Advertisement

ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸ್ಫೋಟ: ಇಬ್ಬರ ಅಮಾನತು

11:06 PM Oct 26, 2019 | Team Udayavani |

ಹುಬ್ಬಳ್ಳಿ: ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ದೊರೆತ ಅನುಮಾನಾಸ್ಪದ ವಸ್ತು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಸ್ಟೇಷನ್‌ ಮಾಸ್ಟರ್‌ ಹಾಗೂ ಆರ್‌ಪಿಎಫ್‌ ಎಎಸ್‌ಐ ಅವ ರನ್ನು ಅಮಾನತು ಮಾಡಲಾಗಿದೆ ಎಂದು ರೈಲ್ವೆ ಖಾತೆ ಸಹಾಯಕ ಸಚಿವ ಸುರೇಶ ಅಂಗಡಿ ಹೇಳಿದರು.

Advertisement

ಶನಿವಾರ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಘಟನಾ ಸ್ಥಳ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಸ್ಟೇಷನ್‌ ವ್ಯವಸ್ಥಾಪಕ ವರುಣಕುಮಾರ್‌ ದಾಸ ಹಾಗೂ ಆರ್‌ಪಿಎಫ್‌ ಎಎಸ್‌ಐ ಮಂಜುನಾಥ ಕಾಮತ್‌ ಅವರನ್ನು ಅಮಾನತು ಮಾಡಲಾಗಿದೆ. ಮೂರು ದಿನಗಳಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ನೀಡುವಂತೆ ಸೂಚಿಸಿದ್ದೇನೆ ಎಂದರು.

ಸಾರ್ವಜನಿಕರ ಸುರಕ್ಷತಾ ದೃಷ್ಟಿಯಿಂದ ರೈಲ್ವೆ ನಿಲ್ದಾಣಗಳಲ್ಲಿ ಹೆಚ್ಚು ಭದ್ರತೆ ಒದಗಿಸಲಾಗುವುದು. ಹೆಚ್ಚು ಸಿಸಿ ಕ್ಯಾಮರಾ ಅಳವಡಿಸಲಾಗುವುದು. ವಿಮಾನ ನಿಲ್ದಾಣದ ಮಾದರಿಯಂತೆ ಹುಬ್ಬಳ್ಳಿ ಸೇರಿ ಅವಶ್ಯವಿರುವ ರೈಲ್ವೆ ನಿಲ್ದಾಣಗಳಲ್ಲಿಯೂ ವಸ್ತುಗಳ ತಪಾಸಣೆಯ ಸ್ಕ್ಯಾನಿಂಗ್‌ ಯಂತ್ರಗಳನ್ನು ಅಳವಡಿಸಲಾಗುವುದು.

ರೈಲ್ವೆ ನಿಲ್ದಾಣದಲ್ಲಿ ಅನಧಿಕೃತ ವೆಂಡರ್ ಹಾಗೂ ಅನುಮಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಅಂಥವರ ಮೇಲೆ ಕ್ರಮ ಕೈಗೊಳ್ಳಲು ಅ ಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದ್ದೇನೆ ಎಂದರು.ರೈಲ್ವೆ ಇಲಾಖೆಯನ್ನು ಖಾಸಗೀಕರಣ ಮಾಡಲ್ಲ. ಆದರೆ, ಸಾರ್ವಜನಿಕರಿಗೆ ಉತ್ತಮ ಸೌಲಭ್ಯ ನೀಡುವ ನಿಟ್ಟಿನಲ್ಲಿ ಕಾರ್ಪೋರೈಜೇಶನ್‌ ಮಾಡಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ವೆಂಡರ್‌ ಆರೋಗ್ಯ ವಿಚಾರಣೆ: ನಂತರ, ಸ್ಫೋಟದಲ್ಲಿ ಗಾಯಗೊಂಡು ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೆಂಡರ್‌ನನ್ನು ಸಚಿವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಘಟನಾ ದಿನದಂದು ನಡೆದ ಮಾಹಿತಿ ಪಡೆದರು.

Advertisement

ಎಫ್ಎಸ್‌ಎಲ್‌ ವರದಿ ಬಳಿಕ ಸ್ಪಷ್ಟ ಮಾಹಿತಿ
ಹುಬ್ಬಳ್ಳಿ: ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌)ದಿಂದ ವರದಿ ಬರಬೇಕಿದೆ. ಅದು ಬಂದ ಮೇಲೆ ಎಲ್ಲ ಮಾಹಿತಿ ದೊರೆಯಲಿದೆ. ಈಗಲೇ ಯಾವುದೇ ವಿಷಯ ಬಹಿರಂಗಪಡಿಸಲ್ಲ. ಅದರಿಂದ ತನಿಖೆಗೆ ತೊಂದರೆಯಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸ್ಫೋಟ ಘಟನೆಗೆ ಸಂಬಂಧಿಸಿ ಆಂಧ್ರಪ್ರದೇಶ-ಮಹಾರಾಷ್ಟ್ರ ಪೊಲೀಸರ ಜತೆ ಸಂಪರ್ಕದಲ್ಲಿದ್ದೇವೆ. ಅವರ ಸಹಯೋಗದೊಂದಿಗೆ ತನಿಖೆ ನಡೆಯುತ್ತಿದೆ. ಸ್ಫೋಟಕಗಳ ಮೂಲ ಮತ್ತು ಅದನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು ಎನ್ನುವ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next