳಿಗೆ ಹಾಗೂ ಚಹಾ ಅಂಗಡಿ ಸಂಪೂರ್ಣ ಸುಟ್ಟು ಹೋಗಿದೆ. ಟಾಟಾ ಏಸ್ ವಾಹನ ಹಾಗೂ 10 ದ್ವಿಚಕ್ರ ವಾಹನಗಳು ನಜ್ಜುಗುಜ್ಜಾಗಿವೆ. ಪಂಕ್ಚರ್ ಅಂಗಡಿಯಲ್ಲಿ ಕುಳಿತಿದ್ದ ಅಸ್ಲಂ ಸಹ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ಫೋಟ ನಡೆದ ಸ್ಥಳಕ್ಕೆ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಭೇಟಿ ನೀಡಿದರು. ಮೃತರ ಕುಟುಂಬಕ್ಕೆ ವೈಯಕ್ತಿಕವಾಗಿ 2 ಲಕ್ಷ ಪರಿಹಾರ ನೀಡುತ್ತೇನೆ. ಸ್ಫೋಟದಲ್ಲಿ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಭರಿಸುತ್ತೇನೆ. ಸರ್ಕಾರ ಸಹ ಪರಿಹಾರ ನೀಡಲಿ ಎಂದರು.